ಬೆಂಗಳೂರಿನಲ್ಲಿ ರಸ್ತೆ ಅಪಘಾತ : ಸ್ಥಳದಲ್ಲೇ ಸಾವನ್ನಪ್ಪಿದ ಅಪ್ಪ ಮಗ

ಆಟೋರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿಯಾಗಲು ಯತ್ನಿಸಿದ ಪರಿಣಾಮ ಓರ್ವ ವ್ಯಕ್ತಿ ಹಾಗೂ ಆತನ ಪುತ್ರ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಇಸ್ರೋ ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಅವರ ಸಂಬಂಧಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ದಾರಿಹೋಕರು ಆರೋಪಿ ಚಾಲಕನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರೆ, ಕಾರಿನಲ್ಲಿ ಆತನೊಂದಿಗಿದ್ದ ಇತರ ಇಬ್ಬರು ಪರಾರಿಯಾಗಿದ್ದಾರೆ. ಪೊಲೀಸರಿಗೆ ವಾಹನವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ.
ಮೃತರನ್ನು ಕೋರಮಂಗಲದಲ್ಲಿ ಪುಸ್ತಕ ಮಳಿಗೆ ನಡೆಸುತ್ತಿದ್ದ ರಘು (55) ಮತ್ತು ಅವರ ಮಗ ಚಿರಂಜೀವಿ (25) ಎಂದು ಗುರುತಿಸಲಾಗಿದೆ. ಇವರಿಬ್ಬರು ಅಂಗಡಿಯಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ರಾತ್ರಿ 11 ಗಂಟೆ ಸುಮಾರಿಗೆ ರಘು ಮತ್ತು ಚಿರಂಜೀವಿ ತಮ್ಮ ಬೈಕ್‌ನಲ್ಲಿ ಕುಳಿತು ಸಂಬಂಧಿಕರಾದ ವಾಸು ಅವರೊಂದಿಗೆ ಮಾತನಾಡುತ್ತಿದ್ದಾಗ ವೇಗವಾಗಿ ಬಂದ ಮಾರುತಿ ಇಕೋ ಕಾರು ರಸ್ತೆಯಲ್ಲಿ ನಿಂತಿದ್ದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ಕಾರು ಚಾಲಕ ವಾಹನವನ್ನು ವೇಗಗೊಳಿಸಿ ರಘು, ಚಿರಂಜೀವಿ ಮತ್ತು ವಾಸುಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.