ಅಸ್ತಂಗತನಾದ ಗಾನ ಸೂರ್ಯ ಎಸ್ಪಿಬಿ

Share

ಅಸ್ತಂಗತನಾದ ಗಾನ ಸೂರ್ಯ

ಸಂಗೀತ ಸಾಮ್ರಾಜ್ಯದ ಚಕ್ರವರ್ತಿಯೇ,
ಸುಮಧುರ ಸ್ವರ ಪ್ರಪಂಚದ ಅಧಿಪತಿಯೇ,
ಸಂಗೀತ ಲೋಕದ ಸಾರ್ವಭೌಮರೇ,
ಕೋಗಿಲೆಯ ಗಾಯನ ವಸಂತಮಾಸದಲ್ಲಿ ಮಾತ್ರ,
ಮಯೂರದ ನರ್ತನ ಇಳೆ ಮಳೆಯಲ್ಲಿ ಮಿಂದಾಗ ಮಾತ್ರ,
ಇಂದ್ರಚಾಪ ಮೂಡುವುದು ವರುಣನಾಗಮನದ ನಂತರ,
ನಿಮ್ಮಯ ಗಾಯನ ನಿರಂತರ, ನಿತ್ಯ ನೂತನ || ೧ ||

ನಿಮ್ಮಯ ಸಾಧನೆಗೆ ತಂದೆಯೇ ಪ್ರೇರಣೆ,ಗುರುಹಿರಿಯರೇ ಪ್ರೇರೇಪಣೆ,
ನಿಮಗೆ ನೀವೇ ಸಾಟಿ ಸರಿಸಮಾನರು ನಿಮಗಿಲ್ಲ,
ನಟನೆಗೂ ಸೈ, ಸಂಗೀತಕ್ಕೂ ಸೈ,
ಹದಿನಾರು ಭಾಷೆಗಳಲ್ಲಿ ಹಾಡಿದ ಗಾನ ಗಾರುಡಿಗ
‘ನವರಸಗಳ ಸಮಾಗಮ’ ನಿಮ್ಮಯ ಹಾಡು || ೨ ||

ನಿಮ್ಮಯ ಹಾಡಿನಲ್ಲಿ ಮಗುವಿನ ಮುಗ್ದತೆಯಿದೆ,
ನಿಮ್ಮಯ ಹಾಡಿನಲ್ಲಿ ಮಾತೆಯ ಮಮತೆಯ ವಾತ್ಸಲ್ಯವಿದೆ,
ನಿಮ್ಮಯ ಹಾಡಿನಲ್ಲಿ ಕರುಣೆ – ತ್ಯಾಗಗಳು ಮೇಳೈಸಿವೆ,
ನಿಮ್ಮಯ ಹಾಡಿನಲ್ಲಿ ಪ್ರೀತಿಯ ಜಲಧಾರೆ ಧುಮ್ಮಿಕ್ಕಿ ಹರಿದಿದೆ,
ನಿಮ್ಮಯ ಹಾಡಿನಲ್ಲಿ ಭಕ್ತಿ ಭಾವಗಳ ಹೊನಲು ಉಕ್ಕಿ ಹರಿದಿದೆ || ೩ ||

ವಿವಿಧ ಭಾಷೆಗಳ ಪರಿಧಿಯಲ್ಲಿ ಹಾಡಿದ ಏಕೈಕ ವ್ಯಕ್ತಿ ನೀವೊಬ್ಬರೇ,
ನಿಮ್ಮ ಅಮೋಘ ಸಾಧನೆಗೆ ಲಭಿಸಿದೆ ಗೌರವ ಸನ್ಮಾನಗಳ ಸುರಿಮಳೆ,
ನೂರಾರು ಪ್ರಶಸ್ತಿಗಳ ಸರದಾರರು ನೀವು,
ಭಾರತಮಾತೆಯ ಹೆಮ್ಮೆಯ ಸುಪುತ್ರರು ನೀವು,
ನಾಡು-ನುಡಿಯ ಕುರಿತು ನಿಮಗಿಹುದು ಅಪಾರ ಅಭಿಮಾನ,
ನಿಮಗಿರುವವರು ಅಭಿಮಾನಿಗಳ ಮಹಾಪೂರ || ೪ ||

ಸಹಿಸಲಿಲ್ಲ ಭಗವಂತ ನಿಮ್ಮ ಇರುವಿಕೆಯ ಈ ಭುವಿಯ ಮೇಲೆ,
ಫಲಿಸಲಿಲ್ಲ ದೇಶದ ಜನರ ಪ್ರಾರ್ಥನೆ,
ತಬ್ಬಲಿಯಾಯಿತು ಭಾರತೀಯ ಸಂಗೀತ ಲೋಕ,
ಕೋಟ್ಯಾಂತರ ಅಭಿಮಾನಿಗಳ ತೊರೆದು ಹೋಗಿರುವಿರಿ ಬಾರದ ಲೋಕಕ್ಕೆ ನೀವು,
ನಮ್ಮ ದೇಶಕಂಡ ಅಪ್ರತಿಮ ಅದ್ವಿತೀಯ ಸಂಗೀತಗಾರರು ನೀವು,
ಮತ್ತೊಮ್ಮೆ ನಮ್ಮ ನಾಡಿನಲ್ಲಿ ಮರು ಜನ್ಮ ಪಡೆದು ಬನ್ನಿ,
ನೀವ್ ಅಳಿದರು ನಿಮ್ಮ ಗಾಯನ, ನಿಮ್ಮ ಹೆಸರು
ಈ ಜಗವಿರುವವರೆಗೂ ಅಮರ, ಚಿರನೂತನ || ೫ ||

ರಚನೆ ಶ್ರೀಮತಿ ಆಶಾಲತ ವ್ಯವಸ್ಥಾಪಕಿ, ಎಂ ಡಿ ಸಿ ಸಿ ಬ್ಯಾಂಕ್ ಮದ್ದೂರು


Share