ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲವಿದ್ದರೆ ಯಶಸ್ಸು ಖಂಡಿತ

321
Share

 

 

ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲವಿದ್ದರೆ ಖಂಡಿತ ನಿಮ್ಮ ಮನೆಯ ಬಾಗಿಲಿಗೇ ಯಶಸ್ಸು ಬರಲಿದೆ. ಆತ್ಮವಿಶ್ವಾಸವಿದ್ದಲ್ಲಿ ಜಗತ್ತನ್ನೇ ಗೆಲ್ಲಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು*

ಅವರು ಇಂದು ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾದ ಯುವಜನಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಮೈಸೂರು ಮಾನಸಗಂಗೋತ್ರಿಯಲ್ಲಿರುವ ಶಕ್ತಿ ಇಂದು ಇಡೀ ಭಾರತ ದೇಶಕ್ಕೆ ಕೇಳಿಸಿದೆ. ಇಂದು ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ನಿಮ್ಮೆಲ್ಲರನ್ನೂ ನೋಡಿ ಸಂತೋಷ ಇಮ್ಮಡಿಯಾಗಿದೆ. ನನ್ನ ಶಕ್ತಿ ಇಮ್ಮಡಿಯಾಗಿದೆ ಎಂದರು. ಇಲ್ಲಿರುವ ಯುವ ಶಕ್ತಿಯನ್ನು ಸದುಪಯೋಗ ಮಾಡಿಕೊಂಡರೆ ಮುಂದಿನ 25ವರ್ಷದಲ್ಲಿ ಭಾರತವನ್ನು ಶ್ರೇಷ್ಠ ಭಾರತ ಮಾಡಿ ಇಡೀ ವಿಶ್ವದಲ್ಲಿಯೇ ಭಾರತವನ್ನು ನಂಬರ್ ವನ್ ದೇಶ ಮಾಡಲು ನಮಗೆ ಶಕ್ತಿಯಾಗಿ ನೀವಿದ್ದೀರಿ ಎಂಬ ಭರವಸೆ ಮೂಡಿದೆ ಎಂದರು.

ನಾವೆಲ್ಲರೂ ಸ್ವಾತಂತ್ರ್ಯಾನಂತರದ ಪೀಳಿಗೆ. ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿಲ್ಲ. ಬಹಳ ಹೋರಾಟ, ಮಹಾನ್ ರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಅನಾಮಧೇಯ ಹೋರಾಟಗಾರರು ತಮ್ಮ ಪ್ರಾಣತ್ಯಾಗ ಬಲಿದಾನ ಮಾಡಿದ್ದಾರೆ. ಸಾಧಿಸಬೇಕಾದದ್ದು ಇನ್ನೂ ಇದೆ. ನಾವೆಲ್ಲ ಸುದೈವಿಗಳು. ಮೈಸೂರು ಮಹಾರಾಜರ ಕಾಲದಲ್ಲಿ ಅಭಿವೃದ್ಧಿಯ ಪರ್ವವನ್ನು ಕಂಡಿದ್ದೇವೆ. ಉತ್ತರ ಕರ್ನಾಟಕದಲ್ಲಿ ಇನ್ನೂ ಅಭಿವೃದ್ಧಿಯಾಗಬೇಕಿದೆ. ಅದಕ್ಕಾಗಿ ನಾವು ಕಂಕಣಬದ್ಧರಾಗಿ ನಿಂತಿದ್ದೇವೆ. ಅಂದರೆ ನಾವೆಲ್ಲ ಒಗ್ಗಟ್ಟಿನಿಂದ ಒಂದಾಗಿ ಯುವ ಶಕ್ತಿಯನ್ನು ಭಾರತ ಕಟ್ಟಲು ಶ್ರಮಿಸಬೇಕಿದೆ. ಆಹಾರದಲ್ಲಿ ಸ್ವಾವಲಂಬಿ ಆಗುತ್ತಾರೆ ಆ ದೇಶ ಸ್ವಾಭಿಮಾನಿಯಾಗುತ್ತದೆ ಆ ರೈತನಿಗೆ, ಯೋಧರಿಗೆ, ದುಡಿಯುವ ವರ್ಗಕ್ಕೆ ನಮ್ಮ ನಮಸ್ಕಾರ. ಕರ್ನಾಟಕವನ್ನು ನಾವು ನವ ಕರ್ನಾಟಕವಾಗಬೇಕು. ನವಕರ್ನಾಟಕದಿಂದ ನವ ಭಾರತವಾಗಬೇಕು. ದೇಶವನ್ನು ಕಟ್ಟುವವರು ನೀವು. ನಿಮ್ಮ ಭವಿಷ್ಯದ ಜೊತೆ ಈ ದೇಶದ ಭವಿಷ್ಯವನ್ನು ಕಟ್ಟುವವರು ನೀವು ಎಂದು ಕಿವಿಮಾತು ಹೇಳಿದರು.

ವಿಶೇಷವಾದ ಕೈಗಾರಿಕೆಗಳು ಮೈಸೂರಿಗೆ ಬರಲಿದೆ. ಮೈಸೂರು ಬರುವಂತಹ ದಿನಗಳಲ್ಲಿ ಮಹತ್ವದ ಕೇಂದ್ರವಾಗಲಿದೆ. ಇದೇ ವರ್ಷ ಒಂದು ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ನಿರ್ಮಾಣವಾಗಲಿದೆ ಎಂದರು.

ನಮ್ಮ ಕೈಲಿರುವ ಧ್ವಜಗಳು ನಿಮ್ಮ ಹಾಸ್ಟೇಲ್ ಗಳ ಮೇಲೆ, ಮನೆಗಳ ಮೇಲೆ ಹಾರಿಸಬೇಕು. ಸ್ವತಂತ್ರ ನಮ್ಮದು, ದೇಶ ನಮ್ಮದು, ಇದರ ಭವಿಷ್ಯ ನಮ್ಮ ಜವಾಬ್ದಾರಿ. ಯಶ್ ಅವರು ಯುವಕರ ಐಕಾನ್. ಯುವಕರು ಹಾಗೂ ಯುವತಿಯರ ಪ್ರತಿನಿಧಿ. ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ್ದಾರೆ. ಸಿನಿಮಾ ಅಷ್ಟೇ ಅಲ್ಲ. ಸ್ಟಾರ್ಟ್ ಅಪ್ ಕೂಡ ಮಾಡಿದ್ದಾರೆ. ಅವರ ಯಶ್ ಹೆಸರಿನಲ್ಲಿ ಯಶಸ್ಸು ಇದೆ. ಹೆಸರಿಗೆ ತಕ್ಕ ಹಾಗೆ ಯಶಸ್ವಿಯಾಗಿದ್ದಾರೆ. ನೀವು ಕೂಡ ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಸ್ವಾಮಿ ವಿವೇಕಾನಂದರು ನಮಗೆ ಪ್ರೇರಣೆ. ನಿಮ್ಮ ಮನಸ್ಸಿನಲ್ಲಿ ಗಟ್ಟಿಯಾಗಿ ತೀರ್ಮಾನ ಮಾಡಿ ಸಾಧಿಸುವ ಛಲವಿದ್ದರೆ ಖಂಡಿತ ನಿಮ್ಮ ಮನೆಯ ಬಾಗಿಲಿಗೆ ಯಶಸ್ಸು ಬರಲಿದೆ ಎಂದು ಮೌಂಟ್ ಎವರೆಸ್ಟ್ ಹತ್ತಿದ ತೇನಸಿಂಗ್ ನ ಉದಾಹರಣೆ ನೀಡಿದರು. ನಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುತ್ತೇವೆ ಎಂದು ತೀರ್ಮಾನ ಮಾಡಿ. ಆತ್ಮವಿಶ್ವಾಸವಿದ್ದಲ್ಲಿ ಜಗತ್ತನ್ನೇ ಗೆಲ್ಲಬಹುದು. ಆಕಾಶಕ್ಕೆ ಹಾರಿ, ಭಾರತ ಧ್ವಜವನ್ನು ಆಕಾಶದೆತ್ತರಕ್ಕೆ ಹಿಡಿಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ರಾಕಿಂಗ್ ಸ್ಟಾರ್ ಯಶ್ ಮಾತನಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಖುಷಿ ಇದೆ. ನಮ್ಮೂರು, ನಮ್ಮೋರು ವಿದ್ಯಾರ್ಥಿಗಳು. ದೇಶದ ಧ್ವಜ ನಾವೆಲ್ಲರೂ ಬಹಳ ಹೆಮ್ಮೆಯಿಂದ ಹಿಡಿಯುವ ಕಾರ್ಯಕ್ರಮ. ವಿದ್ಯಾರ್ಥಿಗಳು ಯಾವಾಗ ನಮಗೆ ಸಿಗುತ್ತಾರೋ ಆಗೆಲ್ಲ ಮಾತಾಡೋದಕ್ಕೆ ಆಸೆ. ನಾನು ವಿದ್ಯಾರ್ಥಿ ಜೀವನದಲ್ಲಿ ಯಾಮಾರಿ ಖಂಡಿತವಾಗಿ ತಂದೆ ತಾಯಿ ಖುಷಿಯಾಗುವ ರೀತಿಯಲ್ಲಿ ಇರಲಿಲ್ಲ. ಬೇಜವಾಬ್ದಾರಿಯಿಂದ ಸ್ಟಂಟ್ ಮಾಡಿಕೊಂಡು ಪಡುವಾರಹಳ್ಳಿ, ಗಂಗೋತ್ರಿಯಲ್ಲಿರುತ್ತಿದ್ದೆ. ಇಂದು ಅದೇ ಊರಲ್ಲಿ ನನ್ನನ್ನು ಪ್ರೀತಿಸುವ ಅವಕಾಶ ಸಿಕ್ಕಿದೆ. ಸಾಮಾನ್ಯ ಬದಲಾವಣೆಯೇ ಮನುಷ್ಯನನ್ನು ಬದಲಾಯಿಸತ್ತೆ. ಸಾಮಾನ್ಯ, ಸಾಮಾನ್ಯ ವಿಷಯಗಳಿಂದಲೇ ಮನುಷ್ಯ ಏನನ್ನಾದರೂ ಸಾಧಿಸಬಹುದು. ಆತ್ಮವಿಶ್ವಾಸವಿರಬೇಕು. ಸಕಾರಾತ್ಮಕ ಶಕ್ತಿಗಳಿಂದಲೇ ಮುನ್ನುಗ್ಗಬೇಕು. ಒಳ್ಳೆಯದು ಮಾಡುತ್ತೇವೆ ಎನ್ನುವುದನ್ನು ಯೋಚಿಸಿ ಆಗ ಎಲ್ಲವೂ ಸಿಗತ್ತೆ ಎಂದು ಸಲಹೆ ನೀಡಿದರು.

ಹಿಂದೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರನ್ನು ಸ್ಮರಿಸೋಣ, ನಮ್ಮಲ್ಲೂ ಒಂದು ಸರ್ಕಾರ ಹುಟ್ಟಬೇಕು. ನಾವೇ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳಬೇಕು. ಯಾರು ಎಲ್ಲಿಂದ ಏನು ಬೇಕಾದರೂ ಸಾಧಿಸಬಹುದು. ಸರ್ಕಾರದ ಯೋಜನೆಯನ್ನು ಸರಿಯಾಗಿ ತಿಳಿದುಕೊಳ್ಳಿ. ಅದರ ಸದುಪಯೋಗಪಡಿಸಿಕೊಳ್ಳಿ, ಜೀವನದಲ್ಲಿ ತುಂಬಾ ಸೀರಿಯಸ್ ಆಗಿ ಇರಬೇಡಿ, ನಗು, ತಮಾಷೆಗಳು ಇರಲಿ ಎಂದು ಕಿ ವಿಮಾತು ಹೇಳಿದರು. ಮುಖ್ಯಮಂತ್ರಿಗಳು ಪಟ್ ಅಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದು ಅತ್ಯಂತ ಮಹತ್ವದ್ದು. ಹೊರಗಡೆ ಸಾವಿರ ನಡೆಯಬಹುದು. ಕೆಲಸ ಮಾಡುತ್ತಾ ಮುನ್ನುಗ್ಗಿ ಎಂದು ಜನಪ್ರತಿನಿಧಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳು, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ ಮತ್ತಿತರರು ಉಪಸ್ಥಿತರಿದ್ದರು.


Share