ಕೊರೋನಾ; ಟೆಸ್ಟ್ ಸಂಖ್ಯೆ ಹೆಚ್ಚಿಸಲು ಸಚಿವರ ಖಡಕ್ ಸೂಚನೆ

747
Share

ಕೋವಿಡ್ ಟೆಸ್ಟ್ ಗಳ ಸಂಖ್ಯೆ ಹೆಚ್ವಿಸಲು ಮೆಡಿಕಲ್ ಕಾಲೇಜು ಮತ್ತು ಖಾಸಗಿ ಸಂಸ್ಥೆಗಳಿಗೆ ಸಚಿವ ಸುಧಾಕರ್ ಸೂಚನೆ

ಹತ್ತು- ಹದಿನೈದು ದಿನಗಳಲ್ಲಿ ದಿನಕ್ಕೆ ಒಂದು ಸಾವಿರ ಗುರಿ ಮುಟ್ಟಲು ತಾಕೀತು

ಬೆಂಗಳೂರು : ಕೋವಿಡ್ ಟೆಸ್ಟ್ ಗಳ ವಿಷಯದಲ್ಲಿ ನಿರ್ಲಕ್ಷ್ಯ ತೋರಿಸುವ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ನಿಶ್ಚಿತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಮುಂದಿನ ಹತ್ತು – ಹದಿನೈದು ದಿನಗಳಲ್ಲಿ ಐದುನೂರರಿಂದ ಒಂದು ಸಾವಿರ ಟೆಸ್ಟ್ ಗಳವರೆಗೆ ಗುರಿ ತಲುಪಬೇಕು. ಈ ವಿಷಯದಲ್ಲಿ ರಾಜಿ ಪ್ರಶ್ನೆ ಇಲ್ಲ ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಂವಾದದಲ್ಲಿ ಮಂಗಳವಾರ ಸ್ಪಷ್ಟಪಡಿಸಿದರು.
ಸರ್ಕಾರ ಕಳೆದ ನಾಲ್ಕು ತಿಂಗಳಿಂದ ಅನೇಕ ಸೂಚನೆಗಳನ್ನು ನೀಡಿದೆ. ಲ್ಯಾಬ್ ಸ್ಥಾಪನೆಗೆ ಅಗತ್ಯ ವಿರುವ ನೆರವು ನೀಡಲಾಗಿದೆ. ಸಿಬ್ಬಂದಿಗೆ ನಿಮ್ಹಾನ್ಸ್ ಮೂಲಕ ತರಬೇತಿ ನೀಡಲಾಗಿದೆ. ಇಷ್ಟರ ಮೇಲೂ ಸರ್ಕಾರದ ಜತೆ ಕೈಜೋಡಿಸದ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.
ಮೆಡಿಕಲ್ ಕಾಲೇಜುಗಳಲ್ಲಿ ಪ್ರಯೋಗಾಲಯ ಸ್ಥಾಪನೆ ಮಾಡುವುದು ಕಡ್ಡಾಯ. ಎಂಸಿಐ ನಿಂದ ಸ್ಪಷ್ಟ ನಿದರ್ಶನಗಳಿವೆ. ಆದರೂ ಕೆಲವರು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಇನ್ನೂ ಇಂತಹ ಮೀನಮೇಷ ವರ್ತನೆಯನ್ನು ಸಹಿಸುವುದಿಲ್ಲ ಎಂದರು.
ರಾಜ್ಯದಲ್ಲಿ ಸೋಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಟೆಸ್ಟ್ ಫಲಿತಾಂಶ ವಾರಗಳ ವರೆಗೆ ಬರುತ್ತಿಲ್ಲ ಎಂಬ ದೂರುಗಳಿವೆ. ಇನ್ನು ಮುಂದೆ 24 ರಿಂದ 30 ತಾಸಿನಲ್ಲಿ ವರದಿ ಕೈಸೇರಬೇಕು. ಆ ಉದ್ದೇಶದಿಂದ ಹಿರಿಯ ಅಧಿಕಾರಿ ಶಾಲೀನಿ ರಜನೀಶ್ ಅವರನ್ನು ಇದರ ಉಸ್ತುವಾರಿಗೆ ನಿಯೋಜಿಸಲಾಗಿದೆ ಎಂದರು.
ಕೊಪ್ಪಳ ಆಸ್ಪತ್ರೆಯಲ್ಲಿ ಕನಿಷ್ಠ ಸಿಬ್ಬಂದಿ ಇಟ್ಟುಕೊಂಡು ಒಂದು ಸಾವಿರದ ಇನ್ನೂರು ಟೆಸ್ಟ್ ಗಳನ್ನು ಮಾಡಿ ರಾಜ್ಯಕ್ಕೆ ಮಾದರಿಯಾಗಿದೆ. ಉಳಿದ ಸಂಸ್ಥೆಗಳು ಈ ಗುರಿ ತಲುಪಬೇಕು. ಅದಕ್ಕಾಗಿ ಅಗತ್ಯ ಇರುವ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ಅಳವಡಿಸಬೇಕು ಎಂದರು.
ಪ್ರತಿದಿನ ಮಾಡುವ ಟೆಸ್ಟ್ ಮತ್ತು ಬಾಕಿ ಉಳಿದ ಸ್ಯಾಂಪಲ್ ವಿವರಗಳನ್ನು ರಾಜ್ಯದ ಡ್ಯಾಷ್ ಬೋಡ್೯ನಲ್ಲಿ ಸಿಗುವಂತೆ ಎಲ್ಲರೂ ಮಾಹಿತಿ ಒದಗಿಸಬೇಕು. ಇದಕ್ಕಾಗಿಯೇ ಡಾಟಾ ಆಪರೇಟರ್ ಗಳನ್ನು ನೇಮಕ ಮಾಡಬೇಕು. ಇನ್ನು ಮುಂದೆ ನೆಪಗಳನ್ನು ಹೇಳುವಂತಿಲ್ಲ ಎಂದರು.
ರೋಗ ಲಕ್ಷಣ ಇದ್ದವರು ಮತ್ತು ಇಲ್ಲದವರ ಸ್ಯಾಂಪಲ್ ಗಳನ್ನು ಸರ್ಕಾರ ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಟೆಸ್ಟ್ ಮಾಡಬೇಕು. ಚೌಕಾಸಿ ಪ್ರಶ್ನೆಯಿಲ್ಲ ಎಂದು ತಿಳಿಸಿದರು.
ಮೆಡಿಕಲ್ ಕಾಲೇಜು ಹೊರತು ಪಡಿಸಿ ಇರುವ ಖಾಸಗಿ ಪ್ರಯೋಗಾಲಯಗಳ ಜತೆ ಬುಧವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ಪರಾಮರ್ಶೆ ಮಾಡಲಾಗುತ್ತದೆ ಎಂದು ಸಚಿವರು ಎಂದು ತಿಳಿಸಿದರು.
ಪ್ರಯೋಗಾಲಯ ಸ್ಥಾಪನೆ, ಸಿಬ್ಬಂದಿ ತರಬೇತಿ ಹಾಗೂ ನಾನಾ ಸಂಸ್ಥೆಗಳ ಅಕ್ರಡೇಶನ್ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತಿರುವ ನಿಮ್ಹಾನ್ಸ್ ನ ಡಾ. ರವಿ ಅವರನ್ನು ಸಚಿವರು ಅಭಿನಂದಿಸಿದರು.
ಮುಂದಿನ ಹತ್ತು ದಿನಗಳಲ್ಲಿ ಬಾಕಿ ಇರುವ 25 ರಿಂದ 30 ಪ್ರಯೋಗಾಲಯ ಗಳನ್ನು ಸ್ಥಾಪಿಸಿ ಟೆಸ್ಟ್ ಗಳ ವಿಷಯದಲ್ಲಿ ಗೊಂದಲ ಉದ್ಭವಿಸದಂತೆ ನೋಡಿಕೊಳ್ಳಬೇಕು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ತಾಕೀತು ಮಾಡಿದರು.


Share