ವಿಕ್ಟೋರಿಯಾ ಆಸ್ಪತ್ರೆ ಕೊರೋನಾ ಸೋಂಕಿತರು, ವೈದ್ಯರು, ಸಿಬ್ಬಂದಿ ಜತೆ ಚರ್ಚಿಸಿ ಆತ್ಮಸ್ಥೈರ್ಯ ತುಂಬಿದ ಡಿ.ಕೆ ಶಿವಕುಮಾರ್
ಬೆಂಗಳೂರು, ಜು. 15:
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಕೊರೊನಾ ಸೋಂಕಿತರು, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿ ಅವರಲ್ಲಿ ಆತ್ಮಸ್ಥೆರ್ಯ ತುಂಬಿದರು.
ಕೋವಿಡ್ ಸೋಂಕಿತರನ್ನು ಸಮಾಜವು ವಿಚಿತ್ರ ಹಾಗೂ ನಿರ್ಲಕ್ಷ್ಯ ಭಾವದಿಂದ ನೋಡುತ್ತಿರುವ ಸಂದರ್ಭದಲ್ಲಿ ಶಿವಕುಮಾರ್ ಅವರು ಆಸ್ಪತ್ರೆಗೆ ನೀಡಿ, ಅವರಲ್ಲಿ ಧೈರ್ಯ ತುಂಬಿದ್ದು ಮಾದರಿ ನಡೆಯಾಗಿದೆ.
ಜತೆಗೆ ಮನೆ, ಕುಟುಂಬ ಪರಿವಾರದವರನ್ನು ಬಿಟ್ಟು, ತಮ್ಮ ಆರೋಗ್ಯ ಹಾಗೂ ಜೀವವನ್ನು ಪಣಕ್ಕಿಟ್ಟು ಸೇವಾಮನೋಭಾವದಿಂದ ಕೆಲಸ ಮಾಡುತ್ತಿರುವ ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳ ಜತೆಗೂ ಮಾತನಾಡಿದ ಶಿವಕುಮಾರ್ ಅವರು, ಅವರ ಕಾರ್ಯವೈಖರಿ ಹಾಗೂ ಕಾರ್ಯಕ್ಷಮತೆಯನ್ನು ಪ್ರಶಂಸಿದರು. ಅವರ ಸಮಸ್ಯೆಗಳನ್ನು ಆಲಿಸಿದರು. ಅವರಲ್ಲಿ ಆತ್ಮವಿಶ್ವಾಸ ತುಂಬಿದರು.
ನೀವು ಉತ್ತಮವಾಗಿ ಕೆಲಸ ಮಾಡುತ್ತಿದ್ದೀರಿ. ಜನರ ಜೀವ ಉಳಿಸುತ್ತಿದ್ದೀರಿ. ನಿಮ್ಮ ಸೇವೆ ಅಮೂಲ್ಯವಾದದ್ದು. ನಿಮ್ಮ ಸೇವೆಗೆ ಬೆಲೆ ಕಟ್ಟಲು ಆಗದು ಎಂದು ಹೊಗಳಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜಿಗೂ ಭೇಟಿ ನೀಡಿದ್ದ ಶಿವಕುಮಾರ್ ಅವರು ಅಲ್ಲಿಂದಲೂ ಕೋವಿಡ್ ಚಿಕಿತ್ಸೆ ಕೇಂದ್ರಗಳಿಗೆ ವಿಡಿಯೋ ಕಾನ್ಫೆರೆನ್ಸ ಮೂಲಕ ಸಂಪರ್ಕ ಸಾಧಿಸಿ, ಕೊರೊನಾ ಸೋಂಕಿತರು, ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿ, ನಿಮ್ಮ ಜತೆಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದರು.
ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು:
‘ಇಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಇಲ್ಲಿರುವ ಸೋಂಕಿತರು, ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳ ಜತೆ ಮಾತನಾಡಿ ಅವರಿಗೆ ಧೈರ್ಯ ತುಂಬಿದ್ದೇನೆ. ನಾನು ಈ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದರಿಂದ ಇಲ್ಲಿನ ವೈದ್ಯಕೀ ಸಿಬ್ಬಂದಿ ಪರಿಚಯ ನನಗಿದೆ. ಆಸ್ಪತ್ರೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನೂ ಅರಿತಿದ್ದೇನೆ.’
‘ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ಆಸ್ಪತ್ರೆ ಸಿಬ್ಬಂದಿ, ನರ್ಸ್ ಗಳು, ಪೊಲೀಸರು ಸೇರಿದಂತೆ ಎಲ್ಲ ವಾರಿಯರ್ಸ್ ಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಿದ್ದಾರೆ. ಈ ಸಮಯದಲ್ಲಿ ಅವರ ಬೆನ್ನಿಗೆ ನಿಲ್ಲುವುದು, ಅವರಿಗೆ ಧೈರ್ಯ ತುಂಬುವುದು ನಮ್ಮ ಕರ್ತವ್ಯ.’
‘ಹಲವಾರು ಸೋಂಕಿತರ ಜತೆಗೂ ನಾನು ಮಾತನಾಡಿದ್ದು, ಅವರು ಚಿಕಿತ್ಸೆ ಮತ್ತಿತರ ವ್ಯವಸ್ಥೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಇಲ್ಲಿ 4 ವರ್ಷದ ಮಗುವಿನಿಂದ ಹಿಡಿದು 99 ವರ್ಷದ ವೃದ್ಧರವರೆಗೂ ಅನೇಕ ಸೋಂಕಿತರು ಚಿಕಿತ್ಸೆ ಪಡೆದು, ಗುಣಮುಖರಾಗಿ ಮನೆಗೆ ಮರಳಿದ್ದಾರೆ. ನೂರಾರು ಗರ್ಭಿಣಿಯರು ಚಿಕಿತ್ಸೆ ಪಡೆದು ಮನೆಗೆ ಮರಳಿರುವ ದಾಖಲೆಗಳನ್ನು ನೋಡಿದ್ದೇನೆ. ಇನ್ನೂ ವಿಶೇಷವೆಂದರೆ ಇಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗಿ ಹೋದವರು ಮತ್ತೆ ಇಲ್ಲಿಗೆ ಬಂದು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ. ಹೀಗಾಗಿ ಸೋಂಕಿತರು, ಚಿಕಿತ್ಸೆ ನೀಡುತ್ತಿರುವವರು ಇಬ್ಬರಿಗೂ ನಾವೆಲ್ಲರೂ ನೈತಿಕ ಬೆಂಬಲ ನೀಡಬೇಕಿದೆ. ಅವರು ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ ಎಂಬ ಮನೋಭಾವ ತುಂಬುವ ಹೊಣೆ ನಮ್ಮ-ನಿಮ್ಮೆಲ್ಲರದ್ದಾಗಿದೆ.’
‘ಮಂತ್ರಿಗಳು ಕೂಡ ಆಸ್ಪತ್ರೆಗಳಿಗೆ ಭೇಟಿ ನೀಡಿ ಸೋಂಕಿತರು ಮತ್ತು ಚಿಕಿತ್ಸೆ ನೀಡುತ್ತಿರುವವರಿಗೆ ಆತ್ಮವಿಶ್ವಾಸ ತುಂಬುವುದು ಉತ್ತಮ. ಕೋವಿಡ್ ಸೋಂಕಿತರ ಬಗ್ಗೆ ತಪ್ಪು ಕಲ್ಪನೆಗಳನ್ನು ಇಟ್ಟುಕೊಳ್ಳುವುದು ಬೇಡ. ಚಿಕಿತ್ಸೆ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ದೋಷಗಳಿದ್ದರೆ ಅದನ್ನು ಸರಿಪಡಿಸುವುದು ಸರಕಾರದ ಕರ್ತವ್ಯ. ಕೋವಿಡ್ ಸಲಕರಣೆಗಳ ಖರೀದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಇಲ್ಲಿ ಮಾತನಾಡುವುದು ಸರಿಯಲ್ಲ. ಅದನ್ನು ಬೇರೆ ಸಂದರ್ಭದಲ್ಲಿ, ಬೇರೆ ವೇದಿಕೆಯಲ್ಲಿ ಪ್ರಸ್ತಾಪ ಮಾಡುತ್ತೇನೆ. ಇಲ್ಲಿಗೆ ಬಂದಿರುವುದು ಸೋಂಕಿತರು, ವೈದ್ಯರು ಮತ್ತು ಸಿಬ್ಬಂದಿಗೆ ಆತ್ಮವಿಶ್ವಾಸ ತುಂಬಲು ಮಾತ್ರ. ಬೇರೆ ವಿಚಾರಗಳ ಬಗ್ಗೆ ಇಲ್ಲಿ ಮಾತನಾಡುವುದಿಲ್ಲ.’
‘ಈ ಸಮಯದಲ್ಲಿ ಸೋಂಕಿತರ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಫೋನ್ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಸೋಂಕಿತರು ತಮ್ಮ ಕುಟುಂಬದವರ ಜತೆ ಮಾತನಾಡಬಹುದಾಗಿದೆ. ಎಲ್ಲ ಆಸ್ಪತ್ರೆಗಳಲ್ಲೂ ಈ ರೀತಿಯ ಫೋನ್ ವ್ಯವಸ್ಥೆ ಕಲ್ಪಿಸಬೇಕು.’