‘ಬ್ರಾಹ್ಮಣರ’ ಜಾತಿ ಪತ್ರ ಪಡೆಯಲು: ಅರ್ಹತೆ ಏನು ಸರ್ಕಾರ ಪ್ರಕಟಿಸಲು ಆಗ್ರಹ

ರಾಜ್ಯ ಸರ್ಕಾರ ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ನೀಡಲು ಆದೇಶಿಸಿರುವುದು ಸಂತೋಷದ ವಿಷಯ. ಇದನ್ನು ಪಡೆಯಲು ಅರ್ಹತೆ ಏನು ಎಂಬುದನ್ನು ಕೂಡ ನಮೂದಿಸುವಂತೆ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಬಿ.ಆರ್.ನಟರಾಜ್ ಜೋಯಿಸ್ ಒತ್ತಾಯಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಕೇವಲ ಕೌಟುಂಬಿಕ ಆದಾಯ 8ಲಕ್ಷರೂ.ಗಿಂತ ಹೆಚ್ಚಿರಬಾರದೆಂಬ ಮಾತು ಕೇಳಿ ಬರುತ್ತಿದೆ. ಸರ್ಕಾರ ಸರಿಯಾದ ಅರ್ಜಿಯನ್ನು ರೂಪಿಸಬೇಕು. ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಕೇವಲ ತಂದೆ ಬ್ರಾಹ್ಮಣನಾಗಿದ್ದಲ್ಲಿ ಮಾತ್ರ ಮಕ್ಕಳು ಬ್ರಾಹ್ಮಣ ಎಂದು ಪರಿಗಣಿಸತಕ್ಕದ್ದು. ತಾಯಿಯ ಜಾತಿಗೆ ಮಹತ್ವವಿರುವುದಿಲ್ಲ ಎಂದರಲ್ಲದೇ ಅರ್ಜಿಯಲ್ಲಿ ಅರ್ಜಿ ಸಂಖ್ಯೆ ಮತ್ತು ದಿನಾಂಕ, ಅರ್ಜಿದಾರನ ಸಂಪೂರ್ಣ ಹೆಸರು, ಅರ್ಜಿದಾರನ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸ, ಅರ್ಜಿದಾರನ ಬ್ರಾಹ್ಮಣ ಜಾತಿಯ ಪಂಗಡ ಮತ್ತು ಉಪಪಂಗಡ, ಅರ್ಜಿದಾರನ ತಂದೆಯ ಹೆಸರು, ವಿಳಾಸ, ಮೂಲಸ್ಥಳ, ಕಸುಬು, ಅರ್ಜಿದಾರನ ತಾತನ ಹೆಸರು, ವಿಳಾಸ, ಮೂಲಸ್ಥಳ, ಕಸುಬು,ಅರ್ಜಿದಾರನ ಸಂಪೂರ್ಣ ಗೋತ್ರಪ್ರವರ, ಅರ್ಜಿದಾರ ಯಾವ ಶಾಖಾ ಮಠದ ಅನುಯಾಯಿ ಎಂಬುದನ್ನು ನಮೂದಿಸಬೇಕು. ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದಲ್ಲಿ ನೀಡಲಾಗಿರುವ ಪ್ರಮಾಣಪತ್ರವನ್ನು ಕೂಡಲೇ ರದ್ದುಗೊಳಿಸಬೇಕು. ಅರ್ಜಿಯ ವಿವರಗಳನ್ನು ಸರ್ಕಾರದ ದತ್ತಾಂಶದಲ್ಲಿ ಹುಡುಕಲು ಮತ್ತು ಮಾಹಿತಿ ತಪ್ಪಾಗಿ ನಮೂದಾಗಿದ್ದಲ್ಲಿ ಅದನ್ನು ಸರಿಪಡಿಸಲು ತಿದ್ದುಪಡಿ ಅರ್ಜಿ ಸಲ್ಲಿಕೆಗೆ ಅವಕಾಶವಿರಬೇಕು. ಯಾರಾದರೂ ತಪ್ಪು ಮಾಹಿತಿ ನೀಡುರವ ಬಗ್ಗೆ ದೂರು ಸಲ್ಲಿಸಲು ಅವಕಾಶವಿರಬೇಕು ಎಂದರು.

ಈ ಕುರಿತು ಮುಖ್ಯಮಂತ್ರಿಗಳು, ಕಂದಾಯ ಸಚಿವರು, ಮುಖ್ಯಕಾರ್ಯದರ್ಶಿಗಳು, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಎಲ್ಲಾ ಬ್ರಾಹ್ಮಣ ಸಂಘಸಂಸ್ಥೆಯ ಮುಖ್ಯಸ್ಥರು ಚರ್ಚಿಸಿ ಅವಶ್ಯಕ ನಿಯಮ ರೂಪಿಸಿ ಕ್ರಮ ಜರುಗಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಡಾ.ರಘುರಾಂ ವಾಜಪೇಯಿ, ಜಿ.ಆರ್.ವಿದ್ಯಾರಣ್ಯ, ವಿಜಯಲಕ್ಷ್ಮಿ, ಎಂಎಸ್ ಅನಂತ್ ಪ್ರಸಾದ್ ಉಪಸ್ಥಿತರಿದ್ದರು.