ಕೈಗಾರಿಕೋದ್ಯಮಿಗಳಿಗೆ ವಿಶೇಷ ಪ್ಯಾಕೇಜ್ ಬಗ್ಗೆ ಅಧ್ಯಯನ ಸಚಿವ ಜಗದೀಶ್ ಶೆಟ್ಟರ್

ಕೈಗಾರಿಕೆಗಳ ಉಳಿವೇ ನಮ್ಮ ನಿಲುವು ಎಂದ ಸಚಿವ ಸೋಮಶೇಖರ್

  • ಈ ಹಿಂದೆ ಕೊಟ್ಟ ಮಾತಿನಂತೆ ಸಚಿವ ಜಗದೀಶ್ ಶೆಟ್ಟರ್ ಅವರ ಕರೆಸಿದ ಉಸ್ತುವಾರಿ ಸಚಿವರು
  • ಕೈಗಾರಿಕೋದ್ಯಮಿಗಳ ನೋವಿಗೆ ಸ್ಪಂದಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೋದ್ಯಮ ಸಚಿವ ಜಗದೀಶ್ ಶೆಟ್ಟರ್

ಮೈಸೂರು: ನಾನು ಕಳೆದ ಸಭೆಯಲ್ಲಿ ಹೇಳಿದಂತೆ ಸರ್ಕಾರ ನಿಮ್ಮ ಪರವಾಗಿದೆ. ನಾನು ಕೈಗಾರಿಕ ಸಚಿವರಿಗೆ ಕೈಗಾರಿಕೋದ್ಯಮಿಗಳ ಸಮಸ್ಯೆಯನ್ನು ಗಮನಕ್ಕೆ ತಂದು ಬಗೆಹರಿಸಲು ಖುದ್ದು ಭೇಟಿ ನೀಡುವಂತೆ ಕೇಳಿಕೊಂಡಿದ್ದೆ, ಅದಕ್ಕೆ ಅವರು ಒಪ್ಪಿ ಇಲ್ಲಿಗೆ ಬಂದಿದ್ದಕ್ಕೆ ಧನ್ಯವಾದ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಎಫ್ ಕೆಸಿಸಿಐ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಮೇ 2 ರಂದು ನನ್ನ ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಹಲವಾರು ನ್ಯೂನತೆಗಳು ಗಮನಕ್ಕೆ ಬಂದಿದ್ದವು. ಆಗ ಕೈಗಾರಿಕಾ ಸಚಿವರನ್ನು ನೇರವಾಗಿ ಕರೆಸಿ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಪ್ರಯತ್ನ ಮಾಡುತ್ತೇನೆಂದು ಹೇಳಿದ್ದೆ. ಈ ನಿಟ್ಟಿನಲ್ಲಿ ಮೇ 4ರಂದು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಪತ್ರ ಬರೆದು, ಖುದ್ದು ಭೇಟಿಯಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದೆ. ಅದರಂತೆ ಅವರು ಬಂದು ಹಲವು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಅದಕ್ಕೆ ನಾನು ಆಭಾರಿಯಾಗಿದ್ದೇನೆ. ಕೈಗಾರಿಕೆಗಳ ಉಳಿವೇ ನಮ್ಮ ನಿಲುವು ಎಂದು ಸಚಿವ ಸೋಮಶೇಖರ್ ಹೇಳಿದರು.

ಇನ್ನೊಂದು ಪ್ರಮುಖ ವಿಷಯವೆಂದರೆ ಕಾರ್ಖಾನೆಯನ್ನು ಮೇ 17ರವರೆಗೆ ಪ್ರಾರಂಭಿಸಲು ಅವಕಾಶ ಇರಲಿಲ್ಲ. ಆದರೆ, ನಾನೂ ಸೇರಿದಂತೆ ಹಲವು ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವ ಶೆಟ್ಟರ್ ಅವರಿಗೆ ಮನವಿ ಮಾಡಿಕೊಂಡಿದ್ದೆವು. ಅವರೂ ಸಹ ಬಹಳಷ್ಟು ಪ್ರಯತ್ನಪಟ್ಟು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಒಪ್ಪಿಗೆ ಪಡೆದಿದ್ದಾರೆ ಎಂದು ಸಚಿವ ಸೋಮಶೇಖರ್ ಹೇಳಿದರು.

ಬಳಿಕ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಟೈರ್ 2 ಸಿಟಿಯತ್ತ ನಾನು ಹಾಗೂ ನಮ್ಮ ಸರ್ಕಾರದಿಂದ ಹೆಚ್ಚು ಫೋಕಸ್ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಕೈಗಾರಿಕೆಗಳ ಒತ್ತಡ ಹೆಚ್ಚುತ್ತಿದೆ. ಬೆಂಗಳೂರು ಬಿಟ್ಟರೆ ಮುಂದೆ ಕಾಣುವುದೇ ಮೈಸೂರು. ಹೀಗಾಗಿ ಈ ಜಿಲ್ಲೆಯನ್ನು ಕೈಗಾರಿಕೆ ದೃಷ್ಟಿಯಿಂದ ಅಭಿವೃದ್ಧಿ ಪಡಿಸುವುದು ನನ್ನ ಗುರಿ. ಅಲ್ಲದೆ, ಕೈಗಾರಿಕಾ ಹಬ್ ಎಂದರೆ ಕೇವಲ ಬೆಂಗಳೂರು ಎಂದೇ ಎಲ್ಲರೂ ಹೇಳುತ್ತಿದ್ದರು. ಆದರೆ, ನಾನು ಟೈರ್ 2 ನಗರಗಳತ್ತ ದೃಷ್ಟಿ ನೆಟ್ಟಿದ್ದು, ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ ಹೀಗೆ ಅನೇಕ ಪ್ರಮುಖ ನಗರಗಳಲ್ಲಿ ಕೈಗಾರಿಕೋದ್ಯಮಗಳು ಪ್ರಾರಂಭವಾಗಬೇಕಿದ್ದು, ಈ ನಿಟ್ಟಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.

ಕೈಗಾರಿಕೋದ್ಯಮಿಗಳಿಗೆ ವಿಶೇಷ ಪ್ಯಾಕೇಜ್ ನೀಡುವ ಸಂಬಂಧ ಈಗಾಗಲೇ ಕೆಲವು ಅಧ್ಯಯನಗಳು ನಡೆಯುತ್ತಿವೆ. ಆದರೆ, ದೇಶದ ಹಾಗೂ ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶೆಟ್ಟರ್ ತಿಳಿಸಿದರು.

ಇನ್ನು 5-6 ತಿಂಗಳಲ್ಲಿ ಕೈಗಾರಿಕೆಗಳಿಗೆ ಹೊಸ ದಿಕ್ಕು ದೊರೆಯಬಹುದಾಗಿದ್ದು, ಜಪಾನ್, ಅಮೆರಿಕ ಸೇರಿದಂತೆ ಹಲವು ದೇಶಗಳ ಕಂಪನಿಗಳು ಚೀನಾ ತೊರೆದು ದೇಶಕ್ಕೆ ಬರುವ ಸಾಧ್ಯತೆ ಇದ್ದು, ಒಮ್ಮೆ ಈ ಕಂಪನಿಗಳು ಬರುವುದಾದರೆ ಬೆಂಗಳೂರು ಸೇರಿ ಟೈರ್ 2 ನಗರಗಳಲ್ಲಿ ಸೌಲಭ್ಯ ಕಲ್ಪಿಸುವತ್ತ ಗಮನಹರಿಸಲಾಗುವುದು ಎಂದು ಸಚಿವ ಶೆಟ್ಟರ್ ಹೇಳಿದರು.

ಕಾರ್ಮಿಕರು ಹಾಗೂ ಕೈಗಾರಿಕೆಗಳು ಉಳಿಯಬೇಕು. ನೀವಿಬ್ಬರೂ ಸೇರಿ ಕೆಲಸ ನಿರ್ವಹಿಸಬೇಕಿದೆ. ಕೈಗಾರಿಕೆಗಳೂ ಉಳಿಯಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ನಿಮ್ಮ ಪರವಾಗಿದೆ ಎಂದು ಸಚಿವ ಶೆಟ್ಟರ್ ಹೇಳಿದರು.

ಸಚಿವರಿಗೆ ಮನವಿ ಪತ್ರ

ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ವಾಸು ಅವರು ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಜಗದೀಶ್ ಶೆಟ್ಟರ್ ಅವರ ಬಳಿ ಕೈಗಾರಿಕೋದ್ಯಮಿಗಳ ಸಂಕಷ್ಟಗಳನ್ನು ವಿವರಿಸಿ ಮನವಿ ಪತ್ರ ಸಲ್ಲಿಸಿದರು.

ಸಚಿವರಿಗೆ ಅಭಿನಂದನೆ

ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪಾಸ್ ವ್ಯವಸ್ಥೆ ಮಾಡುವಂತೆ ಕಳೆದ ಸಭೆಯಲ್ಲಿ ಉಸ್ತುವಾರಿ ಸಚಿವ ಸೋಮಶೇಖರ್ ಅವರ ಗಮನಕ್ಕೆ ತರಲಾಗಿತ್ತು. ಅದಕ್ಕೆ ಸ್ಪಂದಿಸಿದ ಸಚಿವರು ಸೂಕ್ತ ನಿರ್ದೇಶನ ನೀಡಿದ್ದರಿಂದ ಈಗ ಕಾರ್ಮಿಕರಿಗೆ ಪಾಸ್ ಸಿಕ್ಕಿದ್ದು, ನೆಮ್ಮದಿಯಿಂದ ಕಾರ್ಯನಿರ್ವಹಿಸಲು ಅನುಕೂಲವಾಗಿದೆ ಎಂದು ಉದ್ಯಮಿಯೊಬ್ಬರು ಸಚಿವರಿಗೆ ಧನ್ಯವಾದ ಅರ್ಪಿಸಿದರು.

ಸ್ವಯಂ ದೃಡೀಕರಣ ಮಾಡಿ

ಪಾಸ್ ನಿಯಮ ಸಡಿಲಿಕೆ ಮಾಡಲಾಗಿದೆ. ಸಮಸ್ಯೆ ಇದ್ದರೆ ತಿಳಿಸಿ, ಪರಿಹರಿಸುತ್ತೇವೆ. ವಿಶಾಖಪಟ್ಟಣಂನಲ್ಲಿ ನಡೆದ ಘಟನೆಯಂತೆ ಇಲ್ಲೂ ಅವಘಡಗಳು ಸಂಭವಿಸಬಾರದು ಎಂಬ ನಿಟ್ಟಿನಲ್ಲಿ ಕಾರ್ಖಾನೆಯವರು ಕೈಗೊಂಡ ಸುರಕ್ಷತಾ ಕ್ರಮಗಳ ಬಗ್ಗೆ ಸ್ವಯಂ ದೃಢೀಕರಣ ಪತ್ರ ಹೊಂದಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಇನ್ನು ಕಾರ್ಖಾನೆಗಳಿಗೆ ಕೆಎಸ್ಆರ್ ಟಿಸಿ ಬಸ್ ಸೇವೆಯನ್ನು ಸದ್ಯದ ನಿಯಮದನ್ವಯ ಬಿಡಲು ಸಾಧ್ಯವಿಲ್ಲ. ಆದರೆ, ಕಂಪನಿಯವರೇ ಬಾಡಿಗೆಗೆ ಬಸ್ ಪಡೆದು ತಮ್ಮ ಕಾರ್ಮಿಕರ ಪ್ರಯಾಣಕ್ಕೆ ಅನುಕೂಲ ಮಾಡಿಕೊಳ್ಳುವುದಾದರೆ ನಮ್ಮ ಕಡೆಯಿಂದ ಬೇಕಾದ ಸೌಲಭ್ಯ ಮಾಡಿಕೊಡುವುದಾಗಿ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಹೇಳಿದರು.

ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ನಿರಂಜನ್, ನಾಗೇಂದ್ರ, ಹರ್ಷವರ್ಧನ್ ಇತರರು ಇದ್ದಾರೆ