ಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೇ ಇರುವ ಮಾಲೀಕರ ವಿರುದ್ಧ ಕ್ರಮ

8
Share

 

*ಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೇ ಇರುವ ಮಾಲೀಕರ ವಿರುದ್ಧ ಕ್ರಮ- ಡಾ. ಹೆಚ್.ಸಿ.ಮಹದೇವಪ್ಪ*

ಮೈಸೂರು,7 :- ಮೈಸೂರು ನಗರ, ಹೊರವಲಯದ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಬಡಾವಣೆಗಳಲ್ಲಿ ಅಗತ್ಯವಾದ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೇ ಇರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ್‌ನ ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಮರ್ಪಕವಾಗಿ ನೀರು ನೀಡುವುದು, ಯುಜಿಡಿ ಸಮಸ್ಯೆ, ಕುಡಿಯುವ ನೀರು ನಿರ್ವಹಣೆ, ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವ ಬಗ್ಗೆ ಜನ ಪ್ರತಿನಿಧಿಗಳು ನೀಡಿದ ಸಲಹೆ ಸೂಚನೆ ಬಗ್ಗೆ ಮಾತನಾಡಿದರು.

ಕೆರೆಕಟ್ಟೆಗಳನ್ನು ದುರಸ್ತಿಪಡಿಸುವುದನ್ನು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹಾಗೂ ಆಗಸ್ಟ್ ಅಂತ್ಯಕ್ಕೆ ಅಥವಾ ಸೆಪ್ಟಂಬರ್ ತಿಂಗಳ ಮೊದಲ ವಾರ ನಡೆಯಲಿರುವ ಕೆಡಿಪಿ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗುತ್ತಿರುವ ಕಾರಣ ನಗರದಲ್ಲಿ ಕಾಡುತ್ತಿರುವ ಹಲವಾರು ಸಮಸ್ಯೆಗಳು ಮತ್ತು ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಅನುದಾನ ಕುರಿತು ಇಲಾಖಾವಾರು ಪಟ್ಟಿ ಮಾಡಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೈಸೂರು ನಗರವನ್ನು ನಾವು ಕ್ಲೀನ್‌ಸಿಟಿ ಎಂದು ಹೇಳುತ್ತೇವೆ. ಈ ನಿಟ್ಟಿನಲ್ಲಿ ಕ್ಲೀನ್ ಸಿಟಿ ಮಾಡಲು ನಿರ್ವಹಣೆ ಮಾರ್ಗ ಸರಿಯಾಗಿರಬೇಕು. ದಸರಾ ಮಹೋತ್ಸವಕ್ಕೂ ಮುನ್ನ ಹಲವು ಸಮಸ್ಯೆಗಳನ್ನು ಪರಿಹರಿಸಲು ಜನಪ್ರತಿನಿಧಿಗಳೊಂದಿಗೆ ನಗರ ಪ್ರದಕ್ಷಿಣೆ ಹಾಕಲಾಗುವುದು. ನಗರಪಾಲಿಕೆ, ಮುಡಾ ಮೊದಲಾದ ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಆಗಬೇಕಿರುವ ಕೆಲಸ, ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಸಲ್ಲಿಸಬೇಕು. ಮತ್ತೊಂದು ಬಾರಿ ಪರಿಶೀಲಿಸಿದ ಮೇಲೆ ಕೆಡಿಪಿ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ನಗರದ ವ್ಯಾಪ್ತಿಯಲ್ಲಿ ಖಾಸಗಿ ಬಡಾವಣೆಗಳನ್ನು ರಚನೆ ಮಾಡಿದವರು, ಮೂಲ ಸೌಕರ್ಯವನ್ನು ಒದಗಿಸದಿದ್ದಲ್ಲಿ ಎನ್‌ಒಸಿ ಯಾಕೆ ಕೊಡಬೇಕು. ಸರ್ಕಾರದಿಂದ ನೀಡುವ ಹಣವನ್ನು ಸರಿಯಾಗಿ ಬಳಸಿಕೊಳ್ಳದಿದ್ದಲ್ಲಿ ಯಾವ ಅಭಿವೃದ್ಧಿಯೂ ಆಗುವುದಿಲ್ಲ ಎಂದರು.

*ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ*
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚನೆ ಮಾಡಲು ಸೂಚನೆ ನೀಡಿದ ಸಚಿವರು, ಮುಡಾ, ನಗರಪಾಲಿಕೆ, ಲೋಕೋಪಯೋಗಿ, ಸಣ್ಣ ನೀರಾವರಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಹಾಗೂ ಸೆಸ್ಕ್ ಮೊದಲಾದ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿರಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ನಗರದ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಪರಿಹಾರ ಕಲ್ಪಿಸುವ ಹಾಗೂ ಇತ್ಯರ್ಥಪಡಿಸುವ ಬಗ್ಗೆ ಪರಿಶೀಲಿಸಬೇಕು. ಈ ಸಭೆಯಲ್ಲಿ ಚರ್ಚೆಯಾಗಿ ಸರ್ಕಾರದ ಹಂತದಲ್ಲಿ ತೀರ್ಮಾನ ಮಾಡುವಂತದನ್ನು ನನ್ನ ಗಮನಕ್ಕೆ ತರಬೇಕು ಎಂದು ಹೇಳಿದರು.

ನಗರದ ಯುಜಿಡಿ ಸಮಸ್ಯೆಯನ್ನು ಇತ್ಯರ್ಥಪಡಿಸುವ ಸಂಬAಧ ಘನತ್ಯಾಜ್ಯ ನೀರು ನಿರ್ವಹಣಾ ಘಟಕಕ್ಕೆ ಸೇರದೆ ರಾಜಕಾಲುವೆ, ಮೋರಿಗಳಿಗೆ ಹರಿದುಹೋಗುವುದನ್ನು ಗುರುತಿಸುವುದು, ಲಿಂಕ್ ಮಾಡಿರುವುದನ್ನು ಪತ್ತೆ ಹಚ್ಚುವುದರ ಜೊತೆಗೆ ಯುಜಿಡಿ ನೀರು ನೇರವಾಗಿ ಎಸ್‌ಟಿಪಿ ಪ್ಲಾಂಟ್‌ಗೆ ಸೇರುವಂತೆ ಮಾಡಲು ಡಿಪಿಆರ್ ತಯಾರು ಮಾಡಿ ಸಲ್ಲಿಸುವಂತೆ ನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ಜಿ.ಟಿ ದೇವೇಗೌಡ, ಶ್ರೀವತ್ಸ, ವಿಧಾನ ಪರಿಷತ್‌ನ ಸದಸ್ಯರಾದ ಡಾ. ಡಿ ತಿಮ್ಮಯ್ಯ, ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್, ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ, ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್, ಮಹಾನಗರ ಪಾಲಿಕೆ ಆಯುಕ್ತರಾದ ಆಶಾದ್ ಉರ್ ರೆಹಮಾನ್ ಶರೀಫ್, ಮೂಡಾ ಆಯುಕ್ತರಾದ ದಿನೇಶ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


Share