ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೋರ್ಟ್ಸ್ ಪುಸ್ತಕ ಲೋಕಾರ್ಪಣೆ

Share

ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೋರ್ಟ್ಸ್ ಪುಸ್ತಕ ಲೋಕಾರ್ಪಣೆ ಮಾಡಿದ ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು, ಆಕ್ಟೋಬರ್.6.(ಕರ್ನಾಟಕ ವಾರ್ತೆ):- ಕರ್ನಾಟಕದ ಪ್ರತಿಯೊಂದು ಕೋಟೆಗಳ ಚಿತ್ರಗಳನ್ನು ಅತ್ಯಂತ ಸೃಜನಶೀಲತೆಯಿಂದ ಸೆರೆಹಿಡಿದು ‘ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೋರ್ಟ್ಸ್’ ಪುಸ್ತಕದಲ್ಲಿ ದಾಖಲಿಸಿರುವುದು ಉತ್ತಮವಾದ ಕೆಲಸ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಅವರು ಸೆರೆಹಿಡಿದ ಕೋಟೆ ಚಿತ್ರಗಳ ಸಂಗ್ರಹವಾದ ‘ಗೋಲ್ಡನ್ ವೀವ್ಸ್ ಆಫ್ ಕರ್ನಾಟಕ ಫೋರ್ಟ್ಸ್’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬೀದರ್‌ನಿಂದ ಕಾಸರಗೋಡಿನವರೆಗೂ ಅತ್ಯಂತ ವ್ಯವಸ್ಥಿತವಾಗಿ ಕೋಟೆಯ ಚಿತ್ರಗಳನ್ನು ಹೊಂದಿರುವ ಪುಸ್ತಕ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಛಾಯಾಗ್ರಾಹಕರಾದ ವಿಶ್ವನಾಥ್ ಸುವರ್ಣ ಅವರು ಬಹಳ ಶ್ರಮವಹಿಸಿ ರಾಜ್ಯಾದ್ಯಂತ ಪ್ರವಾಸ ಮಾಡಿ ಕೋಟೆಗಳ ಚಿತ್ರಗಳನ್ನು ತೆಗೆದು, ಅದಕ್ಕೆ ಪುಸ್ತಕ ರೂಪ ನೀಡಿರುವುದು ಪ್ರಶಂಸನೀಯ. ಈ ಪುಸ್ತಕಗಳನ್ನು ನಾನು ಹೆಚ್ಚು ಖರೀದಿಸಿ ಅವರಿಗೆ ಪ್ರೋತ್ಸಾಹಿಸುತ್ತೇನೆ ಎಂದು ತಿಳಿಸಿದರು.

ಆನ್‌ಲೈನ್‌ನಲ್ಲಿ ಪುಸ್ತಕ ಬಿಡುಗಡೆಗೊಳಿಸಿದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಮಾತನಾಡಿ, ವಿಶ್ವನಾಥ್ ಸುವರ್ಣ ಅವರು ತಮ್ಮ ವಿಶೇಷ ಕೈಚಳದಿಂದ ಪ್ರತಿಯೊಂದು ಚಿತ್ರಗಳನ್ನು ಸೆರೆಹಿಡಿದು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಂತಹ ಚಿತ್ರಗಳನ್ನು ಕಾಣುವುದು ಅಪರೂಪ ಎಂದರು.

ಯಾವುದೇ ಚಿತ್ರವನ್ನು ತೆಗೆಯಲು ಬಹಳ ಸಂಯಮ, ಶಾಂತಿ ಮತ್ತು ಶಿಸ್ತು ಅವಶ್ಯಕ. ಈ ಅಂಶಗಳನ್ನು ಗಮನದಲ್ಲಿರಿಸಿ ಚಿತ್ರಗಳನ್ನು ಸೆರೆಹಿಡಿದರೆ ಅತ್ಯಂತ ಪರಿಣಾಕಾರಿ ಆಗಿರುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಅವರು ಮಾತನಾಡಿ, ಯಾವುದೇ ಪತ್ರಿಕೆಯಲ್ಲಿ ಸುದ್ದಿಗಿಂತ ಹೆಚ್ಚಾಗಿ ಚಿತ್ರಗಳು ಓದುಗರನ್ನು ಆಕರ್ಷಿಸಿಸುತ್ತವೆ. ನಿರೀಕ್ಷೆಗೂ ಮೀರಿ ಚಿತ್ರಗಳನ್ನು ತೆಗೆದರೆ ಸಂಪಾದಕರಿಗೆ ಅದಕ್ಕಿಂತ ದೊಡ್ಡ ಸಂತೋಷ ಇರುವುದಿಲ್ಲ. ಅಂತಹ ಉತ್ತಮ ಚಿತ್ರಗಳನ್ನು ವಿಶ್ವನಾಥ್ ಸುವರ್ಣ ಅವರು ತಮ್ಮ ವೃತ್ತಿಜೀವನದಲ್ಲಿ ನೀಡಿದ್ದಾರೆ ಎಂದು ಶ್ಲಾಘಿಸಿದರು. ‌

ಛಾಯಾಗ್ರಾಹಕರು ಪ್ರತಿಕ್ಷಣವು ಕುತೂಹಲನಾಗಿ ವಿಭಿನ್ನವಾದ ಚಿತ್ರಗಳನ್ನು ಕ್ಲಿಕ್ಕಿಸುವ ಅಭಿರುಚಿ ಹೊಂದಿರಬೇಕು. ಆಗಿದ್ದಲ್ಲಿ ಮಾತ್ರ ವಿಶೇಷವಾದ ಚಿತ್ರಗಳು ಸೆರೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ, ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ, ಛಾಯಾಗ್ರಾಹಕ ಎಸ್.ಆರ್.ಮಧುಸೂದನ್ ಇನ್ನಿತರರು ಉಪಸ್ಥಿತರಿದ್ದರು.


Share