ಎಂಪಿ ಆಧ್ಯಾತ್ಮಿಕ ಅಂಗಳ:ದೀಪಾವಳಿ ಆಚರಣೆ ನಿಲ್ಲದಿರಲಿ ಆದರೆ ಸಮಯೋಚಿತ ಬದಲಾವಣೆಯ ಜೊತೆಗೆ ಆಚರಣೆಯಾಗಲಿ

 

*ಪಟಾಕಿ ಬಿಟ್ಟಾಕಿ*

ಢಂ…‌ಢಂ….‌ಢಮಾರ್. ಬೆಳಕಿನ ಹಬ್ಬ ದೀಪಾವಳಿಯೂ ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ, ದೃಷ್ಠಿ ಮಾಲಿನ್ಯ, ಆ ಮಾಲಿನ್ಯ, ಈ ಮಾಲಿನ್ಯ ಅಂತಾ ಇಡೀ ಪ್ರಕೃತಿಯ ಒಡಲನ್ನು ಮಲಿನವಾಗಿಸುತ್ತಿದೆ. ಇದು ನಮ್ಮ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತದೆ ಅಂತಾ ಗೊತ್ತಿದ್ದರೂ ಅದ್ಯಾಕೋ ನಮ್ ಜನ ಪಟಾಕಿ ಬಿಡುವ ಮನಸು ಮಾಡುತ್ತಿಲ್ಲ. ಅದ್ಯಾವ ಆನಂದ ಕಿಕ್ ಅದರಿಂದ ಅವರಿಗೆ ಸಿಗುತ್ತಿದೆಯೋ ? ಆ ದೇವರಿಗೆ ಪ್ರೀತಿ. ಆದರೆ ಇದರ‌ ನೇರ ಪರಿಣಾಮ ಎದುರಿಸುತ್ತಿರುವುದು ಪ್ರಾಣಿಗಳು. ಅದರಲ್ಲೂ ನಾಯಿಗಳು, ಪಕ್ಷಿಗಳು ದನ ಕರುಗಳು ಕೋತಿಗಳು ಸಾಕಷ್ಟು ಆಘಾತಕ್ಕೆ ಒಳಗಾಗಿ ಚಿತ್ರಹಿಂಸೆ ಅನುಭವಿಸುತ್ತಿವೆ. ಪಟಾಕಿ ಸಿಡಿಸಿ ಹಾಕುವ ವಿಕೃತ ಕೇಕೆಯ ಮಧ್ಯೆ ಅವುಗಳ ಮೂಕರೋಧನೆ, ವೇದನೆ ಯಾರಿಗೂ ಕಾಣಿಸುತ್ತಿಲ್ಲ, ಕೇಳಿಸುತ್ತಿಲ್ಲ ಅನ್ನೋದೆ ದುರಂತ. ನಿಮಗೆ ಗೊತ್ತಿರಲಿ ಒಂದು ಕಾಲಕ್ಕೆ ನಮ್ಮ ಮನೆಯ ಸಂಧಿಗೊಂದಿಗಳಲ್ಲಿ ಗೂಡು ಕಟ್ಟಿಕೊಂಡು ಮೊಟ್ಟೆ ಇಟ್ಟು ಮರಿ ಮಾಡುತ್ತಾ ಚಿಲಿಪಿಲಿ ಅನ್ನುತ್ತಿದ್ದ ಪಕ್ಷಿಗಳು ಈಗ ಮರೀಚಿಕೆಯಾಗಿವೆ. ಭಗವಂತನೊಬ್ಬ ಇದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ಜಗತ್ತಿನ ಮಾಸ್ಟರ್ ಪೀಸ್‌ಗಳಾದ ನಮ್ಮನ್ನು ಸೃಷ್ಟಿಸಿದ ಸೃಷ್ಟಿಕರ್ತನಂತೂ ಇದ್ದೇ ಇದ್ದಾನೆ. ಆತನೇ ಈ ಪ್ರಾಣಿ, ಪಕ್ಷಿ, ಗಿಡ, ಮರ, ಬೆಟ್ಟ, ಗುಡ್ಡ, ಕಾಡು, ನದಿ, ನೀರು, ಹಳ್ಳ, ಕೊಳ್ಳ, ಕೆರೆ, ತೊರೆ, ಸಮುದ್ರ, ಆಕಾಶ, ಗ್ರಹಗಳು ಇತ್ಯಾದಿ ಇತ್ಯಾದಿ ಎಲ್ಲವನ್ನೂ ಸೃಷ್ಟಿಸಿದ್ದಾನೆ. ಇದಕ್ಕಿಂತ ಮುಖ್ಯವಾಗಿ ಇವೆಲ್ಲದರ ಅಸ್ತಿತ್ವದಲ್ಲೇ ಸಮತೋಲನವನ್ನು ಕಾಪಾಡುವ ಸೂತ್ರವನ್ನು ಹೆಣೆದಿದ್ದಾನೆ. ಇದರಲ್ಲಿ ಏನಾದರೂ ಏರುಪೇರು ಉಂಟಾದರೆ ವಿನಾಶ ಖಚಿತ. ಕೆಲವರು ಇದು ಗೊತ್ತಿಲ್ಲದೇ ಪರಿಸರ ಅಸಮತೋಲನಕ್ಕೆ ಕಾರಣರಾಗಿದ್ದರೆ. ಕೆಲವು ಸೋಕಾಲ್ಡ್ ಬುದ್ದಿವಂತರು, ಅಲ್ಲ ಅತಿ ಬುದ್ದಿವಂತರು ತಾವೇ ಅತಿಮಾನುಷ ಶಕ್ತಿಗಳಂತೆ ವರ್ತಿಸಿ ಅಸಮತೋಲನಕ್ಕೆ ಕಾರಣರಾಗುತ್ತಿದ್ದಾರೆ. ಇದರಿಂದ ನಮ್ಮ ನಾಯಿ, ದನ, ಹಸು, ಕರು, ಕುರಿ, ಕೋತಿ, ಪಕ್ಷಿಗಳು ಕಂಗಾಲಾಗಿವೆ. ಅವುಗಳಿಗೋ ಪಾಪ ಬಾಯಿ ಸಹಾ ಇಲ್ಲ ತಮ್ಮ ಸಂಕಟ ನೋವು ಹೇಳಿಕೊಳ್ಳಲು.

*ಆಚರಣೆ ಹಿನ್ನೆಲೆ*

ನಮ್ಮ ಎಲ್ಲಾ ಹಬ್ಬಗಳಿಗೂ ವೈಜ್ಞಾನಿಕ ಕಾರಣ ಇದ್ದೇ ಇದೆ. ನನಗೆ ತಿಳಿದ ಮಟ್ಟಿಗೆ ದೀಪಾವಳಿಗೂ ತನ್ನದೆ ಆದ ವೈಜ್ಞಾನಿಕ ಕಾರಣಗಳು ಇವೆ. ದೀಪಾವಳಿ ಆಚರಣೆ ಬಹುತೇಕ ಮಳೆಗಾಲದ ಕೊನೆಯ ಘಟ್ಟ. ಎಲ್ಲೆಡೆ ಹಸಿರು ಹುಲ್ಲು ಕಳೆ ಒಣಗುವ ಸಮಯ. ಬಹಳ ಹಿಂದೆ ಆಗ ಅಲ್ಲಿ ಆಶ್ರಯ ಪಡೆದಿದ್ದ ಹಾವು, ಕ್ರಿಮಿ, ಕೀಟ ಸೇರಿ ಹಲವು ಜೀವಿಗಳು ಆಶ್ರಯ ಕಳೆದುಕೊಂಡು ಹೊರಬರುತ್ತಿದ್ದ ಸಮಯವದು. ಹೀಗೆ ಹೊರಬರುತ್ತಿದ್ದ ಎಲ್ಲಾ ಜೀವಿಗಳು ಮನೆಯ ಕಡೆಗೆ ಬರುವ ಸಾಧ್ಯತೆ ಇತ್ತು. ಆ ಕಾಲಘಟ್ಟದಲ್ಲಿ ವಿದ್ಯುತ್ ಸಂಪರ್ಕವಿರಲಿಲ್ಲ. ಹೀಗಾಗಿ ಅವುಗಳನ್ನು ಮನೆಗೆ ಬಾರದಂತೆ ತಡೆಯಲು ಮನೆಯ ಮುಂದೆ ದೀಪವನ್ನು ಹಚ್ಚಿಡಲಾಗುತಿತ್ತು. ಬೆಂಕಿಗೆ ಹೆದರಿ ಅವು ಅತ್ತ ಬಾರದಿರಲಿ ಎಂದು. ಅದು ಒಂದು ತಿಂಗಳು ಅಂದರೆ ಸಂಪೂರ್ಣ ಕಾರ್ತಿಕಮಾಸದಲ್ಲಿ ಈ ರೀತಿ ಪ್ರತಿ ಮನೆ ಮುಂದೆ ದೀಪ ಹಚ್ಚುವ ಪದ್ಧತಿಯಿತ್ತು. *ಇದು ಬಹಳ ಹಿಂದೆ ಈಗ ಅಲ್ಲ. ಏಕೆಂದರೆ ಈಗ ಕಾಲ ಬದಲಾಗಿದೆ ನಾವು ಬದಲಾಗಿದ್ದೇವೆ ವಾತಾವರಣವನ್ನು ಬದಲಾಯಿಸಿದ್ದೇವೆ. ಹಸಿರು ಮಾಯವಾಗಿದೆ. ಕಾಂಕ್ರಿಟ್ ನಾಡು ನಿರ್ಮಾಣವಾಗಿದೆ. ಯಾಂತ್ರಿಕ ಜೀವನದಲ್ಲಿ ಜನರೇ ಮನೆಯ ಕಡೆ ಮುಖ ಮಾಡುತ್ತಿಲ್ಲ ! ಇನ್ನು ಪಾಪ ಕ್ರಿಮಿ, ಕೀಟಗಳು ಎಲ್ಲಿಂದ ಬರಬೇಕು ಹೇಳಿ* ? ದೀಪಾವಳಿಯ ಮತ್ತೊಂದು ಮಹತ್ವದ ಕಾರಣ ಅಂದರೆ ಈ ವಾತಾವರಣ ಕ್ರಿಮಿ ಕೀಟಗಳ ಸಂತಾನೋತ್ಪತ್ತಿಗೆ ಅತ್ಯಂತ ಪ್ರಸಕ್ತವಾದದ್ದು. ಅದರಲ್ಲಿ ಎಷ್ಟೋ ಕ್ರಿಮಿ, ಕೀಟಗಳು ನಮ್ಮ ಕಣ್ಣಿಗೂ ಕಾಣದಂತೆ ಇರುತ್ತಿದ್ದವು. ಆದ್ದರಿಂದ ಪಟಾಕಿ ಸಿಡಿಸಿದಾಗ ಪಟಾಕಿಯಲ್ಲಿ ಸಾಮಾನ್ಯವಾಗಿ ಬಳಸುವ ಸಲ್ಫರ್ ಗ್ಯಾಸ್ ಪರಿಸರದಲ್ಲಿ ಇರುವ ಕಣ್ಣಿಗೆ ಕಾಣದ ಕ್ರಿಮಿಗಳನ್ನು ನಾಶಮಾಡಿ, ಅವುಗಳು ಹರಡಬಹುದಾದ ರೋಗ ರುಜಿನಗಳನ್ನು ತಡೆಗಟ್ಟುತ್ತಿದ್ದವು. ಇದು ದೀಪಾವಳಿ ದೀಪ ಹಾಗೂ ಪಟಾಕಿ ಹೊಡೆಯುವುದರ ವೈಜ್ಞಾನಿಕ ಕಾರಣ.

ಈಗ ಕಾಲ ಬದಲಾಗಿದೆ. ವೈಜ್ಞಾನಿಕ ಕಾರಣಗಳು ಈಗ ನಗಣ್ಯ. ದೀಪಾವಳಿ ಆಚರಣೆ ಪ್ರತಿಷ್ಠೆಯ ಆಚರಣೆಯಾಗಿದೆ. ಸ್ಟೇಟಸ್ ತೋರ್ಪಡಿಕೆಯ ಹಬ್ಬವಾಗಿದೆ. ಯಾರ ಮನೆ ಮುಂದೆ ಹೆಚ್ಚಿನ ಪಟಾಕಿ ತ್ಯಾಜ್ಯ ಇರುತ್ತದೋ ಅವನೇ ಶ್ರೀಮಂತ ಜೊತೆಗೆ ಉದಾರಿ. *ಹಿಂದೆ ನಾವು ಚಿಕ್ಕವರಿದ್ದಾಗ ನಮಗೆ ಇದೇ ಕೆಲಸ ಅಪ್ಪ ಕೊಟ್ಟ ಐದು ಹತ್ತು ಪೈಸೆ ಜೊತೆಗೆ ಲಕ್ಷ್ಮಿ ಪೂಜೆ ಮಾಡಿ ಕುಂಬಳಕಾಯಿ ಹೊಡೆದಾಗ ಹೋಗಿ ಗೋರಿಕೊಂಡು ಬಂದ ಪುಡಿಗಾಸಿನಲ್ಲಿ ಚುರುಕಲಿ ಪಟಾಕಿ ಬೆಳ್ಳುಳ್ಳಿ ಪಟಾಕಿ ಖರೀದಿಸಿ ಹೊಡೆದು ಸಂಭ್ರಮಿಸುತ್ತಿದ್ದೆವು. ಆದರೆ ರಾತ್ರಿಯಾಗಿ ಎಲ್ಲಾ ಮಲಗಿದ ಮೇಲೆ ಯಾರ ಮನೆ ಮುಂದೆ ಹೆಚ್ಚಿನ ಪಟಾಕಿ ಹೊಡೆದಿರುತ್ತಿದ್ದರೋ ಅಷ್ಟು ಪಟಾಕಿಯ ಚಿಂದಿ ಪೇಪರ್‌ಗಳನ್ನು ನಮ್ಮ ಮನೆಯ ಬಾಗಿಲ ಮುಂದೆ ಸುರಿದು ಏನು ಗೊತ್ತಿಲ್ಲದಂತೆ ಮಲಗಿ ಬಿಡುತ್ತಿದ್ದೆವು. ಬೆಳಗ್ಗೆ ಎದ್ದು ಎಲ್ಲವನ್ನೂ ನಾವೇ ಹೊಡೆದಿದ್ದು ಅನ್ನುವಂತೆ ಪೋಸು ನೀಡುತ್ತಿದ್ದೆವು.*

*ಕೊನೆಯದಾಗಿ* ಈಗ ಕಾಲ ಬದಲಾಗಿದೆ ಸುಮ್ಮನೆ ಯೋಚಿಸಿ ಇತ್ತೀಚೆಗೆ ಪಟಾಕಿ ಬಿಟ್ಟಾಕಿ ಜಾಗೃತಿಯಿಂದ ಪಟಾಕಿ ಗಣನೀಯವಾಗಿ ಕಡಿಮೆಯಾಗಿದೆ. ಆದರೂ ಹಬ್ಬದ ಕೊನೆ ಕೊನೆಯಲ್ಲಿ ಮಾತ್ರ ಅಲ್ಲಲ್ಲಿ ಪಟಾಕಿಯ ಸದ್ದು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಸಮೂಹ ಸನ್ನಿ ಮತ್ತು ಪ್ರತಿಷ್ಠೆ ಹಾಗೂ ಬೇರೆಯವರ ಜೊತೆ ಹೋಲಿಕೆ. ಹೌದು ಪಟಾಕಿ ಬೇಡ ಎಂದು ಸುಮ್ಮನಿದ್ದವರು ಪಕ್ಕದ ಮನೆಯವರು ಪಟಾಕಿ ಹೊಡೆದ ತಕ್ಷಣ ಜಿದ್ದಿಗೆ ಬಿದ್ದವರಂತೆ ಆಗಲೇ ಹೋಗಿ ಅದರ ಡಬಲ್ ಪಟಾಕಿ ತಂದು ಸುಟ್ಟು ವಿಕೃತ ಆನಂದಪಡುತ್ತಿದ್ದೇವೆ. ಇದು ಮನೆಯಿಂದ ಮನೆಗೆ ಮನದಿಂದ ಮನಕ್ಕೆ ಮುಂದುವರಿಯುತ್ತಿದೆ. ಇದಕೆಲ್ಲಾ ಬ್ರೇಕ್ ಹಾಕೋಣ ವಿಶಾಲವಾಗಿ ಚಿಂತಿಸೋಣ. *ದೀಪಾವಳಿ ಆಚರಣೆ ನಿಲ್ಲದಿರಲಿ ಆದರೆ ಅದು ಸಮಯೋಚಿತ ಬದಲಾವಣೆಯ ಜೊತೆಗೆ ಆಚರಣೆಯಾಗಲಿ ಅನ್ನೋದೆ ನನ್ನ ಕಳಕಳಿಯ ಮನವಿ*

*ಖುಷಿಯಾಗಿರಿ – ಹೃದಯವಂತರಾಗಿರಿ*

*ರಾಮ್ ಮೈಸೂರು*