ಆರು ಪ್ರಸ್ತಾವನೆಗಳಲ್ಲಿ ಒಂದಕ್ಕೆ ಮುಖ್ಯ ಮಂತ್ರಿಗಳು ಅನುಮೋದನೆ

ಬೆಂಗಳೂರು, ಆಗಸ್ಟ್ 21 :ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐ.ಟಿ ಬಿಟಿ ಇಲಾಖೆಗಳ ಪ್ರಮುಖ ವಿಷಯಗಳ ಬಗ್ಗೆ ಸಭೆ ಜರುಗಿತು.

ತಾಲ್ಲೂಕು ಪಂಚಾಯತ್ ಕ್ಷೇತ್ರ ಮರು ವಿಂಗಡನೆಯಡಿ ಶಿವಮೊಗ್ಗ ಜಿಲ್ಲೆಯನ್ನು ಕೊಡಗು ಚಿಕ್ಕಮಗಳೂರು (ಭಾಗಶ:) ಉತ್ತರ ಕನ್ನಡ ರೀತಿಯಲ್ಲಿ ಪರಿಗಣಿಸಿ 21 ಸಾವಿರ ಜನಸಂಖ್ಯೆಗೆ ಒಬ್ಬ ಸದಸ್ಯರಂತೆ ಸದಸ್ಯರ ಸ್ಥಾನಗಳನ್ನು ಮರುನಿಗದಿಪಡಿಸಲು ತಿದ್ದುಪಡಿ ತರಲು ಮುಖ್ಯಮಂತ್ರಿಗಳು ಅನುಮತಿಸಿದರು.

ಕ್ಷೇತ್ರ ಮರುವಿಂಗಡನೆಗೆ ಸಂಬಂಧಿಸಿದಂತೆ ಸಲ್ಲಿಸಿದ ಆರು ಪ್ರಸ್ತಾವನೆಗಳಲ್ಲಿ ಒಂದಕ್ಕೆ ಮುಖ್ಯ ಮಂತ್ರಿಗಳು ಅನುಮೋದನೆ ನೀಡಿದ್ದು, ತಿದ್ದುಪಡಿ ಪ್ರಕ್ರಿಯೆ ಕೈಗೊಳ್ಳಲು ಕಾನೂನು ಇಲಾಖೆಗೆ ಇದನ್ನು ವಹಿಸಲಾಗುವುದು ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

ಇಲಾಖೆಯ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಸಚಿವರು ಹಿಂದಿನ ಸರ್ಕಾರ ಸಾಲ ಮಾಡಿ ತುಪ್ಪ ತಿನ್ನಿಸಿದ್ದಾರೆ. 37 000 ಕಾಮಗಾರಿ ಮಂಜೂರು ಮಾಡಿದ್ದು, 5 ವರ್ಷಗಳಲ್ಲಿ 10500 ಕೋಟಿ ರೂ. ಕಾಮಗಾರಿಗಳ ಪೈಕಿ 3500 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದೆ. 6400 ಕೋಟಿ ರೂ.ಗಳವರೆಗೆ ಹಣ ಬಿಡುಗಡೆ ಮಾಡಬೇಕಿದೆ. ಈ ವರ್ಷ ಬಜೆಟ್ ಅನುದಾನದಲ್ಲಿ ಹಣ ಸಾಲದೆ ಇರುವುದರಿಂದ 3500 ಕೋಟಿ ರೂ.ಗಳ ಹಳೆ ಬಿಲ್ ಪಾವತಿಗಾಗಿ ಅಗತ್ಯವಿದೆ ಎಂದರು.

ಕಾನೂನು ಚೌಕಟ್ಟಿನಲ್ಲಿ ಶಾಸಕರು ಮನವಿ ಕೊಡುತ್ತಲೇ ಇದ್ದು, ಪಿಡಿಓ ಗಳನ್ನು ವರ್ಗಾವಣೆ ಮಾಡಲು ಸಮಾಲೋಚನೆ ಕೈಗೊಳ್ಳಲು ರೂಪುರೇಷೆಗಳನ್ನು ಸಿದ್ಧಗೊಳಿಸುವ ಅಗತ್ಯವಿದೆ ಎನ್ನುವ ಸಂಗತಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.

ಪಂಚಾಯತ್ ರಾಜ್ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಅವಧಿಯನ್ನು 60 ತಿಂಗಳಿಗೆ ವಿಸ್ತರಿಸುವ ಬಗ್ಗೆ ತಿದ್ದುಪಡಿ ತರಲು ಪ್ರಸ್ತಾವನೆಗೆ ಸಿಎಲ್ ಪಿ ಸಭೆಯಲ್ಲಿ ಚರ್ಚೆ ಮಾಡಲು ಸೂಚಿಸಿದರು.

ಕಲ್ಯಾಣ ಕರ್ನಾಟಕದ ಗ್ರಾಮ ಪಂಚಾಯತಿಗಳಿಗೆ 1.00 ಕೋಟಿ ರೂ. ಅನುದಾನ ನೀಡುವ ಬಗ್ಗೆ ಮುಂದಿನ ಆರ್ಥಿಕ ವರ್ಷದಲ್ಲಿ ನಿರ್ಧರಿಸಲು ಸೂಚಿಸಲಾಯಿತು.

ಕೆ.ಆರ್.ಐ.ಡಿ.ಎಲ್ ನಲ್ಲಿ 800 ಜನರನ್ನು ಅನಗತ್ಯವಾಗಿ ಹೆಚ್ಚುವರಿಯಾಗಿ ನೇಮಿಸಿಕೊಳ್ಳಲಾಗಿದೆ. ಈ ಹೊರೆ ತಗ್ಗಿಸಲೂ ಕ್ರಮದ ಅಗತ್ಯವಿದೆ ಎನ್ನುವ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯ ಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ: ರಜನೀಶ್ ಗೋಯಲ್, ಅಪರ ಮುಖ್ಯ ಕಾರ್ಯದರ್ಶಿ ಉಮಾಮಹಾದೇವನ್ ,ಇಲಾಖೆಯ ಆಯುಕ್ತ ಅಂಜುಮ್ ಪರ್ವೇಜ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಂ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.