ಬೌದ್ಧರ ಐತಿಹಾಸಿಕ ಸ್ಥಳಗಳನ್ನು ಸರ್ಕಾರ ಸಂರಕ್ಷಿಸಬೇಕು: ಆರ್.ಮಹಾದೇವಪ್ಪ
ಮೈಸೂರು: ೨ ಸಾವಿರ ವರ್ಷಗಳ ಇತಿಹಾಸವಿರುವ ಬೌದ್ಧರ ಐತಿಹಾಸಿಕ ಸ್ಥಳಗಳು, ಸ್ತೂಪಗಳನ್ನು ಸರ್ಕಾರ ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ಬುದ್ಧಧಮ್ಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಮಹಾದೇವಪ್ಪ ಹೇಳಿದರು.
ವಿಜಯನಗರ ೧ನೇ ಹಂತದಲ್ಲಿರುವ ಕರ್ನಾಟಕ ಬುದ್ಧಧಮ್ಮ ಸಮಿತಿ ವತಿಯಿಂದ ದೇಶಾದ್ಯಂತ ಬೌದ್ಧ ಸಂಘ-ಸಂಸ್ಥೆಗಳು ಸೋಮವಾರ ಹಮ್ಮಿಕೊಂಡಿದ್ದ ‘ಸಾಕೇತಾ ರಕ್ಷಿಸಿ ಬೌದ್ಧ ಪರಂಪರೆ ಉಳಿಸಿ’ ಎಂಬ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಯೋಧ್ಯ ರಾಮ ಮಂದಿರ ನಿರ್ಮಾಣ ಸ್ಥಳದಲ್ಲಿ ದೊರಕಿರುವ ಬೌದ್ಧ ಧರ್ಮದ ಅವಶೇಷಗಳು, ಕುರುಹುಗಳನ್ನು ಸಂರಕ್ಷಿಸುವುದರ ಜೊತೆಗೆ ಆ ಸ್ಥಳವನ್ನು ಬೌದ್ಧರ ಸ್ಥಳವನ್ನಾಗಿಯೇ ಉಳಿಸಬೇಕು. ಬೌದ್ಧಧರ್ಮದ ಕುರುಹುಗಳು ಈ ಸ್ಥಳದಲ್ಲಿ ದೊರಕಿರುವುದರಿಂದ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ಈ ಸ್ಥಳವನ್ನು ಬೌದ್ಧರ ಕೇಂದ್ರವಾಗಿಯೇ ಉಳಿಸಬೇಕು ಎಂದು ಮನವಿ ಮಾಡಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಎಚ್.ಶಿವರಾಜು, ನಿವೃತ್ತ ಅಭಿಯಂತರ ಆರ್.ನಟರಾಜು, ರಾಜು ಹಂಪಾಪುರ, ಪುಟ್ಟಸ್ವಾಮಿ, ನಿಸರ್ಗ ಸಿದ್ದರಾಜು, ಸಾಹಿತಿ ಡಾ.ಕುಪ್ನಳ್ಳಿ ಎಂ.ಬೈರಪ್ಪ, ಸಂಶೋಧಕರಾದ ಮಂಜು, ರೂಪೇಶ್, ಶಿಕ್ಷಕ ಮಹಾದೇವಸ್ವಾಮಿ ಇನ್ನಿತರರು ಹಾಜರಿದ್ದರು.