ಎಂಪಿ ಆಧ್ಯಾತ್ಮಿಕ ಅಂಗಳ :ಉಪವಾಸ

34
adyatmika
ಮೈಸೂರು ಪತ್ರಿಕೆ
Share

ಕೃಪೆ ಆಧ್ಯಾತ್ಮಿಕ ವಿಚಾರ ಬಳಗ

*ಉಪವಾಸ..!*

*ಉಪವಾಸ* ಎಂದರೆ ಯಾವುದಾದರೂ ಧಾರ್ಮಿಕ ಕಾರಣದಿಂದ ದೇವರ ಹೆಸರಿನಲ್ಲಿ ನಿತ್ಯದ ಊಟದ ಪದಾರ್ಥಗಳನ್ನು ಬಿಟ್ಟು ಬೇರೆ ವಿಶೇಷ ಪದಾರ್ಥಗಳನ್ನು ತಿನ್ನುವುದು. ಇದು ಎಲ್ಲರಿಗೂ ತಿಳಿದ ವಿಷಯವೇ.
ಹ್ಞಾ…! ಆದರೆ, ಸ್ವಲ್ಪ ತಾಳಿ,…! ಇಲ್ಲೇ ಇರುವುದು ಮೂಲ ಸಮಸ್ಯೆ. ಇದು *ಉಪವಾಸ* ದ ಅರ್ಥ ಅಲ್ಲವೇ ಅಲ್ಲ. ಉಪವಾಸದ ಅರ್ಥ ಆಹಾರ ಸೇವಿಸದೇ ಇರುವುದು ಎಂದು ಕೆಲವರಿಗೆ ಗೊತ್ತು. ಆದರೆ, ಇದು ಕೂಡ *ಉಪವಾಸ* ಪದದ ಸರಿಯಾದ ಅರ್ಥವಲ್ಲ!

ಉಪವಾಸ ಪದದ ಸರಿಯಾದ ಅರ್ಥವೆಂದರೆ *”ದೇವರ ಸಾನ್ನಿಧ್ಯದಲ್ಲಿ ವಾಸವಿರುವುದು.”* ಅಂದರೆ, *ಉಪವಾಸ ಮಾಡುವುದು* ಇದರ ಅರ್ಥ ಆ ಸಮಯದಲ್ಲಿ ಬೇರೆ ಯಾವ ಕೆಲಸಗಳನ್ನು – ಊಟ, ತಿಂಡಿ, ಮಾಡದೇ ದೇವರ ಸಾನಿಧ್ಯದಲ್ಲಿ ಕುಳಿತು ದೇವರ ನಾಮ ಸ್ಮರಣೆ, ಜಪ, ತಪ, ಪೂಜೆ, ಭಜನೆ, ಆರತಿ, ಕೀರ್ತನೆ, ಇತ್ಯಾದಿಗಳಲ್ಲಿ ಸಮಯ ಕಳೆಯುವುದು ಎಂದರ್ಥ.

ಈ ರೀತಿಯ ಉಪವಾಸವನ್ನು ಬಹುಶಃ ಯಾರೂ ಮಾಡುವುದಿಲ್ಲ. ಉಪವಾಸ ಎಂದರೆ ನಿತ್ಯದ ಊಟ ತಿಂಡಿಯ ಬದಲು ಬೇರೆ ಪದಾರ್ಥಗಳನ್ನು ತಿನ್ನುವುದು ಎಂದಷ್ಟೇ ಹೆಚ್ಚಿನ ಜನರಿಗೆ ತಿಳಿದಿರುವುದು. ಸಬ್ಬಕ್ಕಿ, ಊದಲು, ನೆಲಗಡಲೆ, ಆಲೂಗಡ್ಡೆ, ಇತ್ಯಾದಿಗಳಿಂದ ಮಾಡಿದ ಪದಾರ್ಥಗಳನ್ನು ಯಥೇಚ್ಛವಾಗಿ ತಿನ್ನುತ್ತಾರೆ. ಹೆಚ್ಚಿನ ಪದಾರ್ಥಗಳಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ. ಇದು ಉಪವಾಸದ ಮೂಲ ಉದ್ದೇಶದ ತದ್ವಿರುದ್ಧವಾಗಿದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಈ ಉಪವಾಸವನ್ನು ಆಚರಿಸುತ್ತಾರೆ. ಆದರೆ, ಇದು ಉಪವಾಸ ಅಲ್ಲವೇ ಅಲ್ಲ.

ಉಪವಾಸಕ್ಕೆ ಕೇವಲ ಧಾರ್ಮಿಕ ಅಥವಾ ಆಧ್ಯಾತ್ಮಿಕ ಆಯಾಮವಲ್ಲದೆ ಆರೋಗ್ಯ, ಸಾಮಾಜಿಕ, ರಾಜಕೀಯ, ಇತ್ಯಾದಿ ಆಯಾಮಗಳೂ ಕೂಡ ಇವೆ. ಅನೇಕ ಸಹಸ್ರಮಾನಗಳ ಹಿಂದೆ ನಮ್ಮ ಪೂರ್ವಜರು ಹಾಕಿಕೊಟ್ಟ ಉಪವಾಸದ ನಿಯಮ ಹಾಗೂ ಉದ್ದೇಶ ಕೇವಲ ಧಾರ್ಮಿಕವಾಗಿರದೆ ಅದರ ಹಿಂದೆ ನಿಜವಾದ ಉದ್ದೇಶ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿತ್ತು. ಧಾರ್ಮಿಕ ಆಯಾಮವನ್ನು ಬದಿಗೆಟ್ಟರೆ ಉಪವಾಸದ ಇನ್ನೊಂದು ಅರ್ಥ ಅಥವಾ ಉದ್ದೇಶ – ಆಹಾರವನ್ನು ನಿರ್ದಿಷ್ಟ ಸಮಯ ಹಾಗೂ ಉದ್ದೇಶಕ್ಕಾಗಿ ತ್ಯಜಿಸುವುದು ಎಂದರ್ಥ. ಕಾರಣ ಯಾವುದೇ ಇರಲಿ, ವಾಸ್ತವವಾಗಿ ಉಪವಾಸದ ಸಮಯದಲ್ಲಿ, ನೀರನ್ನು ಹೊರತುಪಡಿಸಿ ಬೇರೆ ಇನ್ನೇನನ್ನು ಸೇವಿಸಬಾರದು. ಈ ರೀತಿಯ ಉಪವಾಸವನ್ನು ಕಾಲಕಾಲಕ್ಕೆ ಆಚರಿಸುವುದರಿಂದ ಅನೇಕ ಆರೋಗ್ಯ ಲಾಭಗಳು ಇವೆ! ಹೌದು, ಆದ್ದರಿಂದಲೇ *”ಲಂಘನಂ ಪರಮೌಷಧಂ”* ಎಂದು ಕೂಡ ಹೇಳಲಾಗಿದೆ. ಇಂದು ಈ ಆರೋಗ್ಯ ಲಾಭಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

*ಉಪವಾಸ ಮಾಡುವುದರಿಂದ,….*

? ಶರೀರದ ಎಲ್ಲಾ ಅಂಗಾಂಗಗಳಿಗೂ ವಿಶ್ರಾಂತಿ ದೊರೆಯುತ್ತದೆ. ನಾವು ಪ್ರತಿನಿತ್ಯ ಆಹಾರ ಸೇವಿಸುತ್ತಾ ಇದ್ದರೆ ಅಂಗಾಂಗಗಳಿಗೆ ಸತತವಾಗಿ ಕೆಲಸ ಮಾಡಬೇಕಾಗುತ್ತದೆ. ಅದರಿಂದ ದೇಹದ ಅಂಗಾಂಗಗಳು ಕೂಡ ಆಯಾಸ ಹೊಂದುತ್ತವೆ. ಅವುಗಳಿಗೆ ಚೇತರಿಸಿಕೊಳ್ಳಲು ಅವಕಾಶವೇ ಸಿಗುವುದಿಲ್ಲ.

? ದೇಹ ಮತ್ತು ಮನಸ್ಸನ್ನು ನಿಗ್ರಹಿಸಲು ನೆರವಾಗುತ್ತದೆ. ಆತ್ಮವಿಶ್ವಾಸವು ಹೆಚ್ಚುತ್ತದೆ. ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.

? ಉಪವಾಸದ ನಂತರ ದೇಹ ಮತ್ತು ಮನಸ್ಸಿಗೆ ಹಗುರತನ ಮತ್ತು ತಾಜಾತನದ ಅನುಭವವಾಗುತ್ತದೆ.

? ದೇಹದಲ್ಲಿ ಶೇಖರಣೆಯಾದ ಕಲ್ಮಶ ಹಾಗೂ ವಿಷ ಪದಾರ್ಥಗಳನ್ನು ದೇಹದಿಂದ ಹೊರಹಾಕಲು ವಿಸರ್ಜಕ ಅಂಗಾಂಗಗಳಿಗೆ ಅವಕಾಶ ದೊರೆಯುತ್ತದೆ.

? ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡಲು ಸಹಾಯವಾಗುತ್ತದೆ.

? ದೈನಂದಿನ ಚಟುವಟಿಕೆಗಳು, ಮಾನಸಿಕ ಒತ್ತಡ, ಮಾಲಿನ್ಯ, ಸೂಕ್ತವಲ್ಲದ ಪದಾರ್ಥಗಳ ಸೇವನೆ, ಇತ್ಯಾದಿಗಳಿಂದ ದೇಹಕ್ಕೆ ಉಂಟಾದ ಹಾನಿಯನ್ನು ಸರಿಪಡಿಸಲು ಪ್ರಯೋಜನಕಾರಿ.

? ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾಗಿ ಅನೇಕ ತರಹದ ಸೋಂಕುಗಳು ಹಾಗೂ ಜ್ವರ ನಿಯಂತ್ರಣವಾಗುತ್ತದೆ.

? ಮಧುಮೇಹ, ಥೈರಾಯಿಡ್, ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದಯ ರೋಗಗಳು, ಇತ್ಯಾದಿ ಸಮಸ್ಯೆಗಳನ್ನು ತಡೆಗಟ್ಟಲು ಹಾಗೂ ನಿಯಂತ್ರಿಸಲು ಸಹಾಯಕವಾಗುತ್ತದೆ.

? ಯಕೃತ್ತು ಮೂತ್ರಪಿಂಡ ಚರ್ಮರೋಗಗಳು ಇತ್ಯಾದಿಯೇ ಅನೇಕ ಗಂಭೀರ ಕಾಯಿಲೆಗಳಲ್ಲಿ ಉಪಯುಕ್ತ.

? ನಿಯಮಿತ ಉಪವಾಸದಿಂದ ಆಯುಷ್ಯ ವೃದ್ಧಿಯಾಗುತ್ತದೆ.

? ಕ್ಯಾನ್ಸರನ್ನು ತಡೆಗಟ್ಟಲು ಹಾಗೂ ಹಿಮ್ಮೆಟ್ಟಿಸಲು ಕೂಡ ಪ್ರಯೋಜನಕಾರಿ.
ಜಪಾನಿನ ಜೀವಕೋಶ ಶಾಸ್ತ್ರಜ್ಞ, ಯೋಶಿನೋರಿ ಓಸುಮಿ ತಮ್ಮ ಸಂಶೋಧನೆಗಳಿಂದ ಕ್ಯಾನ್ಸರನ್ನು ತಡೆಗಟ್ಟುವಲ್ಲಿ ಹಾಗೂ ನಿಯಂತ್ರಿಸುವಲ್ಲಿ ಉಪವಾಸದ ಮಹತ್ವವನ್ನು ಸಾರಿದರು. ತಿಂಗಳಿಗೆ ಎರಡು ಬಾರಿ 12 ರಿಂದ 16 ಗಂಟೆಗಳ ನಿರಾಹರ ಉಪವಾಸ ಮಾಡುವುದರಿಂದ ಶರೀರದಲ್ಲಿ ನಿರ್ಮಾಣವಾಗುವ ಕ್ಯಾನ್ಸರ್ ಕೋಶಗಳು ನಾಶವಾಗುತ್ತವೆ ಎಂದು ತೋರಿಸಿಕೊಟ್ಟರು. ಈ ಸಂಶೋಧನೆಗಾಗಿ ಅವರಿಗೆ 2016ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು..
ಈ ಸಂಗತಿಯನ್ನು ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆಯೇ ಅರಿತುಕೊಂಡಿದ್ದರು. ಇದೇ ಕಾರಣದಿಂದ ಏಕಾದಶಿಯ ವ್ರತವನ್ನು ಪ್ರತಿ 15 ದಿನಗಳಿಗೊಮ್ಮೆ ಮಾಡುವ ಪರಿಪಾಠವನ್ನು ಹಾಕಿಕೊಟ್ಟರು. ಅಂದಿನ ಕಾಲದಲ್ಲಿ ಜನರಿಗೆ ವೈಜ್ಞಾನಿಕ ವಿವರಣೆಗಳು ಅರ್ಥವಾಗುತ್ತಿರಲಿಲ್ಲ ಹಾಗೂ ಜನ ಅದಕ್ಕೆ ಮಹತ್ವ ಕೊಡುತ್ತಿರಲಿಲ್ಲ. ಆದರೆ, ದೇವರು ಹಾಗೂ ಧರ್ಮದ ಕಾರಣಗಳಿಗಾಗಿ ಜನ ಏನು ಬೇಕಾದರೂ ಮಾಡುತ್ತಿದ್ದರು. ಆದ್ದರಿಂದ, ಅಂದಿನ ಬುದ್ಧಿಜೀವಿಗಳು ದೇವರ ಹೆಸರಿನಲ್ಲಿ ಏಕಾದಶಿಯ ಉಪವಾಸ ವ್ರತವನ್ನು ಆಚರಿಸುವ ರೂಢಿಯನ್ನು ಹಾಕಿಕೊಟ್ಟರು. ಪಾಶ್ಚಾತ್ಯರ ಹಾಗೂ ಆಧುನಿಕ ಜೀವನಶೈಲಿಯ ಪ್ರಭಾವಕ್ಕೆ ಮೋಹಿತರಾದ ನಾವು ಭಾರತೀಯರು ಏಕಾದಶಿ ವ್ರತಕ್ಕೆ ಯಾವ ಅರ್ಥವೂ ಇಲ್ಲ ಎಂದುಕೊಂಡು ಏಕಾದಶಿ ಉಪವಾಸವನ್ನು ಬಿಟ್ಟುಬಿಟ್ಟೆವು. ಅದನ್ನು ಆಚರಿಸುವವರು ಕೂಡ ತಪ್ಪಾಗಿ ಆಚರಿಸುತ್ತಾರೆ. ಏಕೆಂದರೆ, ಏಕಾದಶಿಯಂದು ವಿಧವಿಧ ಪದಾರ್ಥಗಳನ್ನು ಮಾಡಿಕೊಂಡು ತಿನ್ನುತ್ತಿರುತ್ತಾರೆ. ಇಂಥ ಏಕಾದಶಿ ಮಾಡುವುದರಿಂದ ಯಾವ ಪುಣ್ಯವೂ ದೊರೆಯುವುದಿಲ್ಲ ಹಾಗೂ ಆರೋಗ್ಯಕ್ಕೂ ಲಾಭವಿಲ್ಲ.

*ಉಪವಾಸವನ್ನು ಹೇಗೆ ಮಾಡಬೇಕು?*

1.ಉಪವಾಸ ಮಾಡಲು ಇಚ್ಚಿಸುವವರು ತಮ್ಮ ಸಾಮರ್ಥ್ಯಕ್ಕನುಗುಣವಾಗಿ 12, 16 ಅಥವಾ 24 ಗಂಟೆಗಳ ಉಪವಾಸವನ್ನು ಮಾಡಬಹುದು. ಒಂದೇ ಬಾರಿ ಅದಕ್ಕಿಂತಲೂ ಹೆಚ್ಚು ಉಪವಾಸದ ಅಗತ್ಯವಿಲ್ಲ. ಮೊದಲು 12 ಗಂಟೆಗಳ ಉಪವಾಸದಿಂದ ಆರಂಭಿಸಿ ಕ್ರಮೇಣ ಯಾವುದೇಯನ್ನು 24 ಗಂಟೆಗಳವರೆಗೆ ವೃದ್ಧಿಸಲು ರೂಢಿ ಮಾಡಿಕೊಳ್ಳಬೇಕು.

2. ಸಂಪೂರ್ಣ ನಿರಾಹರ ಉಪವಾಸ ಶ್ರೇಷ್ಠವಾದದ್ದು. ಅಂದರೆ, ಒಂದು ಕಾಳು ಆಹಾರವನ್ನು ಕೂಡ ಸೇವಿಸಬಾರದು. ಆದರೆ, ಎರಡೆರಡು ಗಂಟೆಗಳಿಗೊಮ್ಮೆ ನೀರನ್ನು ಸೇವಿಸಬೇಕು.

3. ಸಂಪೂರ್ಣ ನಿರಾಹಾರ ಉಪವಾಸ ಸಾಧ್ಯವಿಲ್ಲದಿದ್ದರೆ ಕೇವಲ ಹಣ್ಣು ಅಥವಾ ಹಸಿ ತರಕಾರಿಗಳನ್ನು ಸಾಧ್ಯವಿದ್ದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ತಿನ್ನಲು ಸಾಧ್ಯವಿಲ್ಲದಿದ್ದರೆ ಮನೆಯಲ್ಲಿ ತಯಾರಿಸಿದ ಹಣ್ಣು ಅಥವಾ ತರಕಾರಿ ರಸವನ್ನು ಸೇವಿಸಬಹುದು, ಆದರೆ, ಸಕ್ಕರೆ, ಉಪ್ಪು ಇತ್ಯಾದಿಗಳನ್ನು ಬೆರೆಸಬಾರದು.

4. ಉಪವಾಸ ಸಮಯದಲ್ಲಿ ಸಾಮಾನ್ಯ ಚಟುವಟಿಕೆಗಳನ್ನು ಮುಂದುವರೆಸಬೇಕು ಆದರೆ ಹೆಚ್ಚು ಶ್ರಮ ಅಥವಾ ಕಷ್ಟ ಪಡಬಾರದು.

5. ಈ ಸಮಯದಲ್ಲಿ ದೇವರ ಧ್ಯಾನ, ಭಜನೆ ಅಥವಾ ಇತರ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

6. ಉಪವಾಸವನ್ನು ತಿಂಗಳಲ್ಲಿ ಕನಿಷ್ಠ ಎರಡು ಬಾರಿ ಅಂದರೆ ಎರಡು ವಾರಕ್ಕೊಮ್ಮೆ ಮಾಡಬೇಕು. ಸಾಧ್ಯವಿರುವವರು 10 ದಿನಗಳಿಗೊಮ್ಮೆ ಅಥವಾ ವಾರಕ್ಕೊಮ್ಮೆ ಕೂಡ ಮಾಡಬಹುದು. ಇದಕ್ಕಿಂತಲೂ ಹೆಚ್ಚು ಉಪವಾಸ ಮಾಡುವುದು ಒಳ್ಳೆಯದಲ್ಲ/ಅಗತ್ಯವಿಲ್ಲ.

*ಯಾರು ಉಪವಾಸ ಮಾಡಬಾರದು?*

ವಯಸ್ಕರು, ಅಶಕ್ತರು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು. ಮಧುಮೇಹ, ಹೃದಯ ರೋಗ, ಕಡಿಮೆ ರಕ್ತದೊತ್ತಡ ಅಥವಾ ಗಂಭೀರ ಕಾಯಿಲೆ ಇರುವವರು ತಜ್ಞ ವೈದ್ಯರ ಸಲಹೆ ಮೇರೆಗೆ ಉಪವಾಸ ಮಾಡಬೇಕು.
.


Share