ಕೊರೋನಾ: ಮೈಸೂರು 600 ಬೆಡ್ ಕೋವಿಡ್ ಕೇಂದ್ರ ಸಿದ್ದ

ಹೆಚ್ಚುತ್ತಿರುವ ಕೋವಿಡ್-೧೯ ಹಿನ್ನೆಲೆ
ಮೈಸೂರಿನ ಹೊರವಲಯದಲ್ಲಿ 600 ಬೆಡ್ ನ ಕೋವಿಡ್ ಕೇರ್ ಸೆಂಟರ್ ಸಿದ್ಧ:
ಸಚಿವ ಎಸ್‌.ಟಿ‌.ಸೋಮಶೇಖರ್ ಹೇಳಿಕೆ

ಮೈಸೂರು,ಜುಲೈ11: ಮೈಸೂರಿನ ಹೊರವಲಯದ ಮಂಡಕಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನೂತನ ಕಟ್ಟಡ ಅಕಾಡೆಮಿಕ್ ಭವನದಲ್ಲಿ ಸ್ಥಾಪಿಸಿರುವ ನೂತನ ಕೋವಿಡ್ ಕೇರ್ ಸೆಂಟರ್‌ ಗೆ ಸಹಕಾರ ಮತ್ತು ಮೈಸೂರು‌ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ.‌ ಸೋಮಶೇಖರ್ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸುಮಾರು 55 ರೂಂ ಇದ್ದು, 600 ಬೆಡ್ ವರೆಗೆ ವ್ಯವಸ್ಥೆ ಮಾಡಬಹುದು. ಇಲ್ಲಿ ಎಲ್ಲಾ ಮೂಲ ಸೌಕರ್ಯ ಒದಗಿಸಲಾಗಿದೆ. ಒಂದೆರೆಡು ದಿನದಲ್ಲಿ ಸಂಪೂರ್ಣ ಸಿದ್ಧವಾಗಲಿದೆ. ಪ್ರತಿ ಕೊಠಡಿಗೆ ಟಿ.ವಿ. ಕೇಬಲ್ ಸಂಪರ್ಕ, ಇಂಟರ್ನೆಟ್ ಸಂಪರ್ಕ, ವೈಫೈ ವ್ಯವಸ್ಥೆ ಇದೆ ಎಂದರು.

ಸ್ನಾನದ ಕೊಠಡಿ, ಶೌಚಾಲಯ, ಬಟ್ಟೆ ಸ್ವಚ್ಚಗೊಳಿಸಲು ಬೇಕಾದ ವ್ಯವಸ್ಥೆ ಇದೆ. ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಇದೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಪ್ರತ್ಯೇಕ ವಿಭಾಗ, ಆಡಳಿತ ವಿಭಾಗವನ್ನು ಈ ಕೇಂದ್ರದಲ್ಲಿ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಮನರಂಜನೆಗಾಗಿ ಒಳಾಂಗಣ ಆಟಗಳ ಪರಿಕರಗಳನ್ನು ಒದಗಿಸಲಾಗುವುದು. ನಮಗೆ ಯಾವುದೇ ಬೆಡ್ ಕೊರತೆ ಇಲ್ಲ.
100 ಜನರಿಗೆ ಇಬ್ಬರು ಸ್ಟಾಫ್ ನರ್ಸ್, ಒಬ್ಬರು ವೈದ್ಯರು ಕೆಲಸ ಮಾಡುವರು ಎಂದರು.

ಕೊರೊನಾ ವಿಚಾರದಲ್ಲಿ ಅವ್ಯವಹಾರ ಆರೋಪ ಮಾಡಿರುವ
ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು ವಿಧಾನಸೌಧಕ್ಕೆ ಬನ್ನಿ ನಿಮಗೆ ಬೇಕಾದ ದಾಖಲೆ ಕೊಡುತ್ತೇವೆ. ಕೊರೊನಾ ವಿಚಾರದಲ್ಲಿ ಅವ್ಯವಹಾರ ಮಾಡುವವರು ಮನುಷ್ಯತ್ವ ಇಲ್ಲದವರು.
ನಾವು ವೆಚ್ಚ ಮಾಡಿರುವುದೇ 550ಕೋಟಿ ರೂ. ಹೀಗಿರುವಾಗ 2 ಸಾವಿರ ಕೋಟಿ ಅವ್ಯವಹಾರ ಎನ್ನುತ್ತಿದ್ದಾರೆ ಇದು ಹೇಗೆ ಸಾಧ್ಯ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ಹಾಗಾಗಿ ವಿರೋಧ ಮಾಡುತ್ತಿದ್ದಾರೆ. ಯಾವುದೇ ಅವ್ಯವಹಾರ ನಡೆದಿಲ್ಲ. ಎಂದರು.

ಬೆಂಗಳೂರಿನಲ್ಲಿ ವಲಯವಾರು ಉಸ್ತುವಾರಿಯನ್ನು ಸಚಿವರುಗಳಿಗೆ ನೀಡಲಾಗಿದೆ. ಶುಕ್ರವಾರ ಯಶವಂತಪುರ, ಆರ್.ಆರ್.ನಗರಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ್ದೇನೆ. ಅದೇ ರೀತಿ ಇತರ ಸಚಿವರುಗಳು ಸಹ ಸಭೆ ನಡೆಸುತ್ತಿದ್ದಾರೆ. ಅಧಿಕಾರಿಗಳ ಸಭೆ ನಡೆಸಿಲ್ಲ ಎಂಬುದು ಸುಳ್ಳು ಆರೋಪ. ನನ್ನ ವ್ಯಾಪ್ತಿಗೆ ಮೂರು ಕ್ಷೇತ್ರಗಳು ಬರಲಿವೆ. ಎಲ್ಲಾ ಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಿದ್ದಾನೆ. ಕೆಲ ಸಚಿವರು ನೆನ್ನೆಯೇ ಸಭೆ ಮಾಡಿದ್ದಾರೆ
ಮತ್ತೆ ಕೆಲವರು ಇಂದು ಸಭೆ ನಡೆಸಲಿದ್ದಾರೆ. ನಾವೆಲ್ಲರೂ ನಮಗೆ ವಹಿಸಿರುವ ಜವಾಬ್ದಾರಿಯನ್ನು ನಿಭಾಯಿಸುತ್ತೇವೆ ಎಂದರು.

ಮೈಸೂರಿನಲ್ಲಿ ನರಸಿಂಹರಾಜ ಕ್ಷೇತ್ರದಲ್ಲಿ ಕೊರೊನಾ ಪಾಸಿಟಿವ್ ಹೆಚ್ಚಾಗಿ ಕಾಣುತ್ತಿದೆ.
ನರಸಿಂಹರಾಜ ಕ್ಷೇತ್ರದ ಕೆಲವು ಜನರು ಪರೀಕ್ಷೆಗೆ ಸಹಕಾರ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಕೆಲವು ಪ್ರದೇಶಗಳನ್ನು ಲಾಕ್ ಡೌನ್ ಮಾಡುವ ಬಗ್ಗೆ ಆಲೋಚಿಸಲಾಗುತ್ತಿದೆ.
ಈ ಭಾಗದಲ್ಲಿ ಸೋಕಿತರು ಹಾಗೂ ಸಾವಿನ ಸಂಖ್ಯೆ ಜಾಸ್ತಿಯಾಗಿದೆ.
ಇಲ್ಲಿನ‌ ಜನರು ಪರೀಕ್ಷೆ ಮಾಡಿಸಿಕೊಳ್ಳಲು ಬರುತ್ತಿಲ್ಲ.
ಅಲ್ಲಿನ ಶಾಸಕರು ಇತರ ಮುಖಂಡರೊಂದಿಗೆ ಮಾತನಾಡಿ ಲಾಕ್ ಡೌನ್ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕ ಎಲ್. ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಶ್ಯಂತ್, ಜಿಲ್ಲಾ ಪಂಚಾಯತಿ ಸಿ‌.ಇ‌.ಒ. ಪ್ರಶಾಂತ್ ಕುಮಾರ್ ಮಿಶ್ರಾ, ಉಪಸ್ಥಿತರಿದ್ದರು.