ತಾಯ೦ದಿರು ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಪ್ರಣಾಮ

684
Share

ಬಸಿರಿನಲ್ಲಿ ನವ ಮಾಸಗಳು ಹೊತ್ತು
ಉಸಿರಿತ್ತು ಜನ್ಮ ನೀಡಿ, ತುತ್ತಿಟ್ಟು ಮುತ್ತಿಟ್ಟು, ಹೆಸರಿಟ್ಟು ಜಗಕೆ ತೋರಿಸಿ
ಗರಿಗೆದರುವ ಮುನ್ನ ಜನ್ಮದಾತನು ಮರೆಯಾದರೂ, ಮಕ್ಕಳಿಗಾಗಿ ನೋವ
ನುಂಗಿ, ನಮ್ಮ ಓರೆ, ಕೋರೆಗಳ ದೂರಮಾಡಿ, ಬಾಳಿನ ನಾಳೆಯ ಕನಸುಗಳ ಗರಿ ಮೂಡಿಸಿ ತಿದ್ದಿ ತೀಡಿ ಸವಿ ಸಂಗೋಪನೆಯಲಿ ಸಲಹಿ, ನಾವು ಬದುಕಿನ ಏಳಿಗೆಯ ಬೆಟ್ಟ ಹತ್ತಲು ಬೆನ್ನಿಗೆ ನಿಂತು, ಶಿಖರವೇರಿದ ಕರುಳ
ಕುಡಿಯ ಕಂಡು ಹಿರಿ ಹಿರಿ ಹಿಗ್ಗಿ ಸಗ್ಗದ ಸುಖವ ಕಂಡ ಜನ್ಮದಾತೆ, ಪ್ರೀತಿಯಿಂದ
ಪೊರೆದಾತೆ ನೀನು. ನನಗೆ ಇಂದಿಗೂ ಆಶ್ಚರ್ಯವಾಗುವ ಸಂಗತಿಯೆಂದರೆ ನಿನ್ನಲ್ಲಿರುವ ಮಾಸದ ಚೈತನ್ಯ, ಚುರುಕುತನ. ಇದೇ ನನಗೆ ಈ ಸಂದರ್ಭದಲ್ಲಿ ಸ್ಫೂರ್ತಿಯಾಗಿದೆ. ನಿನ್ನ ಮಾದರಿಯಲ್ಲೇ ನಾನಿಂದು ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಿದ್ದೇನೆ. ನನ್ನ ಸರ್ವಸ್ವವೂ ನೀನಾಗಿರುವ ಪ್ರೀತಿಯ ಅಮ್ಮನಿಗೆ ಜಾಗತಿಕ ಜನ್ಮದಾತೆಯರ ದಿನದ ಪ್ರೀತಿಯ ಹೃದಯಂಗಮ ಪ್ರಣಾಮಗಳು.

ಇಂದಿನ ಯುವ ಪೀಳಿಗೆಗೆ ನನ್ನ ಮನವಿ

ಬದುಕಿನಲ್ಲಿ ಎಷ್ಟೇ ಎತ್ತರಕ್ಕೆ ಏರಿದರೂ ಹೆತ್ತವರನ್ನು ಮರೆಯದೇ ಪೊರೆಯುವುದು ಪರಮಧರ್ಮವಲ್ಲವೇ. ತಂದೆ -ತಾಯಿಗಳಿಗಿಂತ ಬಂಧುಗಳಿಲ್ಲ. ಉಪ್ಪಿಗಿಂತ ರುಚಿ ಬೇರಿಲ್ಲ. ಈ ನಿಟ್ಟಿನಲ್ಲಿ ಹೆತ್ತವರನ್ನು ಗೌರವಿಸಿ, ಚೆನ್ನಾಗಿ ನೋಡಿಕೊಳ್ಳಿ.

ಎಸ್.ಟಿ.ಸೋಮಶೇಖರ್
ಸಹಕಾರ ಸಚಿವರು, ಕರ್ನಾಟಕ ಸರ್ಕಾರ


Share