ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 46

258
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 46

ಓಂ ನಮೋ ಹನುಮತೇ ನಮಃ

ಮೈನಾಕ ವಿಜಯ
376) ಆದರೆ ಅಪಾರವಾದ ಏಕಾಗ್ರತೆಯಿಂದ, ಅನನ್ಯ ವೇಗದಿಂದ ಮುಂದಕ್ಕೆ ಸಾಗುತ್ತಿದ್ದ ಹನುಮಂತನು ಇದ್ದಕ್ಕಿದ್ದಂತೆ ನೀರನ್ನು ಸೀಳಿಕೊಂಡು ಬರುತ್ತಿದ ನೂರಾರು ಬೆಟ್ಟಗಳ ಶೃಂಗಗಳನ್ನು ನೋಡಿದ. ಅವನಿಗೆ ಕೋಪ ಬಂತು. ನೋಡುತ್ತಲೇ ಅವು ಬೆಳೆದು ಬೆಳೆದು ಮೇಘ ಮಂಡಲವನ್ನು ದಾಟಿ ತನ್ನದಾರಿಗೆ ಅಡ್ಡವಾಗುವ ಮಟ್ಟಕ್ಕೆ ಬೆಳೆದವು. “ಇದೇನೋ ವಿಘ್ನ ಬರುತ್ತಿದೆಯಲ್ಲಪ್ಪಾ!” ಎಂದುಕೊಂಡ. ಕೋಪ ಇನ್ನಷ್ಟು ಹೆಚ್ಚಿತು.
377) ಹನುಮಂತ ತನ್ನ ವೇಗವನ್ನು ಹೆಚ್ಚಿಸಿದ. ಬೆಳೆಯುತ್ತಲೇ ಇದ್ದ ಆ ಪರ್ವತ ಶಿಖರಗಳಿಗೆ ತನ್ನ ಎದೆಯಿಂದ ಢಿಕ್ಕಿ ಹೊಡೆದ.
378) ಆಗ ಮೈನಾಕನಿಗೆ ಹನುಮಂತನ ಬಲದ ಪರಿಚಯ ಆಯಿತು. ಬೆಳೆಯುವುದನ್ನು ನಿಲ್ಲಿಸಿ, ಆ ಶಿಖರಗಳ ಮೇಲೇ ಮಾನವಾಕಾರದಲ್ಲಿ ನಿಂತು, ಕೈಗಳನ್ನು ಜೋಡಿಸಿ ನಮಸ್ಕರಿಸಿ, ಸ್ವಾಗತಮುದ್ರೆಯನ್ನು ತೋರಿಸುತ್ತಾ ಹೇಳಿದ.
1. ಭಲೇ ಹನುಮ! ಭಲೆ ಭಲೆ
2. ನಿನ್ನ ಶರೀರ ಬಲ, ಯೋಗಬಲ – ಎರಡೂ ಅತ್ಯದ್ಭುತ.
3. ಕಾರ್ಯಾರ್ಥ ಹೋಗುತ್ತಿದ್ದ ನಿನಗೆ ಸಹಾಯ ಮಾಡುವಂತೆ ಸಾಗರನು ನನ್ನನ್ನು ನಿನ್ನ ಬಳಿ ಕಳಿಸಿದ.
4. ನಾವು ರಾಮ ಭಕ್ತರು, ನಿನ್ನ ಹಿತೈಷಿಗಳು, ಸ್ನೇಹಿತರು.
5. ಒಂದೇ ಒಂದು ಸಾರಿ ನನ್ನ ಮೇಲೆ ವಿಶ್ರಮಿಸಿ, ಪುನಃ ಪ್ರಾಣಾಯಾಮ ಮಾಡಿ ಪ್ರಯಾಣವನ್ನು ಮುಂದುವರೆಸಿದರೆ ಕೆಲಸ ಸ್ವಲ್ಪ ಹಗುರವಾಗುತ್ತದೆ.
6. ಸಾಗರದೇವನನ್ನು ಹಿಂದೆ ಶ್ರೀರಾಮನ ಪೂರ್ವಿಕರಾದ ಸಗರ ಪುತ್ರರು ವೃದ್ಧಿಪಡಿಸಿ ಪೋಷಿಸಿದ್ದರು. ಆದ್ದರಿಂದ
ಆ ವಂಶ ಎಂದರೆ, ರಾಮ ಎಂದರೆ, ಸಾಗರ ದೇವನಿಗೆ ಎಲ್ಲಿಲ್ಲದ ಪ್ರೀತಿ, ಆದರ.
7. ನೀನು ನನ್ನ ಮೇಲಿಳಿದು ಸ್ವಲ್ಪ ಸುಧಾರಿಸಿಕೊಂಡರೆ ಸಾಗರದೇವನೂ ಸಂತೋಷಪಡುತ್ತಾನೆ, ನಿನ್ನ ಕೆಲಸವೂ ಸ್ವಲ್ಪ ಹಗುರವಾಗಿ, ವಿಜಯವು ನಿಶ್ಚಿತವಾಗುತ್ತದೆ.
8. ನನ್ನ ಸ್ನೇಹಪೂರ್ವಕ ಆಹ್ವಾನವನ್ನು ಮನ್ನಿಸು.
379) ಈ ಮಾತುಗಳನ್ನು ಕೇಳಿ ಹನುಮಂತನು ಸಂತೋಷಗೊಂಡು ಹೀಗೆ ಹೇಳಿದ.
1. ಮೈನಾಕ! ನಿನ್ನ ಸ್ನೇಹದಿಂದ ನನಗೆ ತುಂಬಾ ಸಂತೋಷವಾಗಿದೆ. ಸಾಗರ ದೇವನ ಪ್ರೀತಿಯೂ ನನಗೆ ಸಂತೋಷ ಉಂಟುಮಾಡಿದೆ.
2. ಆದರೆ ನಾನು ಮಧ್ಯದಲ್ಲಿ ನಿಲ್ಲುವಂತಿಲ್ಲ. ಮಧ್ಯದಲ್ಲಿ ನಿಲ್ಲದೇ ರಾಮಬಾಣದಂತೆ ಹೋಗುತ್ತೇನೆಂದು ವಾನರವೀರರ ಹತ್ತಿರ ಪ್ರತಿಜ್ಞೆ ಮಾಡಿ ಬಂದಿದ್ದೇನೆ.
3. ಅಷ್ಟೇ ಅಲ್ಲದೇ ಸೂರ್ಯಾಸ್ತ ಆಗುವುದರೊಳಗೆ ಲಂಕೆಯನ್ನು ತಲುಪಬೇಕಾಗಿದೆ.
4. ನೀನು ಅನ್ಯಥಾ ಭಾವಿಸಬೇಡ. ನಿನ್ನ ಮಧುರವಾದ ಮಾತುಗಳಿಂದ ನಿನ್ನ ಆತಿಥ್ಯವನ್ನು ಸ್ವೀಕರಿಸಿದಂತೆಯೇ ಎಂದು ನಾನು ಭಾವಿಸುತ್ತೇನೆ. ನಾನು ಸ್ವೀಕರಿಸಿದ್ದೇನೆಂದೇ ನೀನೂ ಭಾವಿಸಿ ನನಗೆ ಪ್ರೀತಿಯಿಂದ ಅನುಮತಿ ಕೊಡು.
380) ಹೀಗೆ ಹೇಳುತ್ತಾ ಹನುಮಂತನು ಬಲಗೈಯಿಂದ ಮೈನಾಕ ಶಿಖರಗಳನ್ನು ಒಂದು ಸಲ ಮುಟ್ಟಿ, ನಿಲ್ಲದೇ ಬಿರುಗಾಳಿಯಂತೆ ಮುಂದೆ ಹಾರಿಹೋದ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು

Share