ಶೀಘ್ರದಲ್ಲೇ ಕಾಂಗ್ರೆಸ್ ಆರೋಗ್ಯ ಅಭಯ ಹಸ್ತ ಯೋಜನೆ ಅನುಷ್ಠಾನಕ್ಕೆ; ಡಿಕೆ ಶಿವಕುಮಾರ್
ಬೆಂಗಳೂರು:
ಹಳ್ಳಿ ಜನರ ಆರೋಗ್ಯ ತಪಾಸಣೆಗೆ ಶೀಘ್ರದಲ್ಲೇ ಕಾಂಗ್ರೆಸ್ ಆರೋಗ್ಯ ಅಭಯ ಹಸ್ತ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ, ವಿಧಾನಸಭಾ ಕ್ಷೇತ್ರ, ಬ್ಲಾಕ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಉಸ್ತುವಾರಿಗೆ ನಿಯೋಜಿತರಾಗಿರುವ ಪ್ರತಿನಿಧಿಗಳೊಂದಿಗೆ ಜತೆ ಚರ್ಚೆ ನಡೆಸಿದ ಡಿ.ಕೆ ಶಿವಕುಮಾರ್ ಈ ಯೋಜನೆ ಬಗ್ಗೆ ವಿವರಿಸಿದರು.
ಪ್ರತಿ ಗ್ರಾಮ ಪಂಚಾಯ್ತಿಗೆ ಕಾಂಗ್ರೆಸ್ ನ ಮೂರು ಜನರ ಪ್ರತಿನಿಧಿಗಳ ತಂಡ ಭೇಟಿ ನೀಡಲಿದೆ. ಈ ತಂಡದವರು ಪಿಪಿಇ ಕಿಟ್ ಧರಿಸಲಿದ್ದು, ಇವರಿಗೆ ಉಷ್ಣ ಮಾಪಕ (ಥರ್ಮಲ್ ಸ್ಕ್ಯಾನರ್), ಪಲ್ಸ್ ಆಕ್ಸಿಮೀಟರ್, ಸ್ಯಾನಿಟೈಸರ್ ಅನ್ನು ನೀಡಲಾಗುವುದು. ಈ ತಂಡ ಹಳ್ಳಿಗಳಲ್ಲಿ ಜನರ ದೇಹದ ಉಷ್ಣತೆ, ಅವರಲ್ಲಿ ಆಕ್ಸಿಜನ್ ಪ್ರಮಾಣ ಪರೀಕ್ಷಿಸುತ್ತಾರೆ.
ಒಂದು ವೇಳೆ ಉಷ್ಣತೆ ಅಥವಾ ಆಕ್ಸಿಜನ್ ಪ್ರಮಾಣದಲ್ಲಿ ವ್ಯತ್ಯಾಸವಿದ್ದರೆ, ಕಾಂಗ್ರೆಸ್ ವೈದ್ಯ ಘಟಕದ ವೈದ್ಯರ ಜತೆ ಚರ್ಚಿಸಿ ಅವರಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ. ತೀರಾ ಅಗತ್ಯವೆನಿಸಿದರೆ ಅವರಿಗೆ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಲು ಸಲಹೆ ನೀಡಲಾಗುವುದು ಎಂದು ವಿವರಿಸಿದರು.