ನೂತನ ಕೈಗಾರಿಕಾ ನೀತಿಯು ಎಂಎಸ್‍ಎಂಇ ಉತ್ತೇಜನಕ್ಕೆ ಪೂರಕವಾಗಿದೆ: ನಿರ್ದೇಶಕಿ ಆರ್.ವಿನೋತ್‍ಪ್ರಿಯಾ

Share

ನೂತನ ಕೈಗಾರಿಕಾ ನೀತಿಯು ಎಂಎಸ್‍ಎಂಇ ಉತ್ತೇಜನಕ್ಕೆ ಪೂರಕವಾಗಿದೆ: ನಿರ್ದೇಶಕಿ ಆರ್.ವಿನೋತ್‍ಪ್ರಿಯಾ

ಮೈಸೂರು, ಸೆಪ್ಟೆಂಬರ್.8.(ಕರ್ನಾಟಕ ವಾರ್ತೆ):- ನೂತನ ಕೈಗಾರಿಕಾ ನೀತಿ 2020-25 ರಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಲಾಗಿದ್ದು, ಕೈಗಾರಿಕೆಗಳ ಆರ್ಥಿಕ ಪುನಶ್ಚೇತನಕ್ಕೆ ಪೂರಕವಾದ ಅಂಶಗಳನ್ನು ಒಳಗೊಂಡಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರಾದ ಆರ್.ವಿನೋತ್‍ಪ್ರಿಯಾ ಅವರು ತಿಳಿಸಿದರು.

ಮಂಗಳವಾರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಮೈಸೂರಿನಲ್ಲಿ ನಡೆದ `ನೂತನ ಕೈಗಾರಿಕಾನೀತಿ 2020-25 ಮತ್ತು ಹೂಡಿಕೆ ಅವಕಾಶಗಳು’ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೂತನ ಕೈಗಾರಿಕಾ ನೀತಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಸಣ್ಣ ಕೈಗಾರಿಕೋದ್ಯಮದಲ್ಲಿ ಮಾರಾಟಗಾರರ ಅಭಿವೃದ್ಧಿ, ನಿರಂತರ ಉದ್ಯೋಗವಕಾಶ ಮತ್ತು ಉತ್ಪಾದನೆಗೆ ಅನುಕೂಲವಾಗುವ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಕೊವೀಡ್-19 ವಿಷಮ ಪರಿಸ್ಥಿತಿಯಲ್ಲಿ ಜಾರಿಯಾದ ಲಾಕ್‍ಡೌನ್ ಕ್ರಮದಿಂದಾಗಿ ಬಹುತೇಕ ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳು ನಷ್ಟವನ್ನು ಅನುಭವಿಸಿವೆ. ಇತ್ತೀಚಿಗಷ್ಟೇ ಕೈಗಾರಿಕಾ ವಲಯದಲ್ಲಿ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಈ ಸಂದರ್ಭದಲ್ಲಿ ಇಲಾಖೆಯಿಂದ ಯಾವ ರೀತಿಯಲ್ಲಿ ಬೆಂಬಲ ನೀಡಬೇಕೆಂಬುದನ್ನು ಚರ್ಚಿಸಿ ಕ್ರಮವಹಿಸಲಾಗುವುದು ಎಂದರು.

ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಕೈಗಾರಿಕೆಗಳಲ್ಲಿ ಯುವಕರಿಗೆ ತರಬೇತಿ ನೀಡಿ, ಅವರಿಗೆ ಅಲ್ಲಿಯೇ ಉದ್ಯೋಗ ನೀಡಬಹದು ಎಂಬ ಸಲಹೆ ಕೇಳಿಬಂದಿದೆ. ಈ ನೀತಿಯನ್ನು ಅಳವಡಿಸಿಕೊಂಡು ಯಶಸ್ಸು ಕಂಡಿರುವ ಎಂಎಸ್‍ಎಂಇ ಗಳ ಚಟುವಟಿಕೆಗಳನ್ನು ಗಮನಿಸಬೇಕು ಎಂದು ಹೇಳಿದರು.

ಈ ಹಿಂದೆ ಉದ್ಯಮವನ್ನು ಪ್ರಾರಂಭಿಸಲು ಅನೇಕ ಸವಾಲುಗಳು ಎದುರಾಗುತ್ತಿದ್ದವು. ಪ್ರಸ್ತುತ ಇಂತಹ ಸಮಸ್ಯೆಗಳನ್ನು ಪರಿಹರಿಸಲು ಫೆಸ್‍ಬುಕ್ ಪೇಜ್ ತೆರೆಯಲಾಗಿದ್ದು, ಕೈಗಾರಿಕೋದ್ಯಮಿಗಳು ತಮ್ಮ ಸಮಸ್ಯೆಗಳನ್ನು ತಿಳಿಸಬಹುದು ಎಂದರು.

ಕೆ.ಎಸ್.ಎಸ್.ಐ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ಬಿ.ಶಿರೂರ್ ಅವರು ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ 190 ಕೈಗಾರಿಕಾ ವಸಾಹತು ಸ್ಥಾಪಿಸಲಾಗಿದೆ. ಅದರಲ್ಲಿ ಮೈಸೂರಿನಲ್ಲಿ 3 ಕೈಗಾರಿಕಾ ವಸಾಹತುಗಳು ಇವೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ನೂತನ ಕೈಗಾರಿಕಾ ವಸಾಹತು ಸ್ಥಾಪನೆಯಾಗಬೇಕು ಎಂದು ಅನೇಕರು ಅರ್ಜಿಗಳನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕೈಗಾರಿಕ ಸಂಘ ಸಂಸ್ಥೆಗಳ ಜೊತೆ ಸಮಾಲೋಚಿಸಿ ಸೂಕ್ತವಾದ ಪ್ರದೇಶದಲ್ಲಿ 50 ಎಕ್ಕರೆ ಜಾಗ ಖರೀದಿಸಿ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಕೊವೀಡ್-19 ಬಿಕ್ಕಟ್ಟಿನಲ್ಲಿ ಕೈಗಾರಿಕೋದ್ಯಮಿಗಳು ಅನೇಕ ಸವಾಲುಗಳನ್ನು ಎದರಿಸುತ್ತಿದ್ದಾರೆ. ಕೈಗಾರಿಕೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರು ಮಂಡಳಿ ಗಮನಕ್ಕೆ ತನ್ನಿ. ಕೈಗಾರಿಕೆಗಳ ಸಂಘದ ಅಧ್ಯಕ್ಷರು ಹಾಗೂ ನಾವು ಪರಿಗಣಿಸಿ ಪರಿಹಾರ ಒದಗಿಸಲು ಕ್ರಮ ವಹಿಸುತ್ತೇವೆ ಎಂದು ಕೈಗಾರಿಕೋದ್ಯಮಿಗಳಿಗೆ ತಿಳಿಸಿದರು.

ಕೈಗಾರಿಕ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕರಾದ ಹೆಚ್.ಎಂ.ಶ್ರೀನಿವಾಸ ಅವರು ಮಾತನಾಡಿ, ನೂತನ ಕೈಗಾರಿಕಾ ನೀತಿಯಲ್ಲಿ ಉದ್ಯೋಗದ ಗುರಿ, ಆದಾಯ ಮತ್ತು ಬಂಡವಾಳ ಹೂಡಿಕೆಯ ಗುರಿ ಹೊಂದಲಾಗಿದೆ ಎಂದು ನೂತನ ಕೈಗಾರಿಕಾನೀತಿಯ ಪ್ರಮುಖ ಅಂಶಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಕಾಸಿಯಾ ಅಧ್ಯಕ್ಷರಾದ ಕೆ.ಬಿ.ಅರಸಪ್ಪ, ಜಿಲ್ಲಾ ಕೈಗಾರಿಕ ಕೇಂದ್ರದ ಜಂಟಿ ನಿರ್ದೇಶಕರಾದ ಡಿ.ಕೆ.ಲಿಂಗರಾಜು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಂಯಾ ಡಿಸ್ಟ್ರಿಕ್ಸ್ ಸೇಲ್ಸ್ ಹಬ್‍ನ ವಲಯ ವ್ಯವಸ್ಥಾಪಕ ಬಿನ್ನಿ ಜಾನ್ ಮ್ಯಾಥ್ಯು, ಕಾಸಿಯಾ ಗೌರವ ಪ್ರಧಾನ ಕಾರ್ಯದರ್ಶಿ ಎನ್.ಆರ್.ಜಗದೀಶ್, ನಗರ ಜಂಟಿ ಕಾರ್ಯದರ್ಶಿ ಪಿ.ಎಸ್.ಜೈಕುಮಾರ್, ಗ್ರಾಮೀಣ ಜಂಟಿ ಕಾರ್ಯದರ್ಶಿ ಚನ್ನಬಸಪ್ಪ ಸಿ.ಹೊಂಡದಕಟ್ಟಿ, ಖಜಾಂಚಿ ಎಸ್.ಶಂಕರನ್ ಇತರರು ಉಪಸ್ಥಿತರಿದ್ದರು.


Share