*ಭಾನುವಾರದ ಸಂತೆಯಲ್ಲಿ ಮತದಾನ ಜಾಗೃತಿ

Share

 

*ಭಾನುವಾರದ ಸಂತೆಯಲ್ಲಿ ಮತದಾನ ಜಾಗೃತಿ*

ಮೈಸೂರು,  ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕೆಂಬ ಉದ್ದೇಶದಿಂದ ಮೈಸೂರು ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಕೃಷಿ ಇಲಾಖೆಯ ಸಹಯೋಗದೊಂದಿಗೆ ವಿಜಯನಗರದ 2ನೇ ಹಂತದಲ್ಲಿರುವ ರೈತ ಸಂತೆ ಕಟ್ಟಡದಲ್ಲಿ ನಡೆದ ಭಾನುವಾರದ ಸಂತೆಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲಾಯಿತು.

ಈ ವೇಳೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಡಿ.ಗಿರೀಶ್ ಅವರು ಮಾತನಾಡಿ, ವ್ಯವಸಸ್ಥಿತ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಮತದಾನ ಮಾಡಬೇಕು. ಸಂವಿಧಾನ ನಮಗೆ ನೀಡಿರುವ ಹಕ್ಕನ್ನು ನೈತಿಕವಾಗಿ ಚಲಾಯಿಸುವುದು ನಮ್ಮ ಗುರುತರವಾದ ಜವಾಬ್ದಾರಿಯಾಗಿದೆ. ಮೇ.10 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ಹೇಳಿದರು.

ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಚಾಮರಾಜು ಅವರು ಮಾತನಾಡಿ, ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾನ ಪ್ರಬಲವಾದ ಅಸ್ತ್ರವಾಗಿದೆ. ಒಂದು ಮತವೂ ಕೂಡ ಅತ್ಯಮೂಲ್ಯವಾಗಿದ್ದು, ಮತದಾನ ಮಾಡುವುದು ಪ್ರಜ್ಞಾವಂತ ನಾಗರಿಕರ ಆದ್ಯ ಕರ್ತವ್ಯ ಎಂದು ತಿಳಿಸಿದರು.

ಇದೇ ವೇಳೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಕೆ.ಎಂ.ರಘುನಾಥ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಹೆಚ್.ವಿ.ಮಧುಲತಾ, ಮೀನುಗಾರಿಕೆ ಇಲಾಖೆಯ ಎಂ.ಮಹದೇವು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Share