ಎಂಪಿ ಆದ್ಯಾತ್ಮಿಕ ಅಂಗಳ -ಮನುಷ್ಯನಿಗೆ ಸಂಸ್ಕಾರ ಅಗತ್ಯ..!

14
adyatmika
ಮೈಸೂರು ಪತ್ರಿಕೆ
Share

ಕೃಪೆ ಆಧ್ಯಾತ್ಮಿಕ ವಿಚಾರ ಬಳಗ ‌ ‌

*ಮನುಷ್ಯನಿಗೆ ಸಂಸ್ಕಾರ ಅಗತ್ಯ..!*

ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಸಂಸ್ಕಾರ ಬೇಕೇ ಬೇಕು. ಸಂಸ್ಕಾರ ಎಂದರೆ ಅದು ತಿದ್ದುಪಡಿ ಅಥವಾ ಧಾರ್ಮಿಕ ವಿಧಾನ, ನಾಗರಿಕತೆ, ಶುದ್ಧ ಮಾಡುವುದು ಎಂದರ್ಥ. ಒಂದು ಜೀವಿಗೆ ಹುಟ್ಟಿನಿಂದ ಸಾವಿನವರೆಗೂ ಹಲವು ಸಂಸ್ಕಾರಗಳನ್ನು ಮಾಡಬೇಕಾಗುತ್ತದೆ. ವ್ಯಕ್ತಿ ಸಂಸ್ಕಾರಕ್ಕೆ ಒಳಗಾಗಬೇಕು. ಮುಂದಿನ ಪೀಳಿಗೆ, ಸಮಾಜ ಸುಂದರವಾಗಿ ಬಾಳಬೇಕಾದರೆ ಸಂಸ್ಕಾರ ಬಹಳ ಮುಖ್ಯ. ಮನೆಯಲ್ಲಿ ತಾಯಿ ಮತ್ತು ತಂದೆಯವರ ವರ್ತನೆಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ನಾವು ಯಾರಿಗೆ ಹೆದರದಿದ್ದರೂ ಮಕ್ಕಳ ಎದುರು ಮಾತ್ರ ಅಸಭ್ಯ ವರ್ತನೆ ಸಲ್ಲದು, ಅವರ ಮುಂದೆ ಕೆಟ್ಟದ್ದನು ಮಾಡಬಾರದು. ಮಕ್ಕಳಿಗೆ ಆಸ್ತಿ- ಅಂತಸ್ತು ಮಾಡದಿದ್ದರೂ ಸರಿಯಾದ ಸಂಸ್ಕಾರವನ್ನು ನೀಡಲೇಬೇಕು.

*ಮನುಷ್ಯ ತಾನು ಸಂಸಾರಿಯಾಗುವ ಮೊದಲು ಸಂಸ್ಕಾರಿಯಾಗಬೇಕು.* ಸಂಸ್ಕಾರದ ವಿವಿಧ ಮಜಲುಗಳಿಗೆ ಒಳಪಡಬೇಕು. ಬಿದಿರು ಪ್ರಕೃತಿಯ ಕೊಡುಗೆಯಾದರೆ, ಅದರಿಂದ ತಯಾರಾದ ಕೊಳಲು ಸಂಸ್ಕೃತಿಯ ಫಲ. ಅದು ವಾದಕನ ಕೈಯಲ್ಲಿ ಸಿಕ್ಕಾಗ ಬೆಲೆ ಹೆಚ್ಚಿಸಿಕೊಂಡಂತೆ ಸಂಸ್ಕಾರಕ್ಕೆ ಒಳಪಟ್ಟಾಗ ಮನುಷ್ಯನ ಬೆಲೆ ಅಧಿಕವಾಗುತ್ತದೆ. ಪ್ರಾಣಿ, ಪಕ್ಷಿಗಳೂ ಸಂಸ್ಕಾರ ಕೊಟ್ಟರೆ ನಮ್ಮೊಡನೆ ಒಡನಾಟ ಬೆಳೆಸಿಕೊಳ್ಳುತ್ತವೆ. ಕರಡಿ, ಕೋತಿ, ಗಿಳಿ, ನಾಯಿ ಇವೆಲ್ಲ ಸಂಸ್ಕಾರ ಕೊಟ್ಟಾಗ ನಮ್ಮ ಮಾತು ಕೇಳುತ್ತವೆ. ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತವೆ. ಮಕ್ಕಳಿಗೂ ಒಳ್ಳೆಯ ಸಂಸ್ಕಾರ ಕೊಡಬೇಕು. ಮಕ್ಕಳು ಮಾತು ಕೇಳುವುದಿಲ್ಲ ಎಂದು ಕೊರಗಬಾರದು. ಮನಸ್ಸು ಮಾಡಿದರೆ ಎಂತಹ ಕಠಿಣ ಕೆಲಸವೂ ಸುಲಭವಾಗುತ್ತದೆ. ಪ್ರಯತ್ನ ಬೇಕಷ್ಟೇ.

ಮಕ್ಕಳಿಗೆ ಹಸಿವು, ಬಟ್ಟೆ, ಆಹಾರ, ಕಷ್ಟ, ಹಣದ ಮೌಲ್ಯಗಳು ಏನೆಂದು ತಿಳಿಸಿ ಕೊಡಬೇಕು. ನೀವು ಎಷ್ಟೇ ಶ್ರೀಮಂತರಾಗಿದ್ದರೂ ಒಂದು ದಿನವಾದರೂ ಊಟ ನೀಡದೇ ಹಸಿವಿನ ಮಹತ್ವ ಗೊತ್ತು ಪಡಿಸಬೇಕು. ಉದ್ಯಾನವನದಲ್ಲಿ ಸಸಿಗಳಿಗೆ ಸಂಸ್ಕಾರ ಕೊಟ್ಟಾಗ ಅವು ಅರಳಿ ನಿಂತು ಮನಸ್ಸು ಸೆಳೆಯುತ್ತವೆ. ಜನರು ನೋಡಿ ಸಂತೋಷಪಡುತ್ತಾರೆ. ಹಾಗೆಯೇ ಮಕ್ಕಳಿಗೆ ಸಂಸ್ಕಾರ ಕೊಟ್ಟರೆ ನಾಲ್ಕು ಜನ ಖುಷಿಪಡುತ್ತಾರೆ. ಪರಿಪೂರ್ಣ ಸಂಸ್ಕಾರ ಕೊಡುವುದಿದ್ದರೆ ಮಾತ್ರ ಮಕ್ಕಳನ್ನು ಹೆರಬೇಕು. ಮಕ್ಕಳು ಸಮಾಜಕ್ಕೆ ಮಾರಕವಾಗದೆ, ಸಾರಕವಾಗಬೇಕು. ವಿದ್ಯೆ ಬಂತು ವಿನಯ ಹೋಯಿತು, ಬುದ್ಧಿ ಬಂತು ಶ್ರದ್ಧೆ ಹೋಯಿತು, ಸಮೃದ್ಧಿ ಬಂತು ಸಮಾಧಾನ ಹೋಯಿತು ಎನ್ನುವ ಹಾಗೆ ಎಂದೂ ಆಗಬಾರದು. ಮಕ್ಕಳು ನಾಸ್ತಿಕರಾದರೂ ಅಡ್ಡಿಯಿಲ್ಲ, ಸಂಸ್ಕಾರ ಇಲ್ಲದವರನ್ನಾಗಿ ಮಾತ್ರ ಮಾಡಬಾರದು. ದಿನದಲ್ಲಿ ಒಂದು ಗಂಟೆಯಾದರೂ ಮಕ್ಕಳು, ಕುಟುಂಬದೊಂದಿಗೆ ಕಳೆಯಬೇಕು. ಆ ಮೂಲಕ ಸಂಸ್ಕಾರ ಕಲಿಸಿ ಕೊಡಬೇಕು. ಕುಟುಂಬ, ಊರು, ನಗರ, ನಾಡು ಎಲ್ಲವೂ ಸಂಸ್ಕಾರಯುತವಾಗಬೇಕು. ‌ ‌ ‌ ‌ ಕೊನೆಯ ಮಾತು : ನಮ್ಮ ಸಂಸ್ಕಾರ ನಮ್ಮ ಮನೆಯ ಮಕ್ಕಳು ತೋರಿಸಿಕೊಡುತ್ತಾರೆ


Share