ಕಾಯಿಲೆ ಬಾರದಂತೆ ಎಚ್ಚರ ವಹಿಸಲು ಇಮ್ಯುನಿಟಿ ಲಸಿಕೆ : ಡಾ. ಹೆಚ್.ಸಿ ಮಹದೇವಪ್ಪ

13
Share

ಮಿಷನ್ ಇಂದ್ರಧನುಷ್ ಉದ್ಘಾಟನಾ ಕಾರ್ಯಕ್ರಮ

ಕಾಯಿಲೆ ಬಾರದಂತೆ ಎಚ್ಚರ ವಹಿಸಲು ಇಮ್ಯುನಿಟಿ ಲಸಿಕೆ : ಡಾ. ಹೆಚ್.ಸಿ ಮಹದೇವಪ್ಪ

ಮೈಸೂರು,ಆ.07:- ಜಿಲ್ಲೆಯಲ್ಲಿ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನದಡಿ ಜಿಲ್ಲೆಯಲ್ಲಿರುವ 0-5 ವರ್ಷದೊಳಗಿನ ಎಲ್ಲಾ ಮಕ್ಕಳು, ಗರ್ಭಿಣಿ ಹಾಗೂ ಬಾಣಂತಿಯರಿಗೆ ರೋಗನಿರೋಧಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಲಸಿಕೆ ನೀಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪನವರು ತಿಳಿಸಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ತೀವ್ರತರ ಮಿಷನ್ ಇಂದ್ರಧನುಷ್5.0 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದ್ರಧನುಷ್ ಒಂದು ಯೂನಿವರ್ಸಲ್ ಇಮ್ಯುನೈಜೇಷನ್ ಲಸಿಕಾ ಕಾರ್ಯಕ್ರಮವಾಗಿದ್ದು, ಬಾಣಂತಿಯರು ಗರ್ಭಿಣಿಯರು ಹಾಗೂ 0-5 ವರ್ಷದೊಳಗಿರುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಅಭಿಯಾನವನ್ನು ನಡೆಸಲಾಗುತ್ತಿದೆ. ಕಾಯಿಲೆ ಬಂದ ಮೇಲೆ ಚಿಂತಿಸುವ ಬದಲು ಕಾಯಿಲೆ ಬರದಂತೆ ಎಚ್ಚರವಹಿಸುವುದು ಉತ್ತಮ. ಅಂತೆಯೇ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಾ ರೋಗ ಬರದಂತೆ ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಇಂದ್ರಧನುಷ್ ಲಸಿಕಾ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.

ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ ರಾಜೇಂದ್ರ ಅವರು ಮಾತನಾಡಿ, ಮಾರಣಾಂತಿಕ ಕಾಯಿಲೆಗಳಿಂದ ಜನರನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಲೇ ಇವೆ. ಆದರೂ ಕೆಲವು ಕಡೆಗಳಲ್ಲಿ ಮೈಗ್ರೇಂಟ್ ಲೇಬರ್, ಕಟ್ಟಡ ಕಾರ್ಮಿಕರು, ಅನಕ್ಷರಸ್ಥರು, ಗರ್ಭಿಣಿಯರು ಹಾಗೂ ಮಕ್ಕಳನ್ನು ಸೇರಿದಂತೆ ಹಲವು ಮಂದಿ ಲಸಿಕೆಯನ್ನು ಪಡೆದುಕೊಂಡಿರುವುದಿಲ್ಲ. ಇಂತಹವರನ್ನು ಗುರುತಿಸಿ ಲಸಿಕೆ ಕೊಡಿಸುವುದು ಸವಾಲಿನ ಕೆಲಸ. ಈ ವಿಷಯದಲ್ಲಿ ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರನ್ನು ಅಭಿನಂದಿಸುತ್ತೇವೆ ಎಂದರು.

ತೀವ್ರತರ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿರುವ 7 ಲಕ್ಷದ 18 ಸಾವಿರದ ಮನೆಗಳ ಸಮೀಕ್ಷೆ ನಡೆಸಲಾಗಿದ್ದು, ಜಿಲ್ಲೆಯಲ್ಲಿ 0-2 ವರ್ಷದೊಳಗಿನ 5,075 ಮಕ್ಕಳು, 2-5 ವರ್ಷದೊಳಗಿನ 432 ಮಕ್ಕಳು, 1,211 ಗರ್ಭಿಣಿಯರನ್ನು ಗುರುತಿಸಲಾಗಿದ್ದು, ಯಾರು ಕೂಡ ವ್ಯಾಕ್ಸಿನೇಷನ್ ನಿಂದ ಹೊರಗುಳಿಯದಂತೆ ಕ್ರಮವಹಿಸಬೇಕು. ಮೂರು ರೌಂಡ್‌ಗಳoತೆ ಪ್ರತಿ ಆರು ದಿವಸಗಳಲ್ಲಿ ವ್ಯಾಕ್ಸಿನೇಷನ್ ಅಭಿಯಾನ ನಡೆಯುತ್ತದೆ. ಮೈಸೂರು ಜಿಲ್ಲೆಯಲ್ಲಿ 1,773 ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುತ್ತಿದ್ದು, ಶೇ.100 ರಷ್ಟು ವ್ಯಾಕ್ಸಿನೇಷನ್ ಅಭಿಯಾನ ಯಶಸ್ವಿಯಾಗುವಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಶಾಸಕರಾದ ಡಾ. ಡಿ ತಿಮ್ಮಯ್ಯ, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಪಿ ಸಿ ಕುಮಾರಸ್ವಾಮಿ, ಜಿಲ್ಲಾ ಶಾಸ್ತ್ರ ಚಿಕಿತ್ಸಕ ಅಮರ್ ನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

 


Share