ಮಾಸ್ಕ್ ಬಳಕೆ: ಸಭ್ಯತೆಯ ಪಾಠ ಸಾಕು
ಒಂದು ಬಾರಿ ಬಳಸಿ ಬಿಸಾಡುವ ಒಂದು ಮಾಸ್ಕಿಗೆ ಕನಿಷ್ಠ ₹ 15, ವಾರ, ತಿಂಗಳು ಇಟ್ಟುಕೊಳ್ಳುತ್ತೇವೆ ಅಂದರೆ ಕನಿಷ್ಠ ₹ 100 ಬೇಕು. ಐದು ಜನರ ಕುಟುಂಬ ಸಾಧಾರಣವಾದ ಮಾಸ್ಕ್ ಧರಿಸಿ ಓಡಾಡಲು ದಿನಕ್ಕೆ ₹ 75 ವ್ಯಯಿಸಬೇಕು. ಹದಿನೈದು ದಿನಕ್ಕೆ ಬದಲಿಸುವ ಮಾಸ್ಕ್ ಆದರೆ ತಿಂಗಳಿಗೆ ₹ 1,000 ಹೊಂದಿಸಬೇಕು!
ಭಾರತದ ಎಷ್ಟು ಕುಟುಂಬಗಳಿಗೆ ಒಳ್ಳೆಯ ಆಹಾರ, ಆರೋಗ್ಯ, ಶಿಕ್ಷಣ, ನೀರು, ಮೂಲ ಸೌಕರ್ಯಗಳ ಜೊತೆಗೆ ಮಾಸ್ಕ್ ವೆಚ್ಚವನ್ನೂ ಹೊಂದಿಸಲು ಸಾಧ್ಯವಿದೆ? ಕನಿಷ್ಠ ಶೇಕಡ 30ರಷ್ಟು ಕುಟುಂಬಗಳು ಕಡುಬಡತನದ ಸ್ಥಿತಿಯಲ್ಲಿ ಇವೆ. ಅವರ ಕೈಯಲ್ಲಿ ಖಂಡಿತ ಈ ವೆಚ್ಚ ಭರಿಸಲಾಗದು. ಆ ಕಾರಣಕ್ಕೆ ರಸ್ತೆಯಲ್ಲಿ ಮುಖಕ್ಕೆ ತುಂಡು ಬಟ್ಟೆ ಮುಚ್ಚಿಕೊಂಡು ಓಡಾಡುವವರ ಸಂಖ್ಯೆ ಹೆಚ್ಚಾಗಿ ಕಾಣುತ್ತದೆ. ಸೊಪ್ಪು, ತರಕಾರಿ ಮಾರುವವರು, ದಿನಗೂಲಿ ನೌಕರರು, ಹಾಲು, ಪೇಪರ್ ಹಾಕುವವರು, ಪೌರಕಾರ್ಮಿಕರು ಮುಂತಾದವರು ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಹೀನಾಯವಾಗಿ ಕಾಣುವುದನ್ನು, ಅವರಿಗೆ ಸಭ್ಯತೆಯ, ನಾಗರಿಕತೆಯ ಪಾಠ ಮಾಡುವುದನ್ನು ನಾವು ಬಿಡಬೇಕಿದೆ. ಈ ವರ್ಗಗಳಿಗೆ ಉಚಿತ ಮಾಸ್ಕ್ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕಿದೆ.
ಇಂತಿ
ವಿಕ್ರಂ ಅಯ್ಯಂಗಾರ್
ಅಧ್ಯಕ್ಷರು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಮೈಸೂರು