ಎಂ ಪಿ ಫೋಕಸ್ – Weಚ್ಚೇದನ…… ರಾಮ್

Share

 

*Weಚ್ಚೇದನ……‌‌‌‌‌..!*

ವಿಚ್ಚೇದನ ಇತ್ತೀಚಿಗೆ ಸಾಕಷ್ಟು ಸದ್ದು ಮಾಡುತ್ತಿದೆ. ಬಾಲಿವುಡ್‌ನ ಅಂಗಳದಿಂದ ಖಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್‌ಗಳನ್ನು ದಾಟಿ ಸಾಮಾನ್ಯ ಜನರ ಬದುಕಿನಲ್ಲೂ ಹಾಸು ಹೊಕ್ಕಿದೆ. ವಿಚ್ಚೇದನ ಅನ್ನೋದನ್ನು ಕೇಳಿದ ತಕ್ಷಣ ಎಲ್ಲರೂ ಒಂದು ರೀತಿ ಶಾಕ್ ಆಗ್ತಾರೆ, ಬೇಸರಿಸಿಕೊಳ್ತಾರೆ, ಟೀಕಿಸ್ತಾರೆ, ಹೀಯಾಳಿಸ್ತಾರೆ. ಆದ್ರೆ ಒಂದು ನೆನಪಿಡಿ ಯಾರು ಯಾವ ರೀತಿ ಪ್ರತಿಕ್ರಿಯೆ ನೀಡಿದ್ರು ಸಹಾ, ಏನೇ ಅಂದ್ರು, ಒಪ್ಪಿದ್ರು, ಬಿಟ್ರು ಎಲ್ಲರ ಮನೆಯ ದೋಸೆನೂ ತೂತೆ. ಕೆಲವರ ಮನೆ ದೋಸೆ ಹಂಚೆ ತೂತಾಗಿರುತ್ತೇ ಅದು ಬೇರೆ ಬಿಡಿ‌. ಇನ್ನು ಖಂಡಿತಾ ಇವತ್ತು ಬುದ್ದ ಬದುಕಿದ್ರೆ ಸಾವಿಲ್ಲದ ಮನೆಯ ಸಾಸಿವೆ ಅಲ್ಲ, ಸಂಬಂಧಗಳು ಹಳಸಿಲ್ಲದ, ಪತಿ ಪತ್ನಿ ನಡುವೆ ವಿರಸವಿಲ್ಲದ, ಮುನಿಸಿಲ್ಲದ, ಜಗಳವಿಲ್ಲದ ಮನೆಯ ಸಕ್ಕರೆ ತರಲು ಹೇಳುತ್ತಿದ್ದ. ವಿಚಾರ ಅದಲ್ಲ ವಿಚ್ಚೇದನ ಏಕೆ ಹೆಚ್ಚಾಗುತ್ತಿದೆ ? ಇದಕ್ಕೆ ಕಾರಣ ಏನು ? ಯಾವ ರೀತಿ ಇದನ್ನು ಕಡಿಮೆ ಮಾಡಬಹುದು. ಈ ಬಗ್ಗೆ ಬೆಳಕು ಚೆಲ್ಲುವ ಉದ್ದೇಶದಿಂದ ಈ ಬರಹಕ್ಕೆ ಕೈ ಹಾಕಿದ್ದೇನೆ.

*Weಚ್ಚೇದನ‌‌*

ನಾನು Weಚ್ಚೇದನ ಅಂತ ಯಾಕೆ ಬರೆದೆ ಅಂದ್ರೆ ನನ್ನ ಪ್ರಕಾರ We ಅಂದ್ರೆ ಒಟ್ಟಾಗಿದ್ದ ನಾವು, ಚ್ಚೇದನ ಅಂದ್ರೆ ಬೇರೆ ಆಗುತ್ತಿರುವುದೇ ವಿಚ್ಚೇದನ. ನೆನಪಿಡಿ ಮದುವೆಯಾದ ಪ್ರತಿ ಜೋಡಿ ಒಂದಲ್ಲ ಒಂದು ಸಂದರ್ಭದಲ್ಲಿ ವಿಚ್ಚೇದನ ಪಡೆದವರೇ ಆಗಿದ್ದಾರೆ‌. ಅದು ನಿಮಿಷದ ವಿಚ್ಚೇವಾಗಿರಬಹುದು, ಗಂಟೆಗಳ ವಿಚ್ಚೇದನವಾಗಿರಬಹುದು, ದಿನಗಳು, ವಾರಗಳು, ತಿಂಗಳುಗಳು ಅಥವಾ ವರ್ಷಗಳ ವಿಚ್ಚೇದನವಾಗಿರಬಹುದು. ಆದ್ರೆ ವಿಚ್ಚೇದನ ಆಗಿಯೇ ಇರುತ್ತದೆ‌‌. ಅದು ಸಹಜ ಕೂಡಾ ಯಾಕಂದ್ರೆ ಹಿರಿಯರು ಹೇಳಿರುವಂತೆ ಕತ್ತಲೆಯಲ್ಲಿ ಬದುಕಿದವರಿಗೆ ಮಾತ್ರ ಬೆಳಕಿನ ಮಹತ್ವದ ಅರಿವಿರುತ್ತದೆ. ನೋವಿನ ಸಾಗರ ಈಜಿದವನಿಗೆ ಸುಖಃದ ಸರೋವರದ ಫೀಲ್ ಸಿಗುತ್ತದೆ. ಸೋತು ಸುಣ್ಣವಾಗಿದ್ದರೆ ಮಾತ್ತ ಗೆಲುವಿನ ಸಿಹಿ ರುಚಿಸುತ್ತದೆ. ಅದೇ ರೀತಿ ಗಂಡ ಹೆಂಡ್ರು ಜಗಳ ವಿರಸ ಮುನಿಸು ತಾತ್ಕಾಲಿಕವಾಗಿದ್ದು ನಂತರದ ಕ್ಷಣಗಳು ಸೊಗಸಾಗಿರುತ್ತದೆ. ಜಗಳ, ವಿರಸ, ಮುನಿಸು ಕಳೆದ ಕ್ಷಣ ಅದ್ಬುತವಾಗಿರುತ್ತದೆ. ಯಾರು ಒಪ್ಪಲಿ ಬಿಡಲಿ ಮದುವೆಯಾದ ಎಲ್ಲರಿಗೂ ಇದು ಅನುಭವಕ್ಕೆ ಬಂದೇ ಬಂದಿರುತ್ತದೆ. ಇನ್ನು ಮನೆಯ ಕಟ್ಟಡ ಹಾಳಾದಾಗ ಮನೆ ಮಾಲೀಕನ ಮುಂದೆ ಆಯ್ಕೆಯಿದೆ. ಅದನ್ನು ಕೆಡವಿಬಿಡುವುದಾ ? ಅಥವಾ ದುರಸ್ತಿಗೊಳಿಸುವುದಾ ? ನಮ್ಮ ವಿವಾಹ ಬಂಧದಲ್ಲೂ ಅದನ್ನು ಮುರಿಯುವ ಇಲ್ಲವೆ ಉಳಿಸುವ ಆಯ್ಕೆ ನಮ್ಮ ಮುಂದಿರುತ್ತದೆ. ನಮ್ಮ ಎಲ್ಲಾ ಸಮಸ್ಯೆಗಳಿಗೆ ವಿಚ್ಛೇದನ ಪಡೆಯುವುದೇ ಸೂಕ್ತ ಅಂದುಕೊಂಡಿದ್ದರೆ ಅದು ಭ್ರಮೆ.

ವಿವಾಹ ವಿಚ್ಛೇದನದಿಂದ ಎಲ್ಲ ಕಷ್ಟಗಳು ಕೊನೆಗೊಳ್ಳುವುದಿಲ್ಲ. ಬದಲಾಗಿ ಅದು ಕೆಲವೊಂದು ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ನೀಡಿ. ಹೊಸದಾದ ಶಾಶ್ವತ ಸಮಸ್ಯೆಗಳಿಗೆ ಅಡಿಪಾಯವಾಗಿ ಬಿಡುತ್ತದೆ. ಅತ್ಯಂತ irritate ಆಗುವ ಮಾತು ಅಂದ್ರೆ ಹುಡುಗ ಹಾದಿ ತಪ್ಪಿದ್ದಾನಾ ? ಒಂದು ಮದುವೆ ಮಾಡ್ಸಿ ಎಲ್ಲಾ ಸರಿಯಾಗುತ್ತೇ. ಗಂಡ ಹೆಂಡ್ತಿ ಜಗಳನಾ ? ಡೈವೋರ್ಸ್ ಕೊಡ್ಸಿ ಎಲ್ಲಾ ಸರಿಯಾಗುತ್ತೇ ಅನ್ನೋದು. ನಿಮಗೆ ನೆನಪಿರಲಿ ಎರಡು ಸಹಾ ಕನ್ನಡಿಯೊಳಗಿನ ಗಂಟಷ್ಟೆ.

*ಮುನಿಸು ವಿರಸಕ್ಕೆ ಕಾರಣಗಳು‌‌‌‌‌……!*

ಮನುಷ್ಯ ಸಂಘ ಜೀವಿ. ಆತ ಒಂಟಿಯಾಗಿ ಜೀವಿಸಲಾರ. ಆತನಿಗೆ ಸಾಂಗತ್ಯ ಬೇಕು. ಅಪ್ಪ, ಅಮ್ಮ, ಅಣ್ಣ ತಮ್ಮ, ಅಕ್ಕ, ತಂಗಿ, ಅತ್ತೆ, ಮಾವ, ನಾದಿನಿ, ಅತ್ತಿಗೆ, ಮಕ್ಕಳು, ಮೊಮ್ಮಕ್ಕಳು, ಬಂಧು, ಬಳಗ ಸ್ನೇಹಿತರು. ಇದೆಲ್ಲಕ್ಕೂ ಮೀರಿದ ಸಂಬಂಧ ಪತಿ ಪತ್ನಿಯದು. ಹೌದು ಜಗತ್ತಿನ ಯಾವ ಮೂಲೆಗೆ ಹೋದರು ಈ ಸಂಬಂಧಕ್ಕಿರುವ ಪ್ರಾತಿನಿಧ್ಯತೆ, ಪ್ರಾಮುಖ್ಯತೆ ಬಹುಶಃ ಯಾವುದಕ್ಕೂ ಸಿಗಲಿಕ್ಕಿಲ್ಲ. ಆದ್ರೆ ಇದೇ ಸಂಬಂಧ ಇಂದು ಹೆಚ್ಚು ಸದ್ದು ಮಾಡುತ್ತಿರುವುದು ದುರ್ದೈವವೇ ಸರಿ. ಇದಕ್ಕೆ ಪ್ರಮುಖ ಕಾರಣ ನೂರಕ್ಕೆ ನೂರು ಸಂಬಂಧಗಳ ಮಹತ್ವವನ್ನು ಅರಿಯುವಲ್ಲಿ ನಾವು ವಿಫಲರಾಗಿದ್ದೇವೆ‌‌. ಪರಸ್ಪರ ಗೌರವಿಸುವುದನ್ನು ಮರೆತಿದ್ದೇವೆ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ತಪ್ಪುಗಳಿಗೆ ಅತ್ಯುತ್ತಮ ವಕೀಲರಾಗುವ ನಾವು ಬೇರೆಯವರ ತಪ್ಪಿಗೆ ಅತ್ಯುತ್ತಮ ಜಡ್ಡ್‌ಗಳಾಗುತ್ತಿದ್ದೇವೆ. ಯಾರು ಒಪ್ಪಲಿ ಬಿಡಲಿ ಸಂಬಂಧಗಳು ಯಾಂತ್ರಿಕವಾಗಿವೆ, ತಾಂತ್ರಿಕವಾಗಿವೇ. ಭಾವನೆಗಳಿಗೆ ಸ್ಥಳವಿಲ್ಲದಂತಾಗಿದೆ. ಭಾವನೆಗಳು ಬೆಳೆಯಬೇಕಾದರೆ ಪ್ರೀತಿ, ಗೌರವ ಪ್ರಾಮುಖ್ಯತೆ ವಿಶ್ವಾಸದ ಗೊಬ್ಬರ ಹಾಕಿ ನೀರೆರೆದು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳಬೇಕು. ಆದರೆ ಯಾವಾಗ ಭಾವನೆಯ ಸಸಿ ಇದ್ಯಾವುದು ಸಿಗದೆ ಒಣಗಿ ಬಡವಾಗುತ್ತದೋ ಆಗ ಸಮಸ್ಯೆಯೆಂಬ ಕಳೆಗಳು ಚಿಗುರೊಡೆಯುತ್ತವೆ. ಆರ್ಥಿಕ, ಸಾಮಾಜಿಕ ಸ್ಟೇಟಸ್ ವಿರಸಕ್ಕೆ ಮುಖ್ಯ ಕಾರಣ ಎಂದರೂ ತಪ್ಪಾಗಲಾರದು. ನನ್ನ ಪ್ರಕಾರ ಎರಡಕ್ಕೂ ಸಹಾ ದಾಂಪತ್ಯ ಸಂಬಂಧದ ಮುಂದೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಸಾಮಾಜಿಕವಾಗಿ ಯಾರು ಬೇಕಾದರೂ ಪ್ರಸಿದ್ದಿಯಾಗಬಹುದು. ಕೋಟಿ ಕೋಟಿ ಹಣ ಸಂಪಾದಿಸಬಹುದು ಆದ್ರೆ ಪ್ರೀತಿಯನ್ನು ಪಡೆಯಲು ಇವೆರಡರಿಂದಲೂ ಸಾಧ್ಯವಿಲ್ಲ. ಆದ್ರೆ ಇವರೆಡರಿಂದ ನಾಟಕೀಯವಾದ ತಾತ್ಕಾಲಿಕವಾದ ಏನಾನ್ನು ಬೇಕಾದರೂ ಪಡೆಯಬಹುದು. ಪತಿ, ಪತ್ನಿ ಸಂಬಂಧ ಕನ್ನಡಿಯಂತೆ. ಒಬ್ಬರ ಮುಖಕ್ಕೆ ಮಸಿ ಬಳಿದು ಕನ್ನಡಿಯಲ್ಲಿ ಮಸಿ ರಹಿತವಾಗಿ ಕಾಣಿಸಬೇಕು ಅಂತಾ ಅಪೇಕ್ಷೆಪಟ್ಟರೆ ಅದು ಮೂರ್ಖತನದ ಪರಮಾವಧಿ. ನೀವು ಪ್ರೀತಿ ಕೊಟ್ಟರೆ ಪ್ರೀತಿ ಸಿಗುತ್ತದೆ, ಕೋಪ ಕೊಟ್ಟರೆ ಕೋಪ, ತಾಪ ನೀಡಿದ್ರೆ ತಾಪ ಬೌನ್ಸ ಬೇಕಾಗುತ್ತದೆ. ಇದು ಜಸ್ಟ್ ಗೀವ್ ಅಂಡ್ ಟೇಕ್ ಪಾಲಿಸಿ ಅಷ್ಟೇ. ನೀವು ಏನು ಕೊಡುತ್ತೀರೋ ಅದು ಗಂಡಾಗಲಿ, ಹೆಣ್ಣಾಗಲಿ ದುಪ್ಪಟ್ಟಾಗಿ ನಿಮಗೆ ವಾಪಸ್ಸು ಬರುತ್ತದೆ. Just Like ಕರ್ಮ Returns.

*ಏನು ಮಾಡಬೇಕು…..!*

ಮೊದಲನೆಯದಾಗಿ ಇಡೀ ಜಗತ್ತಿನಲ್ಲಿ ಯಾರು ಸರಿಯಲ್ಲ‌ ಯಾರು ಸರಿ ಅನ್ನೋದು ನಾವು ನೋಡುವ ದೃಷ್ಟಿಕೋನದ ಮೇಲೆ ನಿಂತಿದೆ ಅನ್ನೋದನ್ನು ಅರಿಯಬೇಕು. ಜೀವನದಲ್ಲಿ ತಪ್ಪು ಮಾಡದವರು ಎಡವದವರು ಬೂದುಕನ್ನಡಿ ಹಾಕಿ ಹುಡುಕಿದರು ಯಾರು ಸಿಗಲಾರರು‌ ಅನ್ನೋದನ್ನು ತಿಳಿಯಬೇಕು. ಇದೆಲ್ಲದ್ದಕ್ಕಿಂತ ಮುಖ್ಯವಾಗಿ ಸರಿ ತಪ್ಪುಗಳು ಕೇವಲ ಅಭಿಪ್ರಾಯ ಅಷ್ಟೇ ಅನ್ನೋದನ್ನಾ ಅರಿಯಬೇಕು. ಇದು ಒಂದು ರೀತಿ 6 ಮತ್ತು 9 ರ ಗಲಾಟೆಯಂತೆ‌. ಬೇಕಿದ್ರೆ ನೀವು ಈಗಲೇ ಟ್ರೈ ಮಾಡಿ ನೆಲದ ಮೇಲೆ 6ನ್ನು ಬರೆಯಿರಿ. ಒಂದು ಕಡೆ ನೀವು ನಿಲ್ಲಿ ಮತ್ತೊಂದು ಕಡೆ ನೀವು ಏನು ಹೇಳಿದರು ಸರಿ ಎನ್ನುವ ಮತ್ತೊಬ್ಬರನ್ನು ನಿಲ್ಲಿಸಿ. ನಿಮಗೆ ಬರೆದಿರುವುದು 6 ಆದರೆ ನಿಮ್ಮ ಎದುರುಗಡೆ ನಿಂತವರಿಗೆ ಅದು 9. ಈಗ ನೀವೇ ಹೇಳಿ ಇಲ್ಲಿ ಯಾರು ಸರಿ ಯಾರು ತಪ್ಪು ? ನಿಮ್ಮ ಪ್ರಕಾರ ನೀವು ಸರಿ ಯಾಕಂದ್ರೆ ಅದು ನಿಮಗೆ 6 ಕಾಣಿಸುತ್ತಿದೆ. ಮುಂದೆ ಇರುವವರು ತಪ್ಪು. ಅವರ ಪ್ರಕಾರ ಅವರೇ ಸರಿ ಯಾಕಂದ್ರೆ ಅವರಿಗೆ 9 ಕಾಣಿಸುತ್ತಿದೆ. ನೀವು ತಪ್ಪು. ವಾಸ್ತವವಾಗಿ ಇಲ್ಲಿ ಇಬ್ಬರು ಸರಿ, ಇಬ್ಬರು ತಪ್ಪು‌. ಇದನ್ನು ಅರಿತರೆ ಬಹುತೇಕ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ತಪ್ಪು ಎಂದು ಅನಿಸಿದಾಗ ಮಾತನಾಡಿ ಬಗೆಹರಿಸಿಕೊಂಡರೆ ಉತ್ತಮ. ಮಾತನಾಡುವುದೆಂದರೆ ಜಗಳ ಆಡುವುದಲ್ಲ. ನಿಮ್ಮ ಭಾವನೆಗಳನ್ನು ಹೇಳಿ ಅವರು ಹೇಳುವುದನ್ನು ಸಂಯಮದಿಂದ ಕೇಳುವುದು. ಭಿನ್ನಾಭಿಪ್ರಾಯಗಳಿದ್ದಾಗ ಒಮ್ಮತಕ್ಕೆ ಪ್ರಯತ್ನಿಸಬೇಕು. ಆಗಿಲ್ಲವಾ ಪರಸ್ಪರರ ಅಭಿಪ್ರಾಯಗಳನ್ನು ಗೌರವಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಜಗಳದಲ್ಲಿ ಮೂರನೇ ಅವರಿಗೆ ಎಂಟ್ರಿ ಕೊಡಬೇಡಿ. ಅವರು ಸ್ನೇಹಿತರೇ ಇರಲಿ ಸಂಬಂಧಿಕರೇ ಇರಲಿ ಯಾರನ್ನು ಕರೆತರಬೇಡಿ. ಸಂಸಾರ ಮಾಡುವವರು ನೀವು ಬೇರೆ ಬಂದು ಹೇಳುವವರು ಮಾತನಾಡುವವರು ಅಲ್ಲ. ಇನ್ನು ಸಂಬಂಧದ ಆರಂಭ ಹೇಗಿರುತ್ತದೋ ಅದು ಕೊನೆಯವರೆಗೂ ಅದೇ ರೀತಿ ಇರಬೇಕು. ಸ್ವಲ್ಪ ಬದಲಾದರೂ ಬಿರುಕು ಖಂಡಿತಾ. ಆರಂಭದಲ್ಲಿ ಅತಿಯಾದ ಪ್ರೀತಿ ತೋರಿ ಅಗತ್ಯಕ್ಕಿಂತ ಹೆಚ್ಚು ಸಮಯ ನೀಡಿ ನಂತರ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡರೆ ಖಂಡಿತಾ ಹೇಗೆ ನೀವೆ ಯೋಚಿಸಿ ? ನಿಮಗೆ ಗೊತ್ತಿರಲಿ ಬಹುತೇಕ ಗಲಾಟೆಗಳು ಇದೇ ವಿಚಾರವಾಗಿ ಆಗಿರುತ್ತದೆ.

*ಪೋಷಕರ ಪಾತ್ರ………!*

ನನ್ನ ಅನುಭವಕ್ಕೆ ಬಂದಿರುವಂತೆ. Weಚ್ಛೇದನದಲ್ಲಿ ಪೋಷಕರದ್ದೇ ಅಗ್ರಪಾಲು. ಯಾರನ್ನೇ ಕೇಳಿ ಅಯ್ಯೋ ನಮ್ಮ ಅಳಿಯಂದಿರು ಓಕೆ ಅವರ ಮನೆಯವರೇ ಸರಿಯಿಲ್ಲ ಅನ್ನೋದು ಬಹುತೇಕರ ಅಭಿಪ್ರಾಯವಾಗಿರುತ್ತದೆ. ಆಗಂತ ಹಿರಿಯ ಜೀವಗಳನ್ನು ದೂಷಿಸುತ್ತಿಲ್ಲ. ಕೊಂಚ ಸಮಯಪ್ರಜ್ಞೆ ತಾಳ್ಮೆ ತ್ಯಾಗದಿಂದ ಮನೆಯ ದೊಡ್ಡವರು Weಚ್ಚೇದನಗಳಿಗೆ ಬ್ರೇಕ್ ಹಾಕಬಹುದು. ಇಂತಹ ಸಂದರ್ಭಗಳಲ್ಲಿ ಪೋಷಕರ ಪಾತ್ರ ಮಹತ್ವವಾದದ್ದು. ಯಾರೇ ಆಗಲಿ ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋದನ್ನು ಮರೆತು ಪ್ರತಿಕ್ರಿಯಿಸಬೇಕು. ಸಮಸ್ಯೆ ಬಗ್ಗೆ ಅರಿತು ಬಗೆಹರಿಸುವ ಕೆಲಸ ಮಾಡಬೇಕೆ ಹೊರತು ಅದಕ್ಕೆ ತುಪ್ಪ ಸುರಿಯುವ ಕೆಲಸ ಮಾಡಬಾರದು. ಅದರಲ್ಲೂ ಗಂಡೆತ್ತವರು. ನನ್ನ ಮಗ ಗಂಡಸು ಏನಾಗುತ್ತೇ ಅನ್ನೋ ಇಗೋ ಪಕ್ಕಕ್ಕಿಟ್ಟು ಯೋಚಿಸಬೇಕು. ಅದರಲ್ಲೂ ಮುಖ್ಯವಾಗಿ ತಮ್ಮ ಮನೆಗೆ ಬಂದ ಸೊಸೆ ಮತ್ತೊಂದು ಮನೆಯ ಮಗಳು ಅನ್ನೋದನ್ನಾ ಮರೆಯಬಾರದು. ಯಾಕಂದ್ರೆ ಅವರ ಮನೆಯ ಮಗಳು ಇನ್ನೊಬ್ಬರ ಮನೆಯ ಸೊಸೆಯಾಗಿರುತ್ತಾಳೆ. ಇನ್ನು ಪೋಷಕರಾದವರು ಹಿಂದೆ ತಾವು ಸೊಸೆಯಾಗಿ ಅನುಭವಿಸಿದ ಸಮಸ್ಯೆ ಸವಾಲುಗಳನ್ನು ಪಾಠ ಮಾಡಿಕೊಳ್ಳಬೇಕೆ ಹೊರತು ಸೇಡು ಮಾಡಿಕೊಂಡು ಕಾಡಬಾರದು.

*ಕೊನೆ ಮಾತು*

ಇನ್ನು ಈ ನಮ್ಮ ಬದುಕು ನೀರಿನ ಮೇಲಿನ ಗುಳ್ಳೆಯಂತೆ. ಮೂರು ದಿನದ ಬದುಕಿನಲ್ಲಿ ನೂರು ಜಂಜಾಟಗಳಲ್ಲಿ ಸಿಲುಕುವ ಬದಲು ಎಲ್ಲವನ್ನೂ ಖುಷಿ ಖುಷಿಯಾಗಿ ಸ್ವೀಕರಿಸಿ ಮುಂದೆ ಸಾಗಾಣೋ. ಕೋಪ ತಾಪ ಒತ್ತಡಗಳನ್ನು ನಿಭಾಯಿಸಿಕೊಂಡು ಸಾಗೋಣ. ಕೆಟ್ಟ ಅನುಭವಗಳನ್ನು ನೀರ ಮೇಲೆ ಬರೆದು ಮರೆತು ಬಿಡೋಣ. ಒಳ್ಳೆಯ ಅನುಭವಗಳನ್ನು ಬಂಡೆಯಲ್ಲಿ ಕೆತ್ತಿ ಮೆಲುಕು ಹಾಕೋಣ. ಈ ಮೂಲಕ ಬದುಕನ್ನು ಹಸನಾಗಿಸಿಕೊಳ್ಳೋಣ.

*ಖುಷಿಯಾಗಿರಿ – ಹೃದಯವಂತರಾಗಿರಿ*

*ರಾಮ್ ಮೈಸೂರು*


Share