ಕೋವಿಡ್-19 ಪರೀಕ್ಷೆ ಪ್ರಮಾಣ ಹೆಚ್ಚಿಸಿ: ಉಸ್ತುವಾರಿ ಕಾರ್ಯದರ್ಶಿ -ಯರಾಮ್

Share

ಕೋವಿಡ್-19 ಪರೀಕ್ಷೆ ಪ್ರಮಾಣ ಹೆಚ್ಚಿಸಿ: ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್
ಮೈಸೂರು, ಸೆಪ್ಟೆಂಬರ್.23(ಕರ್ನಾಟಕ ವಾರ್ತೆ):- ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಪರೀಕ್ಷೆ ಪ್ರಮಾಣ ಹೆಚ್ಚಿಸುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆ ಹಾಗೂ ನಿಗಮ ಮಂಡಳಿಗಳ ಅಭಿವೃದ್ಧಿ ಕಾರ್ಯಕ್ರಮ ಮತ್ತು ಪ್ರಗತಿ ಪರಿಶೀಲನೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ನಿಗಮ ಮಂಡಳಿಯ ಸದಸ್ಯರ ಜೊತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕೋವಿಡ್-19 ಪರೀಕ್ಷೆಯನ್ನು ಹೆಚ್ಚು ಪ್ರಮಾಣದಲ್ಲಿ ಕೈಗೊಂಡರೆ ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಅದಲ್ಲದೆ, ಸೋಂಕು ಹರಡುವುದನ್ನು ಕೂಡ ನಿಯಂತ್ರಿಸಬಹುದು. ಹಾಗಾಗಿ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಕೊರೊನಾ ಸೋಂಕಿನ ಲಕ್ಷಣ ಕಂಡುಬರದಿರುವ ವ್ಯಕ್ತಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವುದು ಕಡಿಮೆ. ಆದ್ದರಿಂದ ವೈದ್ಯಕೀಯ ತಂಡವು ಹೆಚ್ಚು ಜನರು ಸೇರುವಂತಹ ಮಾರುಕಟ್ಟೆ, ಕಾರ್ಖಾನೆ ಹಾಗೂ ಜನಸಂದಣಿ ಸ್ಥಳಗಳಲ್ಲಿ ಮೊಬೈಲ್ ಯೂನಿಟ್ ಸ್ಥಾಪಿಸಿ ಪರೀಕ್ಷೆ ನಡೆಸಲು ಮುಂದಾಗಬೇಕು ಎಂದು ಸೂಚಿಸಿದರು.
ಕೋವಿಡ್ ಆಸ್ಪತ್ರೆಗಳಲ್ಲಿ ಗ್ರೂಪ್ ಡಿ ನೌಕರರ ಹುದ್ದೆ ಖಾಲಿ ಇದ್ದು, ಆಸ್ಪತ್ರೆಯ ಕೆಲಸ ಕುಂಠಿತವಾಗಲಿದೆ ಎಂಬ ಮಾಹಿತಿ ಬಂದಿದೆ. ಕೂಡಲೇ ಹೊರಗುತ್ತಿಗೆ ಆಧಾರದಲ್ಲಿ ಅನುಭವವುಳ್ಳ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಪ್ರವಾಹದಿಂದಾಗಿ ಹಾನಿಗೊಳಗಾದ ಸಂತ್ರಸ್ತರಿಗೆ ಸಂಬಂಧಿಸಿದ ಅಧಿಕಾರಿಗಳು ಸಮೀಕ್ಷೆ ನಡೆಸಿ ಪರಿಹಾರ ಒದಗಿಸುವಂತೆ ಕ್ರಮ ಕೈಗೊಳ್ಳಿ. ಬೆಳೆ ಹಾನಿಗೊಳಗಾದ ರೈತರಿಗೆ ಇಲಾಖೆಯಿಂದ ನೀಡುವ ಪರಿಹಾರವನ್ನು ತ್ವರಿತಗತಿಯಲ್ಲಿ ಒದಗಿಸಲು ಮುಂದಾಗಿ ಎಂದು ತಿಳಿಸಿದರು.
ಕೃಷಿ ಇಲಾಖೆಯಿಂದ ನೀಡುವ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಹಾಗೂ ಇನ್ನಿತರ ಸಾಲ ಸೌಲಭ್ಯವನ್ನು ಎಲ್ಲಾ ಅರ್ಹ ಫಲಾನುಭವಿ ರೈತರಿಗೆ ತಲುಪುವಂತೆ ಪಾರದರ್ಶಕವಾಗಿ ಕ್ರಮ ಕೈಗೊಂಡು ಸರ್ಕಾರದ ಯೋಜನೆಗಳು ಫಲಪ್ರದವಾಗುವಂತೆ ಕೆಲಸ ನಿರ್ವಹಿಸಿ ಎಂದರು


Share