ಮಂಡ್ಯ-ಎಸಿ ಕಚೇರಿಗೆ ಜಿಲ್ಲಾಧಿಕಾರಿಗಳು ದಿಢೀರ್ ಭೇಟಿ

ಎಸಿ ಕಚೇರಿಗೆ ಜಿಲ್ಲಾಧಿಕಾರಿಗಳು ದಿಢೀರ್ ಭೇಟಿ
ಮಂಡ್ಯ.ಆ.10:-
ಜಿಲ್ಲಾಧಿಕಾರಿ ಡಾ.ಕುಮಾರ ಅವರು ಇಂದು ಮಂಡ್ಯ ಉಪವಿಭಾಗೀಯ ಕಚೇರಿ ಹಾಗೂ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆರ್ ಟಿ ಸಿ ತಿದ್ದುಪಡಿ, ಸರ್ವೆ ಇಲಾಖೆ ಹಾಗೂ ಕೋರ್ಟ್ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪರಿಶೀಲನೆ ಮಾಡಿ ಸ್ವತಃ ಖುದ್ದು ಕಡತ ಪರಿಶೀಲನೆ ಮಾಡಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು. ಕಾನೂನು ವ್ಯಾಪ್ತಿಯಲ್ಲಿ ಯಾವುದನ್ನು ಅತಿ ತುರ್ತಾಗಿ ಮಾಡಬೇಕು ಅದನ್ನು ಖಂಡಿತವಾಗಿಯೂ ಮಾಡುತ್ತೇನೆ. ತಹಶೀಲ್ದಾರ್ ಹೊಸದಾಗಿ ಬಂದಿರುವುದರಿಂದ ಇಲ್ಲಿಯ ಕೆಲಸಗಳ ಬಗ್ಗೆ ತಿಳಿದುಕೊಳ್ಳಲು ಅವರಿಗೂ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಪ್ರಾರಂಭದಲ್ಲಿ ಅವರಿಗೂ ಸ್ವಲ್ಪ ತೊಡಕುಗಳು ಉಂಟಾಗಿರುತ್ತವೆ, ಆದರೂ ಸಹ ಕಾನೂನು ವ್ಯಾಪ್ತಿಗೆ ಒಳಪಡುವ ಎಲ್ಲಾ ಕೆಲಸಗಳನ್ನು ಹಾಗೂ ಉಳಿದಿರುವ ಎಲ್ಲಾ ಕೆಲಸಗಳನ್ನು ತುರ್ತಾಗಿ ಮಾಡಲು ಆದೇಶ ಮಾಡಿದ್ದೇನೆ ಎಂದರು.

ಈ ಹಿಂದೆ ಕೈ ಬರವಣಿಗೆ ಆರ್‍ಟಿಸಿ ಹಾಗೂ ಕೆಲವು ದಾಖಲೆಗಳ ಮೇಲೆ ತಿದ್ದುಪಡಿಗಳಾಗಿದ್ದರೆ ಅದರ ಬಗ್ಗೆ ಪರಿಶೀಲನೆ ಮಾಡಿ ತಹಶೀಲ್ದಾರ್ ಹಾಗೂ ಎಸಿ ಕೋರ್ಟ್ ನಲ್ಲಿ ಇತ್ಯರ್ಥ ಆಗಬೇಕು. ಅಂತಹ ಪ್ರಕರಣಗಳು ಯಾವುದಾದರು ಇದ್ದರೆ ನಾನು ತಕ್ಷಣ ಅದನ್ನು ಪರಿಶೀಲನೆ ಮಾಡಿಸುತ್ತೇನೆ ಎಂದು ತಿಳಿಸಿದರು.

ಕಂದಾಯ ಇಲಾಖೆ ಹಾಗೂ ಎಸಿ ಕಚೇರಿಗೆ ಭೇಟಿ ಕೊಡುವ ಯಾವುದೇ ಸಾರ್ವಜನಿಕರು ಮಧ್ಯವರ್ತಿಗಳನ್ನು ಸಂಪರ್ಕಿಸಬಾರದು ಯಾವುದೇ ಕೆಲಸವಿದ್ದರೂ ನೇರವಾಗಿ ತಹಶೀಲ್ದಾರ್ ತಾಲೂಕು ದಂಡಾಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕಂದಾಯ ಅಧಿಕಾರಿಗಳು ಹಾಗೂ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿ ಇಲ್ಲದಿರುವುದು ಗಮನಕ್ಕೆ ಬಂದಿದೆ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಅತೀವೃಷ್ಠಿ- ಅನಾವೃಷ್ಠಿ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ನೀಡಲಾಗುವ ಪರಿಹಾರವನ್ನು ಪಾವತಿಸಲು ಸರಿಯಾದ ಮಾಹಿತಿಯನ್ನು ನಿಗದಿತ ಸಮಯದೊಳಗೆ ಸಂಬಂಧಿಸಿದ ಅಧಿಕಾರಿಗಳು/ಸಿಬ್ಬಂದಿಗಳು ಸರ್ಕಾರದ ನಿರ್ದೇಶನದಂತೆ ಕ್ರಮವಹಿಸಬೇಕು. ಮನೆಹಾನಿ ಬೆಳೆಹಾನಿ ಕುರಿತಂತೆ ಪರಿಹಾರ ಪಾವತಿಯಾಗದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದಕ್ಕೂ ಮುನ್ನ ತಾಲ್ಲೂಕು ಕಚೇರಿಯಲ್ಲಿ ನರೆದಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಕೆಲವೊಂದನ್ನು ಸ್ಥಳದಲ್ಲೇ ಪರಿಹರಿಸಿದರು.

ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ಇದ್ದರು.