ಮಹಿಳೆಯರಿಗೆ ಶಕ್ತಿ ತುಂಬುವುದು ಇಂದಿರಾಗಾಂಧಿ ಕನಸು

386
Share

*ಜೂಮ್ ಮೂಲಕ ಬಳ್ಳಾರಿಯ ನಾ ನಾಯಕಿ ಪ್ರಾದೇಶಿಕ ಸಮಾವೇಶ ಉದ್ಘಾಟಿಸಿ ಡಿ.ಕೆ. ಶಿವಕುಮಾರ್ ಆಡಿದ ಮಾತಿನ ಮುಖ್ಯಾಂಶಗಳು:*

*ಬೆಂಗಳೂರು:*

ಮಹಿಳೆಯರಿಗೆ ಶಕ್ತಿ ತುಂಬುವುದು ಶ್ರೀಮತಿ ಇಂದಿರಾ ಗಾಂಧಿ ಅವರ ಕನಸು. ಅವರು ಸದಾ ಅವಕಾಶಗಳನ್ನು ಸೃಷ್ಟಿ ಮಾಡಿಕೊಳ್ಳಬೇಕು ಎಂದು ಹೇಳುತ್ತಿದ್ದರು. ದೇವರು ನಮಗೆ ವರವನ್ನೂ ಕೊಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ. ಅವಕಾಶಗಳನ್ನು ಮಾತ್ರ ನೀಡುತ್ತಾನೆ. ಅವುಗಳನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ.

ತಾಯಿ ಮಗುವಿಗೆ ಜನ್ಮ ನೀಡಿದಾಗ ಆಕೆಯೇ ಆ ಮಗುವಿನ ಮೊದಲ ಗುರು ಆಗುತ್ತಾಳೆ. ಅದೇ ರೀತಿ ಬಳ್ಳಾರಿಯಲ್ಲಿ ಸಾವಿರಾರು ಮಹಿಳೆಯರು ಸೇರಿದ್ದು, ನೀವೆಲ್ಲರೂ ನಾಯಕಿಯರೇ.

ಜೂಮ್ ಮೂಲಕ ಬಳ್ಳಾರಿಯ ನಾ ನಾಯಕಿ ಪ್ರಾದೇಶಿಕ ಸಮಾವೇಶ ಉದ್ಘಾಟಿಸಿ ಡಿ.ಕೆ. ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ

ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ. ದೇವರ ನೆನಪು ಭಕ್ತಿಯ ಮೂಲ. ಮನುಷ್ಯತ್ವ ಮೋಕ್ಷಕ್ಕೆ ಮೂಲ ಎಂಬ ಮಾತಿದೆ. ಅದೇ ರೀತಿ ತಾಯಿಗೆ ಪವಿತ್ರವಾದ ಸ್ಥಾನವಿದೆ. ನಾವು ಎಲ್ಲಿ ಹೋದರೂ ಗ್ರಾಮದೇವತೆಯನ್ನು ನೋಡುತ್ತೇವೆ. ಈ ಭೂಮಿಯನ್ನು ಭೂತಾಯಿ ಎಂದು ಕರೆಯುತ್ತೇವೆ. ಇದೇ ಈ ದೇಶದ ಸಂಸ್ಕೃತಿ, ನಮ್ಮ ಆಸ್ತಿ.

ಯಾರೇ ಆಹ್ವಾನ ಪತ್ರ ಕೊಟ್ಟರೂ ನೇರವಾಗಿ ನನಗೆ ನೀಡುವುದಿಲ್ಲ. ಶ್ರೀಮತಿ ಮತ್ತು ಶ್ರೀ ಡಿ.ಕೆ.ಶಿವಕುಮಾರ್ ಎಂದು ಬರೆದು ಕೊಡುತ್ತಾರೆ. ದೇವತೆಗಳಾದ ವೆಂಕಟೇಶ್ವರನನ್ನು ಲಕ್ಷ್ಮೀ ವೆಂಕಟೇಶ್ವರ, ಶಿವನನ್ನು ಪಾರ್ವತಿ ಪರಮೇಶ್ವರ ಎಂದು ಕರೆಯುತ್ತಾರೆ. ಭೀಷ್ಮನನ್ನು ಗಂಗಾ ಪುತ್ರ, ಕೃಷ್ಣನನ್ನು ದೇವಕಿ ನಂದನ ಎಂದು ಮಹಿಳೆಯರನ್ನು ಮೊದಲು ಉಚ್ಛರಿಸಿ ನಂತರ ಹೆಸರು ಕರೆಯುತ್ತಾರೆ.

ಹೆಣ್ಣು ಮಕ್ಕಳಿಲ್ಲದೇ ಯಾವ ಸಮಾಜವೂ ಉದ್ಧಾರವಾಗಲು ಸಾಧ್ಯವಿಲ್ಲ. ಹೆಣ್ಣಿಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಶಕ್ತಿ ತುಂಬಿದರೆ, ಇಡೀ ಸಮಾಜ ಮುಂದೆ ಬರುತ್ತದೆ. ನೀವೆಲ್ಲರೂ ಮಾನಸಿಕವಾಗಿ ನಾಯಕಿಯರು. ಗಂಡ, ಮಕ್ಕಳು, ಸಹೋದರರನ್ನು ನೋಡಿಕೊಳ್ಳುವ ಶಕ್ತಿ ನಿಮ್ಮಲ್ಲಿ ಅಡಗಿದೆ. ನಿಮಗೆ ಎಲ್ಲ ರೀತಿ ಶಕ್ತಿ ಇದ್ದು, ನೀವುಗಳು ನಮ್ಮ ಮೇಲೆ ಅವಲಂಬಿತರಾಗಬಾರದು.

ಮುಂದಿನ ದಿನಗಳಲ್ಲಿ 224 ಕ್ಷೇತ್ರಗಳಲ್ಲಿ ನೀವೇ ಮಹಿಳೆಯರು ಸೇರಿ ಈ ಕಾರ್ಯಕ್ರಮಗಳನ್ನು ಮಾಡಬೇಕು. ನಿಮ್ಮ ಸಾಮಾಜಿಕ ಸಮಸ್ಯೆ ಚರ್ಚಿಸಲು ಇದೊಂದು ಅವಕಾಶ. ನೀವೇ ಸಮಾಜದ ಎಲ್ಲ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶ್ರೀಮತಿ ಸೋನಿಯಾ ಗಾಂಧಿ ಅವರು 20 ವರ್ಷದ ಹಿಂದೆ ಲೋಕಸಭೆಗೆ ಆಯ್ಕೆಯಾಗಬೇಕಾದಾಗ ಇದೇ ಬಳ್ಳಾರಿ ಮೇಲೆ ವಿಶ್ವಾಸ ಇಟ್ಟು ಸ್ಪರ್ಧಿದ್ದರು. ನೀವು ಅವರನ್ನು ಗೆಲ್ಲಿಸಿ ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಿಕೊಟ್ಟಿದ್ದಿರಿ. ಹೀಗಾಗಿ ಈ ಪುಣ್ಯಭೂಮಿಯಿಂದಲೇ ಈ ಕಾರ್ಯಕ್ರಮ ಆರಂಭಿಸುತ್ತಿದ್ದೇನೆ.

ಕಾಂಗ್ರೆಸ್ ಪಕ್ಷ ನಿಮಗೆ ಏನನ್ನು ನೀಡಬೇಕು? ನಿಮ್ಮ ಸಮಸ್ಯೆಗಳೇನು? ಸದ್ಯದಲ್ಲೇ ಚುನಾವಣೆ ಎದುರಾಗಲಿದ್ದು, ಪ್ರಣಾಳಿಕೆಯಲ್ಲಿ ಏನೆಲ್ಲಾ ವಿಚಾರ ಸೇರಿಸಬೇಕು ಎಂಬ ವಿಚಾರಗಳ ಬಗ್ಗೆ ಚರ್ಚೆ ಮಾಡಿ.

ನಾವು ಮೋಟಮ್ಮನವರ ಅಧ್ಯಕ್ಷತೆಯಲ್ಲಿ ಸ್ತ್ರೀಶಕ್ತಿ ಸಂಘವನ್ನು ಆರಂಭಿಸಿದೆವು. ಆ ಮೂಲಕ ಸಾವಿರಾರು ಸಂಘಗಳು ರಚನೆಯಾದವು. ನಂತರ ಬ್ಯಾಂಕುಗಳು ಇದೇ ವ್ಯವಸ್ಥೆಯನ್ನು ಅಳವಡಿಸಿಕೊಂಡು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿವೆ.

ಮುಂದೆ ಯಾವುದೇ ಸರ್ಕಾರದ ಸೌಲಭ್ಯ ನೀಡುವುದಾದರೆ, ಅದನ್ನು ಆ ಮನೆಯ ಹೆಣ್ಣು ಮಕ್ಕಳ ಹೆಸರಲ್ಲಿ ನೀಡಬೇಕು ಎಂಬ ಆಲೋಚನೆ ಇಟ್ಟುಕೊಂಡಿದ್ದೇವೆ. ಕಳೆದ 7-8 ವರ್ಷಗಳ ಹಿಂದೆ ಕನಕಪುರದಲ್ಲಿ ನಾನು ಸಾವಿರಾರು ನಿವೇಶನಗಳನ್ನು ಹಂಚಿದೆ. ಅದರಲ್ಲಿ ಒಂದು ನಿವೇಶನವನ್ನೂ ಪುರುಷರಿಗೆ ನೀಡಿಲ್ಲ, ಬದಲಿಗೆ ಮಹಿಳೆಯರ ಹೆಸರಿಗೆ ಬರೆದು ಹಂಚಿದ್ದೇನೆ.

ಬಗರ್ ಹುಕುಂ, ಅರಣ್ಯ ಸಾಗುವಳಿ ಜಮೀನು ಸೇರಿದಂತೆ ಮುಂದೆ ಸರ್ಕಾರಿ ಸೌಲಭ್ಯವನ್ನು ಆ ಮನೆಯ ಮಹಿಳೆಯ ಹೆಸರಿಗೆ ನೀಡಬೇಕು ಎಂಬ ಚಿಂತನೆ ಇದೆ. ಇಲ್ಲಿ ಹಳ್ಳಿ ಹೆಣ್ಣು ಮಕ್ಕಳಿಂದ, ನಗರ ಹೆಣ್ಣು ಮಕ್ಕಳವರೆಗೂ ಎಲ್ಲರೂ ತಮ್ಮ ಅಭಿಪ್ರಾಯವನ್ನು ತಿಳಿಸಬೇಕು. ಅದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಿಮ್ಮಲ್ಲಿ ಸಾಕಷ್ಟು ಜನರಿಗೆ ಪ್ರತಿಭೆ ಇದೆ. ಅದನ್ನು ಗುರುತಿಸುವವರು ಬೇಕು. ನಿಮ್ಮಲ್ಲಿರುವ ನಾಯಕತ್ವ ಗುಣ ಗುರುತಿಸಿ ಪ್ರೋತ್ಸಾಹ ನೀಡಲು, ನಿಮ್ಮನ್ನು ನಾಯಕಿಯರನ್ನಾಗಿ ಮಾಡಲು ನಮ್ಮ ನಾಯಕಿಯರು ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ. ಇದು ದೊಡ್ಡ ಆಂದೋಲನವಾಗಲಿದೆ.

ನಮ್ಮ ಹುಟ್ಟು ಆಕಸ್ಮಿಕ, ಜನನ ಉಚಿತ, ಮರಳ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಯಾವ ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ.

ಇದು ಪ್ರಾಯೋಗಿಕ ಕಾರ್ಯಕ್ರಮ ಇಲ್ಲಿ ಉತ್ತಮ ಚರ್ಚೆ ಆಗಬೇಕು. ಗ್ರಾಮೀಣ ಮಹಿಳೆಯರಿಗೆ ಹೆಚ್ಚು ಮಾತನಾಡಲು ಅವಕಾಶ ನೀಡಿ.

ಇಂಗ್ಲೆಂಡ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದ 250 ವರ್ಷಗಳ ನಂತರ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಯಿತು. ಅಮೆರಿಕದಲ್ಲಿ 150 ವರ್ಷಗಳ ನಂತರ ನೀಡಲಾಯಿತು. ಆದರೆ ಭಾರತದಲ್ಲಿ ಸಂವಿಧಾನ ಜಾರಿಯಾದ ಮೊದಲ ದಿನದಿಂದಲೇ ಮಹಿಳೆಗೆ ಮತದಾನದ ಹಕ್ಕು ನೀಡಲಾಯಿತು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಇದ್ದರೂ ನಾಯಕಿಯರಾಗಿ ಬೆಳೆಯುತ್ತಿಲ್ಲ. ನೀವು ನಾಯಕಿಯರಾಗಿ ಬೆಳೆಯಲು ಆತ್ಮಸ್ಥೈರ್ಯ ತುಂಬಬೇಕು.

ಮುಂದೆ ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ಶೇ.50 ರಷ್ಟು ಮೀಸಲಾತಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲ ಪಕ್ಷಗಳ ಪ್ರಾಣಾಳಿಕೆಯಲ್ಲೂ ಇದು ಇದೆ. ಇದು ತಡವಾದರೂ ಆಗುವುದು ನಿಶ್ಚಿತ. ನಾವು ಪ್ರತಿಭಾ ಪಾಟೀಲ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೆವು. ಈಗ ಬಿಜೆಪಿಯವರು ಮಹಿಳೆಯನ್ನು ರಾಷ್ಟ್ರಪತಿ ಮಾಡಲು ಮುಂದಾಗಿದ್ದಾರೆ.

ಅಬ್ದುಲ್ ಕಲಾಂ ಅವರು ಸೋನಿಯಾ ಗಾಂಧಿ ಅವರಿಗೆ ಪ್ರಧಾನಿ ಹುದ್ದೆ ಅಲಂಕರಿಸಲು ಆಹ್ವಾನ ಕೊಟ್ಟರೂ ದೇಶದ ಹಿತದೃಷ್ಟಿಯಿಂದ ಆ ಸ್ಥಾನವನ್ನು ಮನಮೋಹನ್ ಸಿಂಗ್ ಅವರಿಗೆ ತ್ಯಾಗ ಮಾಡಿದರು. ಅಂತಹ ನಾಯಕಿಯ ಕೆಳಗೆ ನಾವು ಕೆಲಸ ಮಾಡುತ್ತಿದ್ದೇವೆ. ಅವರಿಗೆ ಸಾಕಷ್ಟು ಕಿರುಕುಳ ಆಗುತ್ತಿದ್ದು, ಆ ಬಗ್ಗೆ ಬೇರೆ ಸಮಯದಲ್ಲಿ ಚರ್ಚೆ ಮಾಡುತ್ತೇನೆ.

ನೀವೆಲ್ಲರೂ ನಾಯಕಿಯರು, ಯಾವುದರಲ್ಲೂ ಕಮ್ಮಿ ಇಲ್ಲ, ನಿಮ್ಮಲ್ಲೂ ಶಕ್ತಿ, ಸಾಮರ್ಥ್ಯವಿದೆ. ನೀವು ನಿಮ್ಮ ಮನೆ, ಊರು, ಸಮಾಜವನ್ನು ನಿಭಾಯಿಸಲು ಸಮರ್ಥರಿದ್ದೀರಿ. ಈ ಹಿನ್ನೆಲೆಯಲ್ಲಿ ನೀವು ನಿಮ್ಮ ಪ್ರಯತ್ನ ಮಾಡಿ.


Share