ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

1974ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡುವ ಸರ್ಕಾರ ತನ್ನ ನಿರ್ಧಾರವನ್ನು ಕೈಬಿಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಛೇರಿ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು 1961ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ಸಮಗ್ರವಾಗಿ ತಿದ್ದುಪಡಿ ಮಾಡಿ ಜಮೀನಿನಲ್ಲಿ ಶ್ರಮ ಪಡುವ ನಿಜವಾದ ರೈತರಿಗೆ ನ್ಯಾಯ ಒದಗಿಸಿಕೊಡಲು ಮುಂದಾಗಿ 1974 ಮಾರ್ಚ್ ನಲ್ಲಿ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಅತ್ಯಂತ ಕ್ರಾಂತಿಕಾರಕವಾದ ಭೂ ಸುಧಾರಣೆ ಮಸೂದೆಯನ್ನು ಜಾರಿಗೆ ತಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸರ್ಕಾರ ಭೂ ಸುಧಾರಣಾ ತಿದ್ದುಪಡಿಯ ಹೆಸರಿನಲ್ಲಿ ತರಲಾಗುತ್ತಿರುವ ಭೂ ವಿನಾಶ ಕಾಯ್ದೆಯ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವು ಸಣ್ಣ ಸಣ್ಣ ರೈತರು ಹಾಗೂ ಮಧ್ಯಮ ವರ್ಗದ ರೈತರನ್ನು ಬೀದಿಗೆ ತಳ್ಳುವ ಈ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವುದರ ಹಿಂದೆ ಹುನ್ನಾರ ಅಡಗಿದೆ. ರೈತಾಪಿಯ ಜೊತೆ ನಿಲ್ಲಬೇಕಿದ್ದ ಸರ್ಕಾರ ಅವರ ಅತಂತ್ರತೆಯನ್ನು ಬಳಸಿಕೊಂಡು ಅವರನ್ನು ಶಾಶ್ವತವಾಗಿ ಭೂ ವಂಚಿತರನ್ನಾಗಿ ಮಾಡಲು ಮತ್ತು ಗ್ರಾಮದಿಂದ ಹೊರದಬ್ಬಲು ಸಂಚು ರೂಪಿಸಿದೆ ಎಂದು ಆರೋಪಿಸಿದರು.

ಈ ಸಂಚಿನ ಭಾಗವೇ ಈಗ ಕೃಷಿ ಸಂಬಂಧಿತ ನೀತಿಗಳಲ್ಲಿ ತರುತ್ತಿರುವ ಬದಲಾವಣೆ. ಹೊಸ ಗೇಣಿ ನೀತಿ, ಎಪಿಎಂಸಿ ನೀತಿ, ವಿದ್ಯುತ್ ನೀತಿ ಹಾಗೂ ಭೂ ಸುಧಾರಣಾ ನೀತಿ ಈ ನಾಲ್ಕು ಸಹ ಒಂದೇ ಉದ್ದೇಶ ಹೊಂದಿರುವ ಪರಸ್ಪರ ಅಂತರ ಸಂಬಂಧ ಹೊಂದಿರುವ ನಾಲ್ಕು ನೀತಿಗಳಾಗಿವೆ. ಹಣ ಬಲ ಹೊಂದಿದ ದೊಡ್ಡ ದೊಡ್ಡ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಿರುವ ಸರ್ಕಾರದ ಕ್ರಮವನ್ನು ನಾವು ವಿರೋಧಿಸುತ್ತೇವೆ ಎಂದರಲ್ಲದೇ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ, ರಾಜಣ್ಣ, ಹನುಮಂತು, ಸುರೇಶ್ ಯರಗನಹಳ್ಳಿ,ನಾಗರಾಜ್, ಪುಟ್ಟಸ್ವಾಮಿ, ಗೋವಿಂದರಾಜು, ನಾಗರತ್ನಮ್ಮ ಮತ್ತಿತರರು ಪಾಲ್ಗೊಂಡಿದ್ದರು