ಬೇಲೂರ ಶಿಲಾಬಾಲಿಕೆ (ಕವನ)

Share

ಬೇಲೂರ ಶಿಲಾಬಾಲಿಕೆ

ಇವಳ್ಯಾರೋ ಚೆಲುವೆ ಬೇಲೂರ ಬಾಲೆ
ಹೊಯ್ಸಳ ಶಿಲ್ಪಿ ಕಲೆಯ ಸೌಂದರ್ಯ ಲೀಲೆ
ನಾಟ್ಯದರಸಿ ಶಾಂತಲೆಯ ಅನುರಾಗದ ಮಾಲೆ
ಶ್ರೀ ಚೆನ್ನಕೇಶವನ ಭವ್ಯ ಮಂದಿರದ ಮೇಲೆ ll

ಸಂಮೋಹನ ಗೊಳಿಸುವಂಥ ಅಂದದ ಬೆಡಗಿ
ಅಮರ ಶಿಲ್ಪಿ ಕಲ್ಪನೆಗಳಿಗೆ ಸಾಕಾರಗೊಂಡವಳು
ಕವಿಯ ಮನದ ಭಾವನೆಗಳಿಗೆ ಬಣ್ಣ ಬಳಿದು ನಿಂದವಳು
ಮಾನಸಾ ಲೋಕದಲ್ಲಿ ಚಿತ್ತಾರ ಬಿಡಿಸಿದಳು ll

ಕುಂಕುಮದ ಬೊಟ್ಟನ್ನು ಹಣೆಯಲ್ಲಿ ಇಟ್ಟವಳು
ಕೈತುಂಬಾ ಬಳೆಯ ತೊಟ್ಟು ಶೃಂಗಾರಗೊಂಡವಳು
ಥಳಥಳನೆ ಹೊಳೆಯುತ್ತಿರುವ ಮುತ್ತು ರತ್ನ ಹಾರಗಳು
ಕಿವಿಯಲ್ಲಿ ಕೊಹಿನೂರು ವಜ್ರದ ಓಲೆಗಳು ll

ತೊಂಡೆಯ ಹಣ್ಣಿನಂತೆ ಕೆಂಪಾದ ಅಧರವು
ಬೇವಿನ ಎಸಳಂತೆ ಕುಡಿಹುಬ್ಬು ಅಂದವು
ದಾಳಿಂಬೆ ಕಾಳಿನಂತೆ ಚೆಂದ ಇವಳ ದಂತವು
ಕಮಲದ ಹೂವಿನಂತೆ ಇವಳ ಕಣ್ಣ ನೋಟವು ll

ಅಪ್ಸರೆಗೂ ಮಿಗಿಲಾದ ಲಾವಣ್ಯವತಿಯೊ
ಗಂಧರ್ವ ಸೀಮೆಯಿಂದ ಭುವಿಗೆ ಬಂದ ರಂಬೆಯೊ
ಕೆಂಪು ಗುಲಾಬಿಯ ಕೆನ್ನೆಯ ಚೆಲುವೆಯೊ
ಮರುಳು ಮಾಡಿದ ನನ್ನ ಮಹಾಮಾಯಗಾತಿಯೊ ll

ನಾಗರ ಜಡೆಯವಳು ಅತಿಲೋಕ ಸುಂದರಿ
ಮುತ್ತಿನ ಮೂಗುತಿಯಿಟ್ಟು ಕಂಗೊಳಿಸುವ ನಾರಿ
ಕಾಲ್ಗೆಜ್ಜೆ ಕಟ್ಟಿಕುಣಿವ ನಾಟ್ಯ ಮಯೂರಿ
ಶಿಲೆಯಲ್ಲಿ ಅರಳಿರುವ ಬೇಲೂರ ಕಿನ್ನರಿ ll

ಬೇಲೂರ ಶಿಲಾಬಾಲಿಕೆ. ಈ ಕವನ ರಚಿಸಿದವರು ಶ್ರೀ ಕೆ. ರಮೇಶನ್ ಸಾಹಿತಿ ಜ್ಯೋತಿಷ್ಯರು ಮೈಸೂರು


Share