ಜಾತೀಯತೆ ಹಾಗೂ ಭ್ರಷ್ಟಾಚಾರದ ವಿರುದ್ದ ಹೋರಾಟಕ್ಕೆ ಕರೆ

266
Share

 

ಜಾತೀಯತೆ ಹಾಗೂ ಭ್ರಷ್ಟಾಚಾರದ ವಿರುದ್ದ ಯುವಜನತೆಯ ಹೋರಾಟಕ್ಕೆ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಕರೆ

 

ಜಾತೀಯತೆ, ಭ್ರಷ್ಟಾಚಾರ ಹಾಗೂ ಅನೈತಿಕತೆಗಳು ರಾಷ್ಟ್ರದ ಅಭಿವೃದ್ದಿಗೆ ಮಾರಕವಾಗಿದ್ದು, ಅವುಗಳ ವಿರುದ್ದ ಇಂದಿನ ಯುವಜನತೆ ಹೋರಾಟ ನಡೆಸುವ ಅಗತ್ಯವಿದೆ ಎಂದು ರಾಜ್ಯ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಅರಳಿ ನಾಗರಾಜ್ ಅವರು ಕರೆ ನೀಡಿದರು.

ಅಖಂಡ ಕರ್ನಾಟಕ ರಕ್ಷಣಾ ದಳ ಸಂಸ್ಥೆಯು ಕೆ.ಆರ್.ನಗರ ತಾಲ್ಲೂಕಿನಾದ್ಯಂತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಗುರಿ, ಗುರು, ಜೀವನ ಹಾಗೂ ಕಾನೂನಿನ ಅರಿವು-ನೆರವು ಕಾರ್ಯಕ್ರಮವನ್ನು ಕೆ.ಆರ್.ನಗರದ ಬ್ರೈಟ್ ಕಾಲೇಜಿನಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ರಾಷ್ಟ್ರವನ್ನು ಭ್ರಷ್ಟಾಚಾರ ತೀವ್ರವಾಗಿ ಕಾಡುತ್ತಿದೆ. ಭ್ರಷ್ಟಾಚಾರದ ಆರೋಪದ ಮೇಲೆ ಜೈಲು ಸೇರಿದ ರಾಜಕೀಯ ಮುಖಂಡನೊಬ್ಬ ಜಾಮೀನಿನ ಮೇಲೆ ಬಿಡುಗಡೆ ಆದರೆ ಆತನಿಗೆ ಹಾರ ಹಾಕಿ, ಮೆರವಣಿಗೆ ಮಾಡುವ ಜನರೂ ಇದ್ದಾರೆ ಎಂದರೆ ರಾಷ್ಟ್ರದ ಭವಿಷ್ಯ ಎತ್ತ ಸಾಗಿದೆ ಎಂಬ ಆತಂಕ ಉಂಟಾಗುತ್ತದೆ. ಯಾವುದೇ ಭ್ರಷ್ಟ ಸರ್ಕಾರ, ಜನಪ್ರತಿನಿಧಿ ಇದ್ದಾರೆ ಎಂದರೆ ಅದರ ಆಯ್ಕೆಯಲ್ಲಿ ಇರುವ ಜನರೂ ಅಪ್ರಾಮಾಣಿಕರೇ ಎಂಬ ಅನುಮಾನ ಮೂಡುತ್ತದೆ. ಇಂತಹ ಭ್ರಷ್ಟ ವ್ಯವಸ್ಥೆಯ ವಿರುದ್ದ ಯುವಜನತೆ ಹೋರಾಟ ಮಾಡಬೇಕಾದ್ದು ಅನಿವಾರ್ಯವಾಗಿದೆ .ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಗುರಿ ಇರಿಸಿಕೊಂಡು, ಪ್ರಾಮಾಣಿಕವಾಗಿ ಶ್ರಮಿಸಿ, ಜೀವನ ಕಟ್ಟಿಕೊಳ್ಳಬೇಕಾಗಿದೆ .ಜೊತೆಗೆ ರಾಷ್ಟದ ಅಭ್ಯುದಯದತ್ತಲೂ ಗಮನಹರಿಸಬೇಕಾಗಿದೆ ಎಂದು ನುಡಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ಅವರು ಮಾತನಾಡಿ ಪರಿಸರ ನಾಶದಿಂದ ಇಂದು ಇಡೀ ಜಗತ್ತು ವಿನಾಶದ ಅಂಚಿನಲ್ಲಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರಗಳ ನಾಶ ಮಾಡುತ್ತಿದ್ದಾನೆ. ಬೆಟ್ಟ-ಗುಡ್ಡಗಳ ನಾಶ ಮಾಡುತ್ತಿದ್ದಾನೆ. ಪರಿಣಾಮವಾಗಿ ಅತಿವೃಷ್ಟಿ, ಭೂಕುಸಿತಗಳು ತಲೆದೋರುತ್ತಿವೆ. ಸಾವಿರಾರು ಜನರು ನಿರಾಶ್ರಿತರಾಗುತ್ತಿದ್ದಾರೆ. ನೂರಾರು ಮುಗ್ದ ಜನರು ಸಾವಿಗೀಡಾಗುತ್ತಿದ್ದಾರೆ.ಜನರು ಹೃದಯಾಘಾತ, ಶ್ವಾಸಕೋಶದ ಕ್ಯಾನ್ಸರ್ ಮೊದಲಾದ ಕಾಯಿಲೆಗೆ ಈಡಾಗುತ್ತಿದ್ದಾರೆ. ಈಗಲಾದರು ಯುವಜನತೆ ಪರಿಸರ ಸಂರಕ್ಷಣೆ ಸರ್ಕಾರದ ಕಾರ್ಯಕ್ರಮ ಎಂದು ಕಣ್ಮುಚ್ಚಿ ಕೂರಬಾರದು. ತಮ್ಮ ಜನ್ಮದಿನದಂದು, ತಮ್ಮ ಸಹೋದರ-ಸಹೋದರಿಯರ, ತಂದೆ-ತಾಯಿಗಳ ಜನ್ಮದಿನದಂದು, ತಮ್ಮ ವಿವಾಹ ವಾರ್ಷಿಕೋತ್ಸವ ದಿನದಂದು, ತಮ್ಮ ಹಿರಿಯರ ನೆನಪಿನಲ್ಲಿ ಪ್ರತಿ ವರ್ಷವೂ ಒಂದೊಂದು ಸಸಿಯನ್ನು ನೆಡಬೇಕು. ಆ ಮೂಲಕ ಪರಿಸರ ಉಳಿಸಿ ಆರೋಗ್ಯಯುತ ಸಮಾಜ ಸ್ಥಾಪಿಸಬೇಕೆಂದು ಕರೆ ನೀಡಿದರು.

ಅಖಂಡ ಕರ್ನಾಟಕ ರಕ್ಷಣಾ ದಳದ ರಾಜ್ಯಾಧ್ಯಕ್ಷರಾದ ಸಿಂಹ ಶಿವುಗೌಡ ಅವರು ಪ್ರಸ್ತಾವಿಕವಾಗಿ ಮಾತನಾಡಿ ತಮ್ಮ ಸಂಸ್ಥೆಯು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕುಗಳ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಗುರಿ,ಗುರು, ಜೀವನ ಹಾಗೂ ಕಾನೂನಿನ ಅರಿವು-ನೆರವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಯುವಜನರಲ್ಲಿ ಜಾಗೃತಿ ಮೂಡಿಸಲಿದೆ ಎಂದು ವಿವರಿಸಿದರು.

ಅಖಂಡ ಕರ್ನಾಟಕ ರಕ್ಷಣಾದಲಕದ ರಾಜ್ಯ ಕಾನೂನು ಘಟಕದ ಉಪಾಧ್ಯಕ್ಷರಾದ ವಕೀಲ ಎಂ.ಗುರು ಪ್ರಸಾದ್ ಅವರು ಮಾತನಾಡಿ ಮಕ್ಕಳು ಜೀವನದಲ್ಲಿ ಉತ್ತಮ ಗುರಿಗಳನ್ನು ಹೊಂದಬೇಕು. ತಮ್ಮ ಕಾನೂನುಗಳಿಗೆ ಧಕ್ಕೆ ಬಂದಾಗ ಹೇಗೆ ನ್ಯಾಯ ಪಡೆಯಬೇಕೆಂಬ ಬಗ್ಗೆ ಅರಿವು ಹೊಂದಬೇಕು ಎಂದು ವಿವರಿಸಿದರು. ರೈತಮುಖಂಡ ಗರುಡಗಂಭ ಸ್ವಾಮಿ, ಕಾಲೇಜಿನ ಆಡಳಿತಾದಿಕಾರಿ ಮೇನಕಾ, ವಕೀಲರಾದ ಪ್ರವೀಣ್ ವೇದಿಕೆಯಲ್ಲಿದ್ದರು. ಮಾನ್ಯ ಎಲ್ಲರನ್ನೂ ಸ್ವಾಗತಿಸಿದರು.


Share