ಕನ್ನಡ ಭಾಷೆ ಅಸ್ಮಿತೆಗೆ ಧಕ್ಕೆ ಆಗದಿರಲಿ

15
Share

 

*ಕನ್ನಡ ಭಾಷೆ ಅಸ್ಮಿತೆಗೆ ಧಕ್ಕೆ ಆಗದಿರಲಿ*

*ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಗಂಗಾನಾಯಕ್ ಹೇಳಿಕೆ*

*ಮೈಸೂರು*
ಇತರೆ ಭಾಷೆಗಳ ಮೇಲಿನ ವ್ಯಾಮೋಹದಿಂದ ಮಾತೃಭಾಷೆ ಕನ್ನಡದ ಅಸ್ಮಿತೆಗೆ ಧಕ್ಕೆಯಾಗಬಾರದು. ಹಾಗಾಗಿ ಕನ್ನಡ ಕೇವಲ ಕೊರಳ ಭಾಷೆಯಾಗದೇ ಪ್ರತಿಯೊಬ್ಬರ ಕರುಳ ಭಾಷೆಯಾಗಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಗಂಗಾನಾಯಕ್ ಹೇಳಿದರು.
ನಗರದ ಮಂಚೇಗೌಡನಕೊಪ್ಪಲಿನಲ್ಲಿರುವ ಸರ್ಕಾರಿನ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿ ಶ್ರೇಷ್ಠ ವಿಜ್ಞಾನಿಗಳು ಹಾಗೂ ಕನ್ನಡ ಭಾಷೆಯಲ್ಲೇ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಅನೇಕ ಸಾಧಕರ ನಿದರ್ಶನ ನಮ್ಮ ಮುಂದಿದೆ. ಕನ್ನಡಕ್ಕೆ ಸಂದ ಮೇರು ಪ್ರಶಸ್ತಿಗಳು ಬೇರೆ ಯಾವ ಭಾಷೆಗೂ ಸಿಕ್ಕಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಆಂಗ್ಲ ಭಾಷೆ ಮೇಲಿನ ವ್ಯಾಮೋಹ ಕನ್ನಡಿಗರಲ್ಲಿ ವ್ಯಾಪಕವಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಕನ್ನಡಿಗರೆಲ್ಲರೂ ಕಟಿಬದ್ಧರಾಗಬೇಕಿದೆ. ಮೊಬೈಲ್, ತಂತ್ರಜ್ಞಾನ ಹೆಚ್ಚಿರುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡದ ಮೇಲಿನ ಪ್ರೀತಿ ವಿದ್ಯಾರ್ಥಿಗಳಲ್ಲಿ ಕ್ಷೀಣಿಸುತ್ತಿದೆ. ಹೀಗಾಗದಂತೆ ವಿದ್ಯಾರ್ಥಿಗಳನ್ನು ಜಾಗೃತಗೊಳಿಸುವ ಮಹತ್ತರ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ವಿಭಜಿತ ಮಹಾರಾಜ ಕಾಲೇಜಿನ ಉಪನ್ಯಾಸಕ ಎಂ.ಸಿ.ಪ್ರಶಾಂತ್ ಮಾತನಾಡಿ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಸಂಕೇತವಾಗಿರುವ ಭಾರತದ ಸಂವಿಧಾನ ವಿಶ್ವಶ್ರೇಷ್ಠತೆಯನ್ನು ಪಡೆದಿದೆ. ಇದರ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಶ್ರಮ ಅಡಗಿದೆ. ಯಾರೂ ಬೇಕಾದರೂ ಉನ್ನತ ಹುದ್ದೆ ಅಲಂಕರಿಸಬಹುದು. ದೇಶದ ಕಟ್ಟಕಡೆಯ ಪ್ರಜೆಗೂ ಒಂದೇ ಮತ, ಶ್ರೀಮಂತರಿಗೂ ಒಂದೇ ಮತ ಸಾರ್ವಭೌಮತ್ವವನ್ನು ಸಾರುವ ಶ್ರೇಷ್ಠ ಸಂವಿಧಾನ ನಮ್ಮದು ಎಂದು ಬಣ್ಣಿಸಿದರು.
ನೆರೆ ರಾಷ್ಟçಗಳಲ್ಲಿ ಸಂವಿಧಾನವನ್ನು ಮರ‍್ನಾಲ್ಕು ಬಾರಿ ರಚನೆ ಮಾಡಿದರೂ ಆ ದೇಶಗಳ ಸಂವಿಧಾನ ಗಟ್ಟಿತನವಿರಲಿಲ್ಲ. ಆದರೆ ಒಂದೇ ಬಾರಿ ರಚನೆಯಾದ ಭಾರತ ಸಂವಿಧಾನ ಸತ್ವಯುತವಾಗಿದೆ. ಅಂಬೇಡ್ಕರ್ ಅವರಿಗಿದ್ದ ದೂರದೃಷ್ಟಿಯಿಂದ ಇದು ಸಾಧ್ಯವಾಗಿದೆ. ನಮ್ಮ ಸಂವಿಧಾನದಲ್ಲಿ ತಿದ್ದುಪಡಿಗೆ ಅವಕಾಶವಿದೆಯೇ ಹೊರತು ಬದಲಾವಣೆಗೆ ಅವಕಾಶವಿಲ್ಲ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರವಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅಮೂಲ್ಯ ಮಾಹಿತಿಗಳನ್ನು ಒದಗಿಸುತ್ತವೆ. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವಿರಬೇಕು. ಕಾಲೇಜಿನ ಅಭಿವೃದ್ಧಿಗಾಗಿ ಇನ್ನಷ್ಟು ಶ್ರಮಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಬಿ.ಸಿ.ಶಿವಮಲ್ಲು ಅಧ್ಯಕ್ಷತೆವಹಿಸಿದ್ದರು. ಉಪನ್ಯಾಸಕರಾದ ಎಂ.ಶ್ರೀಕಂಠಯ್ಯ, ವಿಶಾಲಾಕ್ಷಿ, ಜಿ.ಜೆ.ರೇವಣ್ಣ ಉಪಸ್ಥಿತರಿದ್ದರು.


Share