ಮೈಸೂರು ,ಅತಿಥಿ ಉಪನ್ಯಾಸಕರು/ಅತಿಥಿ ಶಿಕ್ಷಕರ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಿ ಮತ್ತು ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರು/ಅತಿಥಿ ಶಿಕ್ಷಕರ ಹೋರಾಟ ಸಮಿತಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ರಾಜ್ಯದಲ್ಲಿರುವ 413 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564ಅತಿಥಿ ಉಪನ್ಯಾಸಕರು ದುಡಿಯುತ್ತಿದ್ದಾರೆ. 2019ರ ಜುಲೈ ನಲ್ಲಿ 10ಮತ್ತು 12ನೇ ತರಗತಿಗಳಿಗೆ ಪಾಠ ಮಾಡಲು 22,150ಅತಿಥಿ ಶಿಕ್ಷಕರ ಅಗತ್ಯವನ್ನು ತೋರಿಸಲಾಗಿತ್ತು. ಸಾವಿರಾರು ಶಿಕ್ಷಕರು ರಾಜ್ಯದೆಲ್ಲೆಡೆ ದುಡಿಯುತ್ತಿದ್ದಾರೆ. ಈಗಂತೂ ತಮ್ಮ ಕೈಯಿಂದಲೇ ಖರ್ಚನ್ನು ಭರಿಸುತ್ತ ಆನ್ ಲೈನ್ ತರಗತಿಗಳನ್ನು ಕೂಡ ನಿಭಾಯಿಸುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಲಾಕ್ ಡೌನ್ ಬಂದು ಅತಿಥಿ ಉಪನ್ಯಾಸಕರು ಅತಿಥಿ ಶಿಕ್ಷಕರ ಸಮಸ್ಯೆ ಉಲ್ಬಣಗೊಂಡಿದೆ. ಇವತ್ತಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಅವರಿಗೆ ನೀಡಲಾಗುತ್ತಿರುವ ಸಂಬಳವು ಯಾವ ಮೂಲೆಗೂ ಸಾಕಾಗುತ್ತಿಲ್ಲ. ಹಿಂದಿನಿಂದಲೂ ಸಹ ಸರ್ಕಾರಗಳು ಇವರಿಗೆ ವೇತನದಲ್ಲಿ ತಾರತಮ್ಯ ಮಾಡುತ್ತಾ ಬಂದಿದ್ದವು. ಸಂಬಳ ಸರಿಯಾದ ಮಸಯಕ್ಕೆ ಬಂದಿಲ್ಲ. ಯಾವುದೇ ಕಾರಣಕ್ಕೂ ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಸಂಬಳವನ್ನು ನಿಲ್ಲಿಸಬಾರದು ಎಂದಿರುವ ಸರ್ಕಾರ ಅತಿಥಿ ಉಪನ್ಯಾಸಕರನ್ನು ಹೀನಾಯ ಸ್ಥಿತಿಗೆ ದೂಡುವುದು ಸರಿಯಲ್ಲ. ಸರ್ಕಾರವೇ ಖಾಸಗಿ ವಲಯಕ್ಕೆ ಮಾದರಿಯಾಗಬೇಕು. ಆದರೆ ಸರ್ಕಾರ ಶಾಲಾ ಕಾಲೇಜುಗಳಲ್ಲಿ ದುಡಿಯುತ್ತಿರುವ ಅತಿಥಿ ಶಿಕ್ಷಕರು ಅತಿಥಿ ಉಪನ್ಯಾಸಕರಿಗೆ ಮಾರ್ಚ್ 24ರಿಂದ ಇಲ್ಲಿಯವರೆಗೆ ಸಂಬಳ ನೀಡಿಲ್ಲ. ಲಾಕ್ ಡೌನ್ ಮುಂಚಿನಿಂದಲೂ ಜೀವನ ಸಂಕಷ್ಟಮಯವಾಗಿದೆ. ಕೋವಿಡ್ 19ಸಂದರ್ಭ ಮತ್ತಷ್ಟು ಬಿಗಡಾಯಿಸಿದೆ ಎಂದು ಅಳಲು ತೋಡಿಕೊಂಡರು.
ದೇಶದ ಆಸ್ತಿಯಾಗಿರುವ ವಿದ್ಯಾರ್ಥಿಗಳಿಗೆ ಬೋಧಿಸುವ ಶಿಕ್ಷಕರು ಉಪನ್ಯಾಸಕರು ಇಂತಹ ಅಸಹಾಯಕ ಪರಿಸ್ಥಿತಿಗೆ ಗುರಿಯಾಗಿರುವುದರ ಕುರಿತು ಸರ್ಕಾರ ಕಾಳಜಿಯಿಂದ ನೋಡಬೇಕು. ಕೂಡಲೇ ಸರ್ಕಾರ ವಿಶೇಷ ಅನುದಾನವನ್ನು ಘೋಷಿಸಬೇಕು. ಬಾಕಿ ಇರುವ ಹಣವನ್ನು ಒಂದೇ ಬಾರಿಗೆ ಈ ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.
ವಿವಿಧ ಕ್ಷೇತ್ರಗಳಿಗೆ ನೀಡುವಂತೆ ಅತಿಥಿ ಉಪನ್ಯಾಸಕರು ಮತ್ತು ಅತಿಥಿ ಶಿಕ್ಷಕ ವೃಂದದವರಿಗೂ ಕನಿಷ್ಠಪಕ್ಷ ಒಂದು ಬಾರಿಯಾದರೂ ಪರಿಹಾರದ ಪ್ಯಾಕೇಜ್ ನ್ನು ಘೋಷಿಸಬೇಕು. ಖಾಲಿ ಇರುವ ಹುದ್ದೆಗಳ ಶಿಕ್ಷಕರನ್ನು ಮತ್ತು ಉಪನ್ಯಾಸಕರನ್ನು ನೇಮಿಸುವ ಪ್ರಕ್ರಿಯೆಯನ್ನು ಕೂಡಲೇ ನಡೆಸಬೇಕು. ಇಲ್ಲಿಯವರೆಗೆ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರ ಬಾಕಿ ಉಳಿದಿರುವ ಎಲ್ಲಾ ವೇತನವನ್ನು ಈ ಕೂಡಲೇ ಪಾವತಿಸಿ, ಎಲ್ಲಾ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ಸೇವಾ ಭದ್ರತೆಯನ್ನು ಒದಗಿಸಿ, ನೇಮಕಾತಿಯಲ್ಲಿ ಪ್ರಥಮ ಆದ್ಯತೆ ನೀಡಿ, ಕೊರೋನಾ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎವೈಡಿವೈಒ ಕಾರ್ಯದರ್ಶಿ ಸುನಿಲ್ ಟಿ.ಆರ್, ಅಧ್ಯಕ್ಷ ಹರೀಶ್, ರಾಜ್ಯಾಧ್ಯಕ್ಷೆ ಎಂ.ಉಮಾದೇವಿ, ಕದೇವಿ, ಕಲಾವತಿ, ಮಹದೇವಯ್ಯ, ರಾಮಣ್ಣ, ಸೋನಿ, ಹನುಮಂತೇಶ್ ಮತ್ತಿತರರು ಪಾಲ್ಗೊಂಡಿದ್ದರು.