*ಚಾಮುಂಡಿ ದೇವಿಗೆ ಹರಕೆ ಒಪ್ಪಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿಎಂ ಸಿದ್ದರಾಮಯ್ಯ*
*ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾಂರಂಟಿ ಈಡೇರಿದ್ದಕ್ಕೆ ನಾಡದೇವಿಗೆ ಪೂಜೆ
*ಚುನಾವಣೆಗೂ ಪೂರ್ವ ಗ್ಯಾರಂಟಿ ಕಾರ್ಡ್ ಇಟ್ಟು ಬೇಡಿಕೊಂಡಿದ್ದ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್
*ಈಗ ತಲಾ 2 ಸಾವಿರ ರೂ. ಸಲ್ಲಿಸಿ ಹರಕೆ ತೀರಿಸಿದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ
*ಗೃಹ ಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ಆ.30 ರಂದು ಚಾಲನೆಯ ಹಿನ್ನೆಲೆ ದೇವಿಗೆ ಹರಕೆ ತೀರಿಕೆ
* ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಎಚ್.ಸಿ.ಮಹಾದೇವಪ್ಪ, ವಿಧಾನ ಪರಿಷತ್ ಶಾಸಕ ದಿನೇಶ ಗೂಳಿಗೌಡ ಹಾಗೂ ಇತರ ಶಾಸಕರು ಭಾಗಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಗ್ಯಾರಂಟಿ ನೀಡಿದ್ದ ಯೋಜನೆಗಳನ್ನು ಈಡೇರಿಸಲು ಸಾಧ್ಯವಾಗಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರು ಮಂಗಳವಾರ ನಾಡದೇವಿ ಚಾಮುಂಡೇಶ್ವರಿ ದರ್ಶನ ಪಡೆದು, ಹರಕೆ ಒಪ್ಪಿಸಿದರು.
ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಹೆಚ್.ಸಿ. ಮಹದೇವಪ್ಪ, ವಿಧಾನ ಪರಿಷತ್ ಶಾಸಕ ದಿನೇಶ ಗೂಳಿಗೌಡ, ಶಾಸಕರಾದ ಹರೀಶ್ ಗೌಡ, ಅನಿಲ್ ಕುಮಾರ್, ಕೆ.ಆರ್.ಪೇಟೆ ರವಿಶಂಕರ್, ಸೇರಿ ಅನೇಕ ಮುಖಂಡರು ಭಾಗಿಯಾಗಿದ್ದರು.
*ದೇವಿಗೆ 2 ಸಾವಿರ ರೂ. ಸಮರ್ಪಣೆ*
ಮನೆಯ ಯಜಮಾನಿಯರಿಗೆ ಮಾಸಿಕ ತಲಾ 2 ಸಾವಿರ ರೂ. ನೀಡುವ ಕಾಂಗ್ರೆಸ್ ಸರ್ಕಾರದ ಮಹತ್ವಾಂಕಾಂಕ್ಷಿ ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ಆ.30 ರಂದು ಚಾಲನೆ ದೊರೆಯಲಿದೆ. ಅದಕ್ಕೂ ಪೂರ್ವದಲ್ಲಿ ಸಿಎಂ ಹಾಗೂ ಡಿಸಿಎಂ ಇಬ್ಬರೂ ಮಂಗಳವಾರ ದೇವಿಗೆ ತಲಾ 2 ಸಾವಿರ ರೂ. ಅರಿಶಿನ, ಕುಂಕುಮ, ಬಳೆ, ಸೀರೆ, ತೆಂಗಿನಕಾಯಿ, ಬಾಳೆಹಣ್ಣು, ನಂದಿನಿ ತುಪ್ಪ, ಮಲ್ಲಿಗೆ ಮಾಲೆ, ಗುಲಾಬಿ ಹೂವು ಇಟ್ಟು ಯೋಜನೆಯನ್ನು ದೇವಿಗೆ ಅರ್ಪಿಸಿದರು.
*ಹರಕೆ ಒಪ್ಪಿಸಿದ ನಾಯಕರು*
ವಿಧಾನಸಭಾ ಚುನಾವಣೆ ಮತದಾನಕ್ಕೂ ಒಂದು ದಿನ ಮುಂಚೆ ಎಂದರೆ, ಮೇ 9 ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಆಗಿನ ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಚಾಮುಂಡಿ ದೇವಿ ದರ್ಶನ ಪಡೆದಿದ್ದರು. ಪಕ್ಷದ ಐದು ಗ್ಯಾರಂಟಿಗಳ ಕಾರ್ಡ್ ಅನ್ನು ಇಟ್ಟು ದೇವಿಯ ಬಳಿ, ಶಕ್ತಿ ಕೊಡು ಎಂದು ಬೇಡಿಕೊಂಡಿದ್ದರು. ಹರಕೆ ಹೊತ್ತಿದ್ದರು. ಪಕ್ಷ ಅಧಿಕಾರಕ್ಕೆ ಬಂದರೆ, ಗ್ಯಾರಂಟಿ ಈಡೇರಿಸುವ ವಾಗ್ದಾನ ಮಾಡಿದ್ದರು. ಪಕ್ಷದ ಪ್ರಮುಖರಾದ ಕೆ.ಜೆ.ಜಾರ್ಜ್ ಹಾಗೂ ವಿಧಾನ ಪರಿಷತ್ ಶಾಸಕ ದಿನೇಶ ಗೂಳಿಗೌಡ ಅವರು ಆಗ ಜತೆಗಿದ್ದರು.
ಎಣಿಸಿದಂತೆ ಕಾಂಗ್ರೆಸ್ ನ ಬಹುಮತದ ಸರ್ಕಾರ ಅಧಿಕಾರಕ್ಕೆ ಬಂದಿದೆ.ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವತ್ತ ಹೆಜ್ಜೆ ಹಾಕಿದೆ. ಕಾಂಗ್ರೆಸ್ ನೀಡಿದ್ದ ಐದರಲ್ಲಿ ನಾಲ್ಕು ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ದೇವಿಗೆ ನಾಯಕರು ಹರಕೆ ಒಪ್ಪಿಸಿದರು ಎಂದು ಕೆಪಿಸಿಸಿ ಮಾಧ್ಯಮ ಘಟಕದ ಉಪಾಧ್ಯಕ್ಷ, ವಿಧಾನ ಪರಿಷತ್ ಶಾಸಕ ದಿನೇಶ ಗೂಳಿಗೌಡ ತಿಳಿಸಿದ್ದಾರೆ.
*ನುಡಿದಂತೆ ನಡೆದ ಸರ್ಕಾರ ನಮ್ಮದು: ದಿನೇಶ್ ಗೂಳಿಗೌಡ*
2023ರ ವಿಧಾನಸಭಾ ಚುನಾವಣೆ ಮೇ 10 ರಂದು ನಡೆಯಿತು. ಅದರ ಹಿಂದಿನ ದಿನವಾದ ಮೇ 9ರಂದು ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ.ಜೆ.ಜಾರ್ಜ್ ಅವರು, ನಾನು ಸಹಿತ ನಾಡ ದೇವತೆ ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿ ಪ್ರಾರ್ಥನೆಯನ್ನು ಮಾಡಿದ್ದೆವು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದರೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಚಾಮುಂಡೇಶ್ವರಿ ದೇವಿ ಮೇಲೆ ಪ್ರಮಾಣ ಮಾಡಲಾಗಿತ್ತು. ಈಗ ಇದರ ಭಾಗವಾಗಿ ಬುಧವಾರ ಆಗಸ್ಟ್ 30ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಆಗ ಮಾಡಿಕೊಂಡಿದ್ದ ಹರಕೆಯನ್ನು ತೀರಿಸಲು ನಮ್ಮ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಹಿಳಾ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಶಾಸಕರ ಜೊತೆ ಭೇಟಿ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
*ದಿನೇಶ್ ಗೂಳಿಗೌಡ*
ಶಾಸಕರು, ವಿಧಾನ ಪರಿಷತ್
ಉಪಾಧ್ಯಕ್ಷರು, ಕೆಪಿಸಿಸಿ ಮಾಧ್ಯಮ ಘಟಕ