ಎಸ್‍ಎಸ್‍ಎಲ್ ಸಿ ಫಲಿತಾಂಶ. ಚಿಕ್ಕಬಳ್ಳಾಪುರ ಪ್ರಥಮ ಸ್ಥಾನ ಸಚಿವರ ಶ್ಲಾಘನೆ

Share

ಎಸ್‍ಎಸ್‍ಎಲ್ ಸಿ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರಕ್ಕೆ ಪ್ರಥಮ ಸ್ಥಾನ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಕೊರೊನಾ ಸೋಂಕಿತರ ಬಗ್ಗೆ ಕಳಂಕ ಭಾವನೆ ಬೇಡ

ಬೆಂಗಳೂರು, ಆಗಸ್ಟ್ 10, ಸೋಮವಾರ

ಎಸ್‍ಎಸ್‍ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಮೊದಲ ಸ್ಥಾನಕ್ಕೆ ಬಂದಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಹೊಸ ದಾಖಲೆ ಬರೆದಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಶ್ಲಾಘಿಸಿದ್ದಾರೆ.

ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಚಿಕ್ಕಬಳ್ಳಾಪುರ ಕಳೆದ ವರ್ಷ 20 ನೇ ಸ್ಥಾನದಲ್ಲಿತ್ತು. ಆಗ ನಾನಿನ್ನೂ ಶಾಸಕನಾಗಿ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡುತ್ತಿದ್ದೆ. ಇನ್ನು ಮುಂದೆ ಕನಿಷ್ಠ 10 ಸ್ಥಾನಗಳ ಒಳಗೆ ಬರಬೇಕು ಎಂದು ಹೇಳಿದ್ದೆ. ಆದರೆ ಈ ಬಾರಿ ಜಿಲ್ಲೆಯು ಮೊದಲ ಸ್ಥಾನ ಗಳಿಸಿದೆ. ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಅಧಿಕಾರಿಗಳಿಗೆ ಶುಭ ಕೋರುತ್ತೇನೆ. ಅನುತ್ತೀರ್ಣರಾದವರು ಆತ್ಮವಿಶ್ವಾಸ ಕಳೆದುಕೊಳ್ಳುವುದು ಬೇಡ. ಅವರಿಗೆ ಮತ್ತೆ ಅವಕಾಶ ಇದೆ’’ ಎಂದು ಹೇಳಿದರು.

“ಜಿಲ್ಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ 3,000 ವಿಶೇಷ ವಿದ್ಯಾರ್ಥಿಗಳನ್ನು ಗುರುತಿಸಲಾಗಿತ್ತು. ನಂತರ ಅವರಿಗೆ ವಿಷಯವಾರು 9 ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ಅಭ್ಯಾಸ ಮಾಡಿಸಲಾಗಿತ್ತು. ‘ಟೆನ್ ಟೈಮ್ಸ್ ಪ್ರಾಕ್ಟೀಸ್’ ಕ್ರಮವನ್ನು ಜಾರಿ ಮಾಡಲಾಗಿತ್ತು’’ ಎಂದು ವಿವರಿಸಿದರು.

ಒಂದು ಲೀಟರ್ ಖರೀದಿಯೂ ಇಲ್ಲ

ಸ್ಯಾನಿಟೈಜರ್ ಸಂಬಂಧ ಲೋಕಾಯುಕ್ತದಲ್ಲಿ ದೂರು ಸಲ್ಲಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಡಾ.ಕೆ.ಸುಧಾಕರ್, “ವೈದ್ಯಕೀಯ ಶಿಕ್ಷಣ ಇಲಾಖೆಯು ಒಂದು ಲೀಟರ್ ಸ್ಯಾನಿಟೈಜರ್ ಕೂಡ ಖರೀದಿ ಮಾಡಿಲ್ಲ. ಇದು ರಾಜಕೀಯ ಪ್ರೇರಿತ ನಡೆಯಾಗಿದ್ದು, ದೂರು ಕೊಟ್ಟವರ ಬಗ್ಗೆ ಮರುಕ ಹುಟ್ಟಿದೆ. ಯಾವುದೇ ರೀತಿಯ ತನಿಖೆಗಳನ್ನು ನಾನು ಸ್ವಾಗತಿಸುತ್ತೇನೆ’’ ಎಂದರು.

ಸಚಿವ ಶ್ರೀರಾಮುಲು ಜೊತೆ ಮಾತುಕತೆ

ಸಚಿವ ಡಾ.ಕೆ.ಸುಧಾಕರ್ ಅವರು ಬೌರಿಂಗ್ ಆಸ್ಪತ್ರೆಗೆ ತೆರಳಿ, ವೀಡಿಯೋ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೆ ಮಾತನಾಡಿದರು.

“ನಮ್ಮ ಆಸ್ಪತ್ರೆಗೆ ಬಂದು ದಾಖಲಾಗಿ ಇಡೀ ರಾಜ್ಯದ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದೀರಿ. ನಿಮಗೆ ಮೊದಲು ಅಭಿನಂದನೆ ಹೇಳುತ್ತೇನೆ. ಎಲ್ಲ ವೈದ್ಯರೊಂದಿಗೆ ಮಾತನಾಡಿ, ನಿಮ್ಮ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದೇನೆ. ನಿಮಗೆ ಬಹಳ ಕಡಿಮೆ ಸೋಂಕು ಇದೆ. ನೀವು ಈ ಪರಿಸ್ಥಿತಿಯನ್ನು ಗೆದ್ದು ಬರಲಿದ್ದೀರಿ’’ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸಚಿವರು ಹೇಳಿದ ಇತರೆ ಅಂಶಗಳು

*ವೈದ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಕೊರೊನಾ ವಾರಿಯರ್ ಗಳಿಗೆ ಬಿಡುಗಡೆ ದಿನಗಳ ನಿಯಮದಲ್ಲಿ ಕೊಂಚ ವಿನಾಯಿತಿ ಇದೆ.

*ನೆರೆ ಬಂದಾಗ ಪರಿಶೀಲನೆ ನಡೆಸುವ ಬದಲು ಲೆಕ್ಕ ಹೇಳಿಕೊಂಡು ಕೂರಬೇಕೇ? ಹಾಗೆ ಲೆಕ್ಕ ಕೊಡಬೇಕೆಂದರೆ ಕೊಡೋಣ.

*ಕಾಂಗ್ರೆಸ್ ನವರಿಗೆ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡಬೇಕಿದೆ. ನೈತಿಕತೆಯಿಂದ ಇರುವವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರೆ ಒಳ್ಳೆಯದಿತ್ತು.

*ಸಚಿವ ಡಾ.ಕೆ.ಸುಧಾಕರ್, ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿದರು. ಸಂಸ್ಥೆಯಲ್ಲಿ ನಡೆಸಲಾಗುತ್ತಿರುವ ಕೋವಿಡ್ ಪರೀಕ್ಷೆ, ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ, ಮೂಲಸೌಕರ್ಯ ಮೊದಲಾದ ವಿಷಯಗಳ ಬಗ್ಗೆ ಸಚಿವರು ಮಾಹಿತಿ ಪಡೆದರು.

*ಸಚಿವ ಡಾ.ಕೆ.ಸುಧಾಕರ್, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರೊಂದಿಗೆ ಕೋವಿಡ್19 ಕುರಿತ ಸಂವಾದದಲ್ಲಿ ಪಾಲ್ಗೊಂಡರು.


Share