ಎಸ್ ಎಸ್ ಎಲ್ ಸಿ ಪರೀಕ್ಷೆ : ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಿ

Share

ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿ ಜೀವನವನ್ನು ನಿರ್ಧರಿಸುತ್ತದೆ – ಡಿ. ಕೆ ವಿ ರಾಜೇಂದ್ರ

ಮೈಸೂರು,ಮಾ.21.(ಕರ್ನಾಟಕ ವಾರ್ತೆ):- ಮಕ್ಕಳ ವಿದ್ಯಾರ್ಥಿ ಜೀವನವನ್ನು ನಿರ್ಧರಿಸುವಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯು ಪ್ರಮುಖ ತಿರುವಾಗಿರುತ್ತದೆ. ಪರೀಕ್ಷೆ ನಡೆಸುವಲ್ಲಿ ಲೋಪ ದೋಷಗಳು ಕಂಡು ಬಂದರೆ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಂಬoಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿ ನಮ್ಮ ಜಿಲ್ಲೆಯಲ್ಲಿ 143 ಸರ್ಕಾರಿ ಪರೀಕ್ಷಾ ಕೇಂದ್ರಗಳು ಹಾಗೂ ಐದು ಖಾಸಗಿ ಪರೀಕ್ಷಾ ಕೇಂದ್ರಗಳಲ್ಲಿ 37,475 ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿದ್ದು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಿದ್ದಾರೆ.
ಮಾಲ್ ಪ್ರಾಕ್ಟೀಸ್ ಆಗದೆ ಇರುವ ರೀತಿಯಲ್ಲಿ ಎಚ್ಚರವಹಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಅವ್ಯವಸ್ಥೆ ಮತ್ತು ಅಕ್ರಮ ಕಂಡು ಬಂದರೆ ಸೆಂಟರ್ ಚೀಫ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪರೀಕ್ಷೆ ಕೇಂದ್ರಗಳಲ್ಲಿ ಮೊಬೈಲ್ ನಿಷೇಧಿಸಿದ್ದು, ನಾವು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡುವಾಗ ನಾವು ಸಹ ಫೋನ್‌ನ್ನು ಹೊರಗಿಟ್ಟು ಬರ್ತೀವಿ ಎಂದು ತಿಳಿಸಿದ್ದಾರೆ.
ವಿಶೇಷ ಚೇತನ ಮಕ್ಕಳಿಗೆ 20 ನಿಮಿಷಗಳ ಅಧಿಕ ಅವಧಿ ನೀಡಲಾಗುವುದು. ಪರೀಕ್ಷಾ ಸಮಯ ಹತ್ತಿರವಾದಂತೆ ಮಕ್ಕಳಲ್ಲಿ ಒಂದು ರೀತಿಯ ಭಯ/ಆತಂಕ ಕಾಡುತ್ತದೆ. ಆದ್ದರಿಂದ ಮಕ್ಕಳಿಗೆ ಆಪ್ತ ಸಮಾಲೋಚನೆ ನಡೆಸಿ ಆತ್ಮವಿಶ್ವಾಸ ತುಂಬಬೇಕು. ತರಗತಿ ಅವಧಿಯಲ್ಲಿ ಮಾತ್ರವಲ್ಲದೆ ಉಳಿದ ಸಮಯದಲ್ಲೂ ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಅವರ ಶೈಕ್ಷಣಿಕ ಸಮಸ್ಯೆಗಳಿಗೆ ಸ್ಪಂದಿಸಿ ಆಗ ಅವರಿಗೆ ನೀವು ದೇವರಂತೆ ಕಾಣುತ್ತೀರ ಎಂದು ಸಲಹೆ ನೀಡಿದರು.
ಪರೀಕ್ಷೆಯಲ್ಲಿ ಹೆಚ್ಚು ಮಕ್ಕಳು ಗೈರು ಹಾಜರಾಗದಂತೆ ಎಚ್ಚರವಹಿಸಿ. ಮಾ.31 ರೊಳಗೆ ಮಕ್ಕಳು ಯಶಸ್ವಿಯಾಗಿ ಪರೀಕ್ಷೆ ಎದುರಿಸಲು ನಿಮ್ಮ ಪ್ರಯತ್ನಗಳನ್ನು ಮಾಡಿ ನಂತರ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಿ. ಪರೀಕ್ಷಾ ಕೊಠಡಿಯಲ್ಲಿ ಗಾಬರಿಗೊಳ್ಳುವ ಮಕ್ಕಳಿಗೆ ಸಮಾಧಾನದಿಂದ ಮಾತನಾಡಿಸಬೇಕು. ಪ್ರತಿದಿನ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಬರಲು ತೊಂದರೆ ಇರುವ ಮಕ್ಕಳಿಗೆ ಮಾತೃ ಹೃದಯದಿಂದ ವರ್ತಿಸಿ, ಹಾಸ್ಟೆಲ್ ವ್ಯವಸ್ಥೆ ಮಾಡಿ ಹಾಗೂ ಯಶಸ್ವಿಯಾಗಿ ಪರೀಕ್ಷೆ ನಡೆಸಿ ಎಂದು ಸೂಚಿಸಿದ್ದಾರೆ.
ಸರ್ಕಾರಿ ಬಸ್‌ನಲ್ಲಿ ಪರೀಕ್ಷೆ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಮಕ್ಕಳು ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಬಹುದು. ನಿಗದಿತ ಸಮಯದಲ್ಲಿ ಬಸ್‌ಗಳ ಸಮಸ್ಯೆ ಇದ್ದಲ್ಲಿ ಅಥವಾ ಬಸ್‌ಗಳು ನಿಲ್ಲಿಸದೆ ಇರುವಂತಹ ಸಮಸ್ಯೆಗಳು ಇದ್ದಲ್ಲಿ ಮುಂಚಿತವಾಗಿಯೇ ನಮ್ಮ ಗಮನಕ್ಕೆ ತಂದಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳೊಡನೆ ಮಾತನಾಡಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರಾಮಚಂದ್ರ ರಾಜೇ ಅರಸ್ ಅವರು ಮಾತನಾಡಿ, ಅಂಗವಿಕಲ ಮಕ್ಕಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೆಲಮಹಡಿಯಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಿ, ಮಕ್ಕಳೊಟ್ಟಿಗೆ ಸೌಜನ್ಯತೆಯಿಂದ ವರ್ತಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಕೊಠಡಿಗಳು ಹಾಗೂ ಸಿಸಿಟಿವಿಗಳ ವ್ಯವಸ್ಥೆ ಮಾಡಲಾಗುವುದು. ವಿಷಯವಾರು ಆಯಾ ಸಬ್ಜೆಕ್ಟ್ನ ಶಿಕ್ಷಕರನ್ನು ಹೊರತುಪಡಿಸಿ ಬೇರೆ ವಿಷಯದ ಶಿಕ್ಷಕರನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗುವುದು. ಒಂದು ವೇಳೆ ಶಿಕ್ಷಕರ ಕೊರತೆ ಕಂಡು ಬಂದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪರೀಕ್ಷೆಗೂ ಮುನ್ನ ಹಾಗೂ ಪರೀಕ್ಷಾ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು ನಿರ್ವಹಿಸಬೇಕಾದ ಪ್ರಮುಖ ಕರ್ತವ್ಯಗಳ ಬಗ್ಗೆ ಹಾಗೂ ಪರೀಕ್ಷೆಯ ರೂಪುರೇಷೆಗಳ ಬಗ್ಗೆ ಸವಿವರವಾಗಿ ಡಿಡಿಪಿಐ ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜರಾಂ, ಜಿಲ್ಲೆಯ ವಿವಿಧ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೋಡಲ್ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.


Share