ಪ್ರತಿಯೊಬ್ಬರೂ ಚುನಾವಣಾ ರಾಯಭಾರಿಯಾಗಿ ಮತ ಹಾಕಿಸಿ

Share

*ಪ್ರತಿಯೊಬ್ಬರೂ ಚುನಾವಣಾ ರಾಯಭಾರಿಯಾಗಿ ಮತ ಹಾಕಿಸಿ*

– *ಡಾ.ಕೆ.ವಿ.ರಾಜೇಂದ್ರ*

ಮೈಸೂರು,ಏ.20:- ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಚುನಾವಣಾ ರಾಯಭಾರಿಗಳಾಗಿ ಮತದಾನ ಮಾಡುವ ಮೂಲಕ ನಿಮ್ಮ ಕುಟುಂಬದವರನ್ನು ಪ್ರೇರಿಪಿಸಿ ಮತ ಹಾಕಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಡಾ.ಕೆ.ವಿ.ರಾಜೇಂದ್ರ ಅವರು ಕರೆ ನೀಡಿದರು.

ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶಾಹಿ ಎಕ್ಸ್ಪೋರ್ಟ್ ಗಾರ್ಮೆಂಟ್ಸ್‌ನಲ್ಲಿನ ನೌಕರರಿಗೆ ಗುರುವಾರ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರೂ ಪ್ರಜ್ಞಾವಂತ ಮತದಾರರಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಈಡೇರಿಸಬೇಕು ಎಂದು ತಿಳಿಸಿದರು.

ಮತದಾನ ಎಂಬುದು ಪವಿತ್ರ ಕಾರ್ಯವಾಗಿದ್ದು,
ಮೇ.10 ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ನೀವೂ, ನಿಮ್ಮ ಕುಟುಂಬವರ್ಗದವರು ಸೇರಿದಂತೆ ಸುತ್ತಮುತ್ತಲಿನ ಸ್ನೇಹಿತರು, ಬಂಧುಮಿತ್ರರಿಗೆಲ್ಲಾ ಮತದಾನ ಮಾಡುವಂತೆ ಉತ್ತೇಜಿಸಬೇಕು ಎಂದು ಸಲಹೆ ನೀಡಿದರು.

ಮತದಾನದ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬಾರದು. ಮತದಾನ ದಿನದಂದು ಯಾವುದೇ ಕೆಲಸ, ಕಾರ್ಯಗಳಿದ್ದರೂ ಬದಿಗೊತ್ತಿ ಮತಗಟ್ಟೆಗೆ ಬಂದು ಮತದಾನ ಮಾಡಬೇಕು. ಮತಗಟ್ಟೆಗಳಲ್ಲಿ ನೆರಳು, ಕುಡಿಯುವ ನೀರು, ಶೌಚಾಲಯ ಒಳಗೊಂಡಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರು ಮಾತನಾಡಿ, ಯಾವುದೇ ಆಮಿಷಕ್ಕೆ ಒಳಗಾಗದೆ ವಿವೇಚನೆಯಿಂದ ಮತ ಚಲಾಯಿಸಿಬೇಕು. ದೇಶದ ಅಭಿವೃದ್ಧಿಗೆ ಶ್ರಮಿಕ ವರ್ಗದವರ ಪಾತ್ರ ಪ್ರಮುಖವಾಗಿದ್ದು, ಎಲ್ಲರೂ ಮತದಾನ ಮಾಡುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೂಡುಗೆ ನೀಡಬೇಕು ಎಂದು ಹೇಳಿದರು‌.

ಇದೆ ಸಂದರ್ಭದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಮೈಸೂರು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ.ಗಿರೀಶ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಟಿ.ದಿನೇಶ್, ಉಪ ನಿರ್ದೇಶಕ ವರದೇಗೌಡ, ಸಹಾಯಕ ನಿರ್ದೇಶಕ ವಿಜಯಕುಮಾರ್, ಜಿಲ್ಲಾ ಪಂಚಾಯತ್ ಸಹಾಯಕ ನಿರ್ದೇಶಕರಾದ ವಿಶ್ವನಾಥ್, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಕೆ.ಎಂ.ರಘುನಾಥ್, ಇಲವಾಲ ಗ್ರಾ‌ಮ ಪಂಚಾಯಿತಿ ಪಿಡಿಒ ಹೇಮಂತ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.


Share