ಜಿಲ್ಲಾಡಳಿತದ ವತಿಯಿಂದ ಡಾ.ಬಾಬು ಜಗಜೀವನ್‍ರಾಂ ರವರ 34ನೇ ವರ್ಷದ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು ಮೈಸೂರಿನ ರೈಲ್ವೆ ನಿಲ್ದಾಣದ ಮುಂಭಾಗದ ವೃತ್ತದಲ್ಲಿರುವ ಡಾ.ಬಾಬುಜಗಜೀವನ್‍ರಾಂ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು
ಮಹಾನ್ ದಲಿತ ನಾಯಕ ಬಾಬು ಜಗಜೀವನ ರಾಂ ಅವರ ಸ್ಮರಣೆ
ಸ್ವಾತಂತ್ರ್ಯ ಹೋರಾಟಗಾರರಾಗಷ್ಟೇ ಅಲ್ಲದೆ, ಸಮಾಜ ಸೇವಕರಾಗಿ, ದಲಿತಪರ ಹೋರಾಟಗಾರ, ನಾಯಕರಾಗಿ ದೇಶದಲ್ಲಿ ಸಾಮಾಜಿಕ ಅಸಮತೋಲನ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಾಬು ಜಗಜೀವನ ರಾಮ್ ಅವರು ನಮ್ಮೆಲ್ಲರಿಗೂ ಆದರ್ಶಪ್ರಾಯರು. ಅಸ್ಪ್ರಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕ ಎಂಬ ಖ್ಯಾತಿಯೂ ಇವರದ್ದು. ಬಾಬು ಜಗಜೀನವನ ರಾಂ ಅವರ ಪುಣ್ಯ ಸ್ಮರಣೆಯ ಈ ಸಂದರ್ಭದಲ್ಲಿ ಅವರು ನಡೆದುಬಂದ ಹಾದಿಯನ್ನು ನೆನೆಯುವುದು ನಮ್ಮ ಕರ್ತವ್ಯವಾಗಿದೆ.
ದಲಿತ ಕುಟುಂಬದಲ್ಲಿ ಜನಿಸಿದ ಇವರು, ಆರ್ಥಿಕವಾಗಿ ಸ್ಥಿತಿವಂತರಿದ್ದರೂ ಸಮಾಜದಲ್ಲಿ ಮೇಲ್ವರ್ಗಗಳಿಂದ ತುಳಿಥಕ್ಕೆ, ಅಪಮಾನಕ್ಕೊಳಗಾಗಬೇಕಾಯಿತು. ಮಕ್ಕಳನ್ನು ದೇವರೆನ್ನುತ್ತೇವೆ. ಆದರೆ, ಇವರು ವಿದ್ಯಾರ್ಥಿ ಜೀವನದಲ್ಲೇ ಶಾಲೆಯಲ್ಲಿ ಅಸಮಾನತೆ, ಅಸ್ಪೃಶ್ಯತೆಯನ್ನು ಅನುಭವಿಸಿ ನೊಂದವರಾಗಿದ್ದರು. ಮುಂದೆ ಇದೇ ಇವರ ಈ ಹೋರಾಟಕ್ಕೆ ಬುನಾದಿಯಾಯಿತು ಎಂದರೂ ತಪ್ಪಿಲ್ಲ.
ಪದವಿ ಶಿಕ್ಷಣ ಸಂದರ್ಭದಲ್ಲೇ ದಲಿತಪರ ಅನೇಕ ಹೋರಾಟವನ್ನು ಮಾಡಿದವರಾಗಿರುವ ಇವರು, ಕೋಲ್ಕತ್ತದ ವೆಲ್ಲಿಂಗ್ಟನ್ ಚೌಕದಲ್ಲಿ 50,000 ಕಾರ್ಮಿಕರನ್ನು ಸೇರಿಸಿ ಬೃಹತ್ ಮಜ್ದೂರ್ ಜಾಥಾವನ್ನು ಹಮ್ಮಿಕೊಂಡು ನೇತೃತ್ವ ವಹಿಸಿ ಎಲ್ಲರ ಗಮನ ಸೆಳೆಯುತ್ತಾರೆ. ಇಲ್ಲಿಂದ ಮುಂದೆ ದಲಿತ ನಾಯಕರಾಗಿ ಮುಂಚೂಣಿಗೆ ಬರುತ್ತಾರೆ. ಅವರ ಕಾರ್ಯಕ್ಷೇತ್ರ ಬಿಹಾರವಾಗುತ್ತದೆ. ಗಾಂಧೀಜಿಯವರು ಆರಂಭಿಸಿದ್ದ ಅಸ್ಪೃಶ್ಯತೆಯ ವಿರುದ್ಧದ ಹೋರಾಟದಲ್ಲಿಯೂ ಪಾಲ್ಗೊಳ್ಳುತ್ತಾರೆ. ಬಳಿಕ ಅವರು ರಾಜಕೀಯ ಸೇರಿ ಅಲ್ಲಿಯೂ ಸಹ ತಮ್ಮ ಛಾಪನ್ನು ಮೂಡಿಸುವ ಮೂಲಕ ಅನೇಕ ಕ್ರಾಂತಿಕಾರಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಾರೆ.
ಅವರ ಹೋರಾಟ, ನಡೆದು ಬಂದ ಹಾದಿ ಎಲ್ಲರಿಗೂ ಮಾದರಿ. ಇಂದಿನ ಯುವಕರು ಸೇರಿದಂತೆ ನನ್ನಂತಹ ಜನಪ್ರತಿನಿಧಿಗಳು ಸಹ ಅವರ ನಡೆಯನ್ನು ಅನುಸರಿಸಬೇಕಿದೆ. ಆ ನಿಟ್ಟಿನಲ್ಲಿ ಸಮಾಜವನ್ನು ಸಮಾನತೆಯಿಂದ ಕಾಣಬೇಕಿದೆ. ಹೀಗಾದಲ್ಲಿ ಮಾತ್ರ ಇಂಥ ಮಹನೀಯರ ಹೋರಾಟಕ್ಕೆ ಒಂದು ಬೆಲೆ ಸಿಕ್ಕಂತಾಗುತ್ತದೆ.
ಎಸ್.ಟಿ.ಸೋಮಶೇಖರ್
ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು