ಎಂಪಿ ವೀಕೆಂಡ್ ನ್ಯೂಸ್- ಅಂಚಿನಲ್ಲಿರುವ ಕನ್ನಡ ಶಾಲೆಗಳು

Share

 

ವಿನಾಶದ ಅಂಚಿನಲ್ಲಿರುವ ಕನ್ನಡ ಶಾಲೆಗಳ ಪುನರ್ ನಿರ್ಮಾಣಕ್ಕೆ ಕನ್ನಡ ಸಾಹಿತ್ಯ ಪರಿಷತ್ ಶ್ರಮಿಸಲಿ:
ಡಾ.ಭೇರ್ಯ ರಾಮಕುಮಾರ್

 

ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ವಿನಾಶದ ಅಂಚಿನಲ್ಲಿರುವ ಪುರಾತನ ಕನ್ನಡ ಶಾಲಾ ಕಟ್ಟಡಗಳನ್ನು ಪುನರ್ನಿರ್ಮಾಣ ಮಾಡುವ ಬಗ್ಗೆಯೂ ಗಮನ ಹರಿಸಬೇಕೆಂದು ಸಾಹಿತಿ,ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.

ವಿನಾಶದ ಅಂಚಿನಲ್ಲಿರುವ ಕನ್ನಡ ಶಾಲೆಗಳ ಪುನರ್ ನಿರ್ಮಾಣ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸಲಿ: ಡಾ.ಭೇರ್ಯ ರಾಮಕುಮಾರ್

ಮೈಸೂರಿನ ಅಭಿರುಚಿ ಬಳಗದ ವತಿಯಿಂದ ನಡೆದ ಕೃತಿ ಬಿಡುಗಡೆ ಸಮಾರಂಭದಲ್ಲಿ ಹಿರಿಯ ಸಾಹಿತಿ ಹಾಗೂ ಆಕಾಶವಾಣಿಯ ನಿವೃತ್ತ ಅಧಿಕಾರಿಗಳಾದ ಎನ್.ವಿ.ರಮೇಶ್ ಅವರ ಮನಸ್ಸಿನ ಅಲೆಗಳ ಉಯ್ಯಾಲೆ ಹಾಗೂ ಪ್ರತಿನಿತ್ಯ ಆರೋಗ್ಯದ ಬಗ್ಗೆ ಚಿಂತಿಸೋಣ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಹಾವೇರಿಯಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸುಮಾರು ಇಪ್ಪತ್ತೆರಡು ಕೋಟಿ ರೂ.ಗಳು ವೆಚ್ಚವಾಗಿದೆ ಎಂದು ತಿಳಿದುಬಂದಿದೆ. ಇಷ್ಟೊಂದು ಹಣದಿಂದ ಸಮ್ಮೇಳನ ನಡೆಸುವ ಅಗತ್ಯವಿತ್ತೇ ಎಂಬುದರ ಬಗ್ಗೆ ಸಾಹಿತ್ಯ ಪರಿಷತ್ತು ,ಕನ್ನಡಾಭಿಮಾನಿಗಳು ಆಲೋಚಿಸಬೇಕು. ಪ್ರತಿ ಮೂರು ವರ್ಷಕ್ಕೊಮ್ಮೆ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿ. ಉಳಿದ ಎರಡು ವರ್ಷಗಳ ಅನುದಾನದಿಂದ ಪ್ರತಿ ವರ್ಷವೂ ನೂರು ವರ್ಷ ತುಂಬಿರುವ ಇಪ್ಪತ್ತು ಶಾಲೆಗಳ ಪುನನಿರ್ಮಾಣ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಕೈಗೊಳ್ಳಲಿ. ಈ ಬಗ್ಗೆ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಗಣ್ಯರ ನಿಯೋಗವು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಿದೆ ಎಂದವರು ನುಡಿದರು.

ಇಂದು ಪುಸ್ತಕ ಪ್ರಕಟಣೆಗೆ ಅತಿ ಹೆಚ್ಚು ವೆಚ್ಚ ತಗುಲುತ್ತಿದ್ದು, ಉದಯೋನ್ಮುಖ ಲೇಖಕರು ಆರ್ಥಿಕ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿ ನಿವಾರಿಸಲು ಕನ್ನಡ ಸಾಹಿತ್ಯ ಪರಿಷತ್ತು ಸಾಹಿತಿಗಳ ಸಹಕಾರ ಸಂಘ ಆರಂಬಿಸಬೇಕು. ಪುಸ್ತಕ ಪ್ರಕಟಣೆ ಮಾಡಲಿಚ್ಚಿಸುವ ಲೇಖಕರಿಗೆ ಆರ್ಥಿಕ ಸಹಕಾರ ನೀಡಬೇಕು. ಪುಸ್ತಕ ಪ್ರಕಟಣೆಯ ನಂತರ ಅವರು ಪ್ರಕಟಿಸಿದ ಪುಸ್ತಕಗಳನ್ನು ರಿಯಾಯ್ತಿ ದರದಲ್ಲಿ ಪಡೆದು, ಅವುಗಳನ್ನು ಕನ್ನಡ ಸಂಘ-ಸಂಸ್ಥೆಗಳಿಗೆ , ಗ್ರಾಮೀಣ ಗ್ರಂಥಾಲಯಗಳಿಗೆ ಮಾರುವಂತಹ ವ್ಯವಸ್ಥೆ ಮಾಡಬೇಕು .ಆ ಮೂಲಕ ಲೇಖಕರಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕೆಂದವರು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಎನ್.ವಿ. ರಮೇಶ್ ಅವರ ಪ್ರತಿನಿತ್ಯ ಆರೋಗ್ಯದ ಬಗ್ಗೆ ಚಿಂತಿಸೋಣ ಕೃತಿಯನ್ನು ಹಿರಿಯ ಸಾಹಿತಿಗಳಾದ ಡಾ.ಲೀಲಾ ಪ್ರಕಾಶ್ ಹಾಗೂ ಮನಸ್ಸಿನ ಅಲೆಗಳ ಉಯ್ಯಾಲೆ ಕೃತಿಯನ್ನು ಸಾಹಿತಿ ಡಾ.ಭೇರ್ಯ ರಾಮಕುಮಾರ್ ಲೋಕಾರ್ಪಣೆ ಮಾಡಿದರು.

ಹಿರಿಯ ಸಾಹಿತಿ ಡಾ.ಲೀಲಾ ಪ್ರಕಾಶ್ ಅವರು ಮಾತನಾಡಿ ವೇದನೆಯಿಂದ ಸಂವೇಧನೆ, ಸಂವೇದನೆಯಿಂದ ಸಾಧನೆ .ಇದು ಜಗದ ನಿಯಮ.ಮನುಷ್ಯ ಮಾನಸಿಕ ಸಂತುಲತೆ ಹೊಂದಿರಬೇಕು.ದೈಹಿಕ ಮುಪ್ಪಿಗೆ ಮನಸ್ಸಿನ ಆಲೋಚನಾ ಕ್ರಮವೇ ಕಾರಣ. ಆದ್ದರಿಂದ ಮಾನವ ಯಾವಾಗಲೂ ತನ್ನ ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಹೊಂದಬೇಕು ಎಂದು ನುಡಿದರು.

ಹಿರಿಯ ಲೇಖಕರಾದ ಆಗುಂಬೆ ನಟರಾಜ್ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಜನರಲ್ಲಿ ಇತಿಹಾಸದ ಬಗ್ಗೆ ಆಸಕ್ತಿ ಕ್ಷೀಣಿಸುತ್ತಿದೆ.. ನಾವು ಇತಿಹಾಸ ಕಲಿಯದಿದ್ದರೆ ಇತಿಹಾಸದ ಪುನರಾವರ್ತನೆ ಆಗುತ್ತದೆ.ಇತಿಹಾಸ ಓದುವ, ಅದರಿಂದ ಮುಂದಿನ ಪೀಳಿಗೆಗೆ ಉತ್ತಮ ಆಲೋಚನೆಗಳನ್ನು ನೀಡುವ ಕೆಲಸವಾಗಬೇಕು.ಜೀವನವೆಂಬುದು ಪರಿಸರದ ಕೊಡುಗೆ. ಜೀವನ ರೂಪಿಸಿಕೊಳ್ಳುವುದು ಅವರವರ ಬುದ್ದಿವಂತಿಕೆ ಮೇಲೆ ನಿಂತಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಸಾಹಿತಿ ಎನ್.ವಿ. ರಮೇಶ್ ಹಾಗೂ ಶ್ರೀಮತಿ ಉಮಾ ರಮೇಶ್ ದಂಪತಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವೈದ್ಯಕೀಯ ಸಾಹಿತಿಗಳಾದ ಡಾ.ಹೆಚ್.ಎ.ಪಾರ್ಶ್ವನಾಥ್ ಅವರು ಮಾತನಾಡಿ ಎನ್.ವಿ.ರಮೇಶ್ ಅವರು ತಮ್ಮ ಕೃತಿಗಳಲ್ಲಿ ಸಾಮಾಜಿಕ ಹಾಗೂ ವ್ಯಕ್ತಿಗಳ ದೈಹಿಕ ಆರೋಗ್ಯ ರಕ್ಷಣೆ ಕುರಿತಂತೆ ಸರಳವಾಗಿ, ಸವಿವರವಾಗಿ ತಿಳಿಸಿದ್ದಾರೆ.ಆಕಾಶವಾಣಿ ಅಧಿಕಾರಿಗಳಾಗಿ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕುರಿತಂತೆ ನಾಟಕಗಳ ಮೂಲಕ, ಜಾಗೃತಿ ಗೀತೆಗಳ ಮೂಲಕ ಜನಜಾಗೃತಿ ಮೂಡಿಸುವಂತಹ ಮಹತ್ವದ ಸಾಧನೆ ಮಾಡಿದ್ದಾರೆ.ಅವರ ಸೇವೆಯನ್ನು ಸರ್ಕಾರ ಹಾಗೂ ಸಮಾಜ ಸರಿಯಾಗಿ ಗುರ್ತಿಸಿ, ಗೌರವಿಸಬೇಕಾಗಿದೆ ಎಂದು ನುಡಿದರು.

ಸಾಹಿತಿ ಎನ್.ವಿ.ರಮೇಶ್ ಅವರು ಮಾತನಾಡಿ ತಮ್ಮ ಹಾಗೂ ತಮ್ಮ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ವಿವರವಾಗಿ ತಿಳಿಸಿದರು.ಶ್ರೀಮತಿ ಉಮಾ ವೇದಿಕೆಯಲ್ಲಿದ್ದರು.ನಂತರ ಹಾಸ್ಯ ಕವಿಗೋಷ್ಟಿ ಕಾರ್ಯಕ್ರಮ ಜರುಗಿತು.


Share