ಆಶಾ ಕಾರ್ಯಕರ್ತೆಯ ಸೇವೆ ಶ್ಲಾಘನೀಯ
- ಉಸ್ತುವಾರಿ ಸಚಿವರಿಂದ ಶ್ಲಾಘನೆ
- ಆಶಾ ಕಾರ್ಯಕರ್ತೆಯರಿಗೆ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸಹಕಾರ ಇಲಾಖೆಯಿಂದ ಸಹಾಯಧನ ಕೊಡುಗೆ
- ಜಿಲ್ಲೆಯ ಜನತೆಗೂ ಅಭಿನಂದನೆ ಸಲ್ಲಿಸಿದ ಸಚಿವ ಸೋಮಶೇಖರ್
- ಜಿಲ್ಲಾಧಿಕಾರಿ ಸಹಿತ ವಿವಿಧ ಅಧಿಕಾರಿಗಳಿಗೆ ಸಂವಿಧಾನ ಪುಸ್ತಕ ಹಾಗೂ ಪುಷ್ಪಾರ್ಚನೆ ಮೂಲಕ ಅಭಿನಂದನೆ ಸಲ್ಲಿಕೆ
ಮೈಸೂರು: ಕೋವಿಡ್ 19 ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿಯನ್ನು ಸಹಕಾರ ಇಲಾಖೆ ವತಿಯಿಂದ ಕೊಡುತ್ತಿದ್ದೇವೆ. ಇದಕ್ಕಾಗಿ ಒಟ್ಟು
12 ಕೋಟಿ 37 ಲಕ್ಷ ರೂಪಾಯಿ ಖರ್ಚು ಆಗಲಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ರಾಜ್ಯದ 40500 ಆಶಾ ಕಾರ್ಯಕರ್ತರಿಗೆ ಅನುಕೂಲವಾಗುವ ತಲಾ 3 ಸಾವಿರ ರೂಪಾಯಿ ಸಹಾಯಧನ ವಿತರಣೆ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ 180 ಜನರಿಗೆ ಮೈಸೂರಿನಲ್ಲಿ ವಿತರಣೆ ಮಾಡುವ ಮೂಲಕ ಸಚಿವರು ಈ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಕೊರೋನಾ ವಿರುದ್ಧ ಹೋರಾಡಿದ ರಾಜ್ಯದ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ವಿತರಣೆ ಮಾಡುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಕೇಳಿದಾಗ ಇಲಾಖೆ ವತಿಯಿಂದಲೇ ಹಣವನ್ನು ಭರಿಸುವುದಾಗಿ ತಿಳಿಸಿದೆ. ನಂತರ ಶುಕ್ರವಾರ ಮುಖ್ಯಮಂತ್ರಿಗಳು ಸಹಾಯಧನದ ಬಗ್ಗೆ ಘೋಷಿಸಿದರು.
ಎಲ್ಲರ ಕ್ರಮ ಶ್ಲಾಘನೀಯ
ಕೊರೋನಾದಂತಹ ರೋಗದ ಸಂದರ್ಭದಲ್ಲಿ
ಜಿಲ್ಲಾಧಿಕಾರಿ ಅವರು ಎಸಿ ಕೊಠಡಿಯಲ್ಲಿ ಕೂರದೇ ಅವಿರತವಾಗಿ ಶ್ರಮ ಹಾಕಿದ್ದಾರೆ. ಇವರ ಜೊತೆ ಅಧಿಕಾರಿಗಳು, ವೈದ್ಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವರ ಶ್ರಮವಿದೆ. ಮೈಸೂರು ಕರೋನಾ ಮುಕ್ತರಾಗಬೇಕಾದರೆ ಇವರೆಲ್ಲರ ಶ್ರಮ ಇದೆ ಎಂದು ನಾನು ಸಭೆಯ ವೇಳೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದೆ. ಹಾಗಾಗಿ ಅವರೂ ಸಹ ಕರೋನಾ ಮುಕ್ತ ರಾಜ್ಯಕ್ಕಾಗಿ ಹೋರಾಡಿದವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ತಾವು ಮೈಸೂರಿನಿಂದಲೇ ಆ ಕೆಲಸವನ್ನು ಪ್ರಾರಂಭ ಮಾಡಿದ್ದಾಗಿ ಎಂದು ಸಚಿವರು ತಿಳಿಸಿದರು.
35 ಲಕ್ಷ ರೂಪಾಯಿ ವಿತರಣೆ
ಮೈಸೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಮೈಸೂರು ಜಿಲ್ಲೆ ಸಹಕಾರ ಹಾಲು ಒಕ್ಕೂಟದ ವತಿಯಿಂದ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಒಟ್ಟು 35 ಲಕ್ಷ ರೂಪಾಯಿ ಸಹಾಯಧನವನ್ನು ಸಚಿವರು ವಿತರಿಸಿದರು.
ಸಚಿವರ ಕಾರ್ಯಕ್ಕೆ ಮೆಚ್ಚುಗೆ
ಸಂಸದರಾದ ಪ್ರತಾಪ್ ಸಿಂಹ ಮಾತನಾಡಿ, ಸುಮಾರು 40 ಸಾವಿರ ಆಶಾ ಕಾರ್ಯಕರ್ತೆಯರಿಗೆ ಸಹಾಯಧನವನ್ನು ನನ್ನ ಸಹಕಾರ ಇಲಾಖೆಯಿಂದಲೇ ಕೊಡುತ್ತೇನೆ. ಇದಕ್ಕಾಗಿ ಖರ್ಚಾಗುವ 12.37 ಕೋಟಿ ರೂಪಾಯಿಯನ್ನು ಇಲಾಖೆಯಿಂದಲೇ ಭರಿಸುವುದಾಗಿ ಹೇಳಿ ಅದನ್ನು ಜಾರಿಗೆ ತಂದಿದ್ದಾರೆ. ಅಲ್ಲದೆ, ಮಾತು ಬಾರದ ಮೃಗಾಲಯದ ಪ್ರಾಣಿಗಳ ನಿರ್ವಹಣೆಗಾಗಿ 2.51 ಕೋಟಿಯನ್ನು ಸಂಗ್ರಹಿಸಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದಕ್ಕೋಸ್ಕರ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಿಂದ ಅಭಿನಂದನೆ
ಇನ್ನು ಹಲವು ತಿಂಗಳ ಕಾಲ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಮಾಸ್ಕ್, ಸ್ಯಾನಿಟೈಸರ್ ಬಳಸುವುದು ಇತ್ಯಾದಿ ಕ್ರಮಗಳನ್ನು ಅನುಸರಿಸಬೇಕು. ಜೊತೆಗೆ ರಾಜ್ಯ ಸರ್ಕಾರ ಹಾಗೂ ಮೈಸೂರು ಜಿಲ್ಲಾಉಸ್ತುವಾರಿ ಸಚಿವರು ನಮ್ಮ ಯಾವುದೇ ಕೆಲಸಕ್ಕೂ ಹಸ್ತಕ್ಷೇಪ ಮಾಡಿಲ್ಲ. ಇದಕ್ಕಾಗಿ ಧನ್ಯವಾದಗಳು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು.
ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ನಾಗೇಂದ್ರ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.
ಬಾಕ್ಸ್ )))))
ಸಂವಿಧಾನ ಪುಸ್ತಕ ನೀಡಿ ಗೌರವ
ಮೈಸೂರು ಕೊರೋನಾ ಮುಕ್ತವಾಗಲು ಶ್ರಮಿಸಿದ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಮುಡಾ ಆಯುಕ್ತರು, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರವರಿಗೆ ಭಾರತದ ಸಂವಿಧಾನದ ಪುಸ್ತಕ ವಿತರಿಸಿ, ಮೈಸೂರು ಪೇಟ ಹಾಗೂ ಶಾಲು ಹೊದಿಸುವ ಮೂಲಕ ಸಚಿವ ಸೋಮಶೇಖರ್ ಹಾಗೂ ಸಂಸದರು ಮತ್ತು ಶಾಸಕರು ಸೇರಿ ಗೌರವಿಸಿದರು. ಮುಂದಿನ ದಿನಗಳಲ್ಲಿ ಇದಕ್ಕಾಗಿ ಶ್ರಮಿಸಿದವರಿಗೆ ಗೌರವಿಸುವುದಾಗಿ ಸಚಿವರು ತಿಳಿಸಿದರು.
++++
ಚವನ್ ಪ್ರಾಶ್ ವಿತರಣೆ
ಮೈಸೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ.ಹರೀಶ್ ಗೌಡ ಅವರ ವತಿಯಿಂದ ಆಶಾಕಾರ್ಯಕರ್ತೆಯರಿಗಾಗಿ ನೀಡಲು ತಂದಿದ್ದ ಆಹಾರ ಕಿಟ್ ಗಳನ್ನು ಹಾಗೂ ಆಯುಷ್ ಇಲಾಖೆ ವತಿಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಚವನ್ ಪ್ರಾಶ್ ಲೇಹವನ್ನು ಆಶಾ ಕಾರ್ಯಕರ್ತೆಯರಿಗೆ ಸಚಿವ ಸೋಮಶೇಖರ್ ವಿತರಿಸಿದರು.