ಅಂಗನವಾಡಿ ಕಟ್ಟಡಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ: ಸಿಇಒ ಬಿ.ಆರ್.ಪೂರ್ಣಿಮಾ

168
Share

 

ಅಂಗನವಾಡಿ ಕಟ್ಟಡಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ: ಸಿಇಒ ಬಿ.ಆರ್.ಪೂರ್ಣಿಮಾ

ಹೆಚ್.ಡಿ.ಕೋಟೆ, ಜು.30:- ಮಹಾತ್ಮ ಗಾಂಧಿ ನರೇಗಾ ಯೋಜನೆಯ ಒಗ್ಗೂಡಿಸುವಿಕೆಯಡಿ ಕೈಗೊಂಡಿರುವ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಂದು ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ ಅವರು ಪಿಡಿಓಗಳಿಗೆ ಸೂಚಿಸಿದರು.

ಹೆಚ್.ಡಿ.ಕೋಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಹೆಚ್.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕು ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಪ್ರಾರಂಭವಾಗಿರುವ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಎರಡು ತಿಂಗಳೊಳಗೆ ಹಾಗೂ ಪ್ರಾರಂಭವಾಗದ ಕಾಮಗಾರಿಗಳನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು. ಹಣಕಾಸು ಕೊರತೆಯಾದರೆ 15ನೇ ಹಣಕಾಸು ನಿಧಿಯಲ್ಲಿ ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯಗಳಿಗೆ ಸಾರ್ವಜನಿಕರು ಹಾಗೂ ಹಿರಿಯ ನಾಗರೀಕರು ಪತ್ರಿಕೆ ಓದಲು ಬರುವುದನ್ನು ಗಮನಿಸಿದ್ದೇನೆ, ಹಾಗಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ದಿನಪತ್ರಿಕೆಗಳು, ನಿಯತಕಾಲಿಕೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಹಾಕಿಸಬೇಕು. ಶಾಲಾ ಮಕ್ಕಳನ್ನು ಗ್ರಂಥಾಲಯಕ್ಕೆ ನೋಂದಣಿ ಮಾಡಿಕೊಂಡು ಕಾಡ್೯ ನೀಡಲು ಗ್ರಂಥಪಾಲಕರಿಗೆ ತಿಳಿಸಲು ಸೂಚಿಸಿದರು.

ನರೇಗಾ ಕಾಮಗಾರಿಗಳಲ್ಲಿ ಮಾನವ ದಿನಗಳ ಸೃಜನೆ ಕಡಿಮೆ ಇರುವ ಗ್ರಾಮ ಪಂಚಾಯಿತಿಗಳು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಅನುಷ್ಠಾನಿಸಿ ಮಾನವ ದಿನಗಳನ್ನು ಹೆಚ್ಚು ಸೃಜಿಸುವಂತೆ ಸೂಚನೆ ನೀಡಿದರು.

ಅಮೃತ ಸರೋವರ ಕಾಮಗಾರಿಗಳನ್ನು ಆಗಸ್ಟ್ 15ರೊಳಗೆ ಪೂರ್ಣಗೊಳಿಸಿ ಕಾಮಗಾರಿ ಸ್ಥಳಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸುವಂತೆ ಹಾಗೂ ಹರ್ ಘರ್ ತಿರಂಗಾ ಅಂಗವಾಗಿ ಗ್ರಾಮಗಳ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವಂತೆ ತಿಳಿಸಿದರು.

ಗ್ರಾಮ ಪಂಚಾಯತಿ ಕಚೇರಿಗೆ ಪಿಡಿಒಗಳು ನಿಗದಿತ ಸಮಯಕ್ಕೆ ಹಾಜರಾಗದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಬಯೋಮೆಟ್ರಿಕ್ ಕಡ್ಡಾಯವಾಗಿ ಮಾಡತಕ್ಕದ್ದು, ನೆಟ್ ವರ್ಕ್ ಸಮಸ್ಯೆ ಎನ್ನುವವರು ಜಿಪಿಎಸ್ ಫೋಟೋ ಕಳುಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು, ಎಪಿಓ ಕುಲದೀಪ್, ಹೆಚ್.ಡಿ.ಕೋಟೆ ತಾ.ಪಂ.ಆಡಳಿತಾಧಿಕಾರಿ ಶ್ರೀಧರ್, ಸರಗೂರು ತಾ.ಪಂ.ಆಡಳಿತಾಧಿಕಾರಿ ಚಂದ್ರಶೇಖರ್, ಹೆಚ್.ಡಿ.ಕೋಟೆ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಸರಗೂರು ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Share