ಇಲಾಖಾ ವೆಬ್‌ಸೈಟ್ ನಲ್ಲಿ 1.20 ಕೋಟಿ ಪುಟಗಳ ದಾಖಲೆ ಅಳವಡಿಕೆ

 

ಇಲಾಖಾ ವೆಬ್‌ಸೈಟ್ ನಲ್ಲಿ 1.20 ಕೋಟಿ ಪುಟಗಳ ದಾಖಲೆ ಅಳವಡಿಕೆ – ಮಂಜುನಾಥ ಹೆಚ್.ಎಲ್
ಮೈಸೂರು:- ಪತ್ರಾಗಾರ ಇಲಾಖೆಯಲ್ಲಿ ಗಣಕೀಕರಗೊಂಡ ದಾಖಲೆಗಳನ್ನು ಇಲಾಖಾ ಅಂತರ್ಜಾಲ/ವೆಬ್‌ನಲ್ಲಿ ಅಳವಡಿಸಲಾಗಿದ್ದು, ಇದುವರೆವಿಗೂ ಒಟ್ಟು 1.20 ಕೋಟಿ ಪುಟಗಳನ್ನು ವೆಬ್‌ನಲ್ಲಿ ಸೇರಿಸಲಾಗಿದೆ ಎಂದು ವಿಭಾಗೀಯ ಪತ್ರಾಗಾರ ಕಛೇರಿಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಹೆಚ್.ಎಲ್ ಅವರು ತಿಳಿಸಿದರು.ಇಂದು ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಯನ ವಿಭಾಗ ಹಾಗೂ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ವಿಭಾಗಿಯ ಪತ್ರಾಗಾರ ಕಚೇರಿ ಮೈಸೂರು ಇವರ ಸಹಯೋಗದಲ್ಲಿ ಇತಿಹಾಸ ಸಂಶೋಧನೆಯಲ್ಲಿ ಪತ್ರಾಗಾರದ ದಾಖಲೆಗಳು ವಿಷಯ ಕುರಿತು ಮಾನಸ ಗಂಗೋತ್ರಿಯ ಇತಿಹಾಸ ಅಧ್ಯಯನ ವಿಭಾಗದ ನಾಲ್ವಡಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಾಗಾರ ಪರಿಚಯ ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ವಿಭಾಗೀಯ ಪತ್ರಾಗಾರ ಕಛೇರಿಯಲ್ಲಿರುವ ದಾಖಲೆಗಳನ್ನು ಸರ್ಕಾರಿ ಕಛೇರಿ ಮತ್ತು ಸಂಸ್ಥೆಗಳ ಹಾಗೂ ಸಂಶೋಧಕ ವಿದ್ವಾಂಸರುಗಳ ಮತ್ತು ಸಾರ್ವಜನಿಕರ ಅನುಕೂಲತೆಯನ್ನು ಪರಿಗಣಿಸಿ ಮುಖ್ಯವಾಗಿ 6 ಭಾಗಗಳಾಗಿ ವರ್ಗೀಕರಿಸಲಾಗಿದ್ದು, ಅಪ್ರಕಟಿತ ದಾಖಲೆಗಳು, ಪ್ರಕಟಿತ ದಾಖಲೆಗಳು, ಖಾಸಗಿ ದಾಖಲೆಗಳು, ಗ್ರಂಥಾಲಯ ಪುಸ್ತಕಗಳು, ಕಡತಗಳು ಮತ್ತು ಮೌಖಿಕ ಇತಿಹಾಸಗಳಾಗಿ ವಿಂಗಡಿಸಲಾಗಿದೆ.

ಮೈಸೂರು ಅರಮನೆ ಆಡಳಿತದ ವಿವಿಧ ಇಲಾಖೆಗಳ ದಿನನಿತ್ಯದ ಆಡಳಿತದ ವ್ಯವಹಾರಕ್ಕೆ ಸಂಬoಧಿಸಿoತೆ ಸುಮಾರು 10 ಸಾವಿರ ಕಡತಗಳನ್ನು ಅಪ್ರಕಟಿತ ದಾಖಲೆಗಳ ಗುಂಪಿನಲ್ಲಿ ಗುರುತಿಸಲಾಗಿದೆ. ಈ ದಾಖಲೆಗಳು ಮೋಡಿ/ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿದ್ದು, ಅವುಗಳ ವ್ಯವಹಾರ ಪತ್ರಗಳು, ಲೆಕ್ಕ ಪತ್ರಗಳು, ದಿನಚರಿಗಳು, ಕೊಡುಗೆಗಳು, ದಾನಗಳು, ಮಠ ಮಾನ್ಯರಿಗೆ ನೀಡಿದ ಇನಾಮುಗಳು, ರಾಜರ ಪ್ರವಾಸ ಮಾಹಿತಿಗಳು, ವಿವಿಧ ಯಾತ್ರಾ ಸ್ಥಳಗಳ ಬಗ್ಗೆ ಮಾಹಿತಿಗಳು, ಅರಸು ಮನೆತನದವರು ಆಚರಿಸುತ್ತಿದ್ದ ವಿಧಿ ವಿಧಾನಗಳು, ವಿವಾಹ ಮತ್ತಿತರ ಸಮಾರಂಭಗಳ ಆಹ್ವಾನ ಪತ್ರಿಕೆಗಳು, ದಸರಾ ಆಚರಣೆ ಮಾಹಿತಿಗಳು, ಯುರೋಪಿಯನ್ ಹಾಗೂ ದೇಶಿಯ ಅತಿಥಿಗಳ ವಿವರಗಳು, ರಾಜರ ಭವ್ಯ ಸೌಧಗಳ ನಿರ್ಮಾಣ ಹಾಗೂ ದುರಸ್ತಿ ಇತ್ಯಾದಿ ವಿವರಗಳನ್ನೊಳಗೊಂಡಿದೆ.

ಇದಲ್ಲದೆ ಮೈಸೂರು ಸರ್ಕಾರದ ನಡವಳಿಗಳು, ಮೈಸೂರು ಅರಮನೆ ಆಡಳಿತ ವರದಿಗಳು, ಮೈಸೂರು ಪ್ರಜಾಪ್ರತಿನಿಧಿ ಸಭೆ ನಡವಳಿಗಳು, ಮೈಸೂರು ಲೆಜಿಸ್ ಲೇಟಿವ್ ಕೌನ್ಸಿಲ್ ನಡವಳಿಗಳು, ಮೈಸೂರು ಗೆಜೆಟ್ ಗಳು (1867-1963 ಮತ್ತು 1986 ರಿಂದ 2015), ಗೆಜೆಟ್ ಆಫ್ ಇಂಡಿಯಾ, ಬೋರ್ಡ್ ಆಫ್ ರೆವಿನ್ಯೂ ನಡವಳಿಗಳು, ಗೆಜೆಟ್ ಆಫ್ ಇಂಡಿಯಾ, ಬೋರ್ಡ್ ಆಫ್ ರೆವಿನ್ಯೂ ನಡವಳಿಗಳು, ಗೆಜೆಟಿಯರ್ಸ್ ಗಳು, ಪೋರ್ಟ್ ಸೆಂಟ್ ಜಾರ್ಜ್ ಗೆಜೆಟ್ ಗಳು, ಸೆನ್ಸಸ್ ವರದಿಗಳು (1799-1981) ಮ್ಯಾನುಯಲ್ಸ್ ಗಳು 1806 ರಿಂದ 1839 ರವರೆಗೆ ಕೆಲವು ಭೂ ಹಿಡುವಳಿ, ಕಂದಾಯ ಪದ್ದತಿ. ಅಲ್ಲಿನ ಬೇಸಾಯ ಪದ್ದತಿ, ಆದಾಯ ಖರ್ಚು, ಕಬ್ಬು ಬೇಸಾಯದ ವಿವರಗಳು, ಮತ್ತಿತರ ವಿವರಗಳನ್ನೊಳಗೊಂಡಿದೆ.

ಇಲಾಖೆಯಲ್ಲಿ ಗಣಕೀಕರಗೊಂಡ ದಾಖಲೆಗಳನ್ನು ಇಲಾಖಾ ಅಂತರ್ಜಾಲ/ವೆಬ್  www.kannadasiri.kar.nic.in     ಅಳವಡಿಸಲಾಗಿದೆ.

ಕಾಯಕ್ರಮವನ್ನು ಪ್ರೊ. ಕೆ ಸದಾಶಿವರವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪ್ರೊ. ಸಿ. ಗುರುಸಿದ್ದಯ್ಯ ಅವರು ಭಾಗವಹಿಸಿದ್ದರು. ಪ್ರೊ. ವೈ.ಹೆಚ್ ನಾಯಕವಾಡಿ ರವರು ಅಧ್ಯಕ್ಷತೆ ವಹಿಸಿದ್ದರು ಹಾಗೂ ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.