ಮಿಡತೆ ಹಿಂಡುಗಳ ಸಂಚಾರದ ಬಗ್ಗೆ ರೈತರು, ಕೃಷಿ ಇಲಾಖೆ ಅಧಿಕಾರಿಗಳು
ಮುನ್ನೆಚರಿಕೆ ವಹಿಸಲು ಜಿಲ್ಲಾಧಿಕಾರಿ ದೀಪಾ ಚೊಳನ್ ಸೂಚನೆ
ಧಾರವಾಡ (ಕರ್ನಾಟಕ ವಾರ್ತೆ)ಜೂ.02: ಮಿಡತೆಗಳು ಉತ್ತರ ಭಾರತದ ಗುಜರಾತ, ರಾಜ್ಯಸ್ಥಾನ, ಹರಿಯಾಣ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಕೃಷಿ, ಅರಣ್ಯ ಹಾಗೂ ತೋಟಗಾರಿಕಾ ಬೆಳೆಗಳ ಮೇಲೆ ದಂಡಿನ ರೂಪದಲ್ಲಿ ದಾಳಿ ಇಟ್ಟಿದ್ದು, ಕೃಷಿ ಇಲಾಖೆ ಹಾಗೂ ರೈತರು ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಅವರು ನಿನ್ನೆ (ಜೂ.1) ಬೆಳಿಗ್ಗೆ ಜಿಲ್ಲಾಧಿಕಾರಿಗಳ ನೂತನ ಕಚೇರಿ ಸಭಾಂಗಣದಲ್ಲಿ ಮರಭೂಮಿ ಮಿಡೆತೆಗಳ ಹಾವಳಿ ತಡೆಗಟ್ಟುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ವಿದೇಶದಿಂದ ಆಗಮಿಸಿರುವ ಮಿಡತೆÀಗಳ ಹಿಂಡು ವಿವಿಧ ರಾಜ್ಯಗಳ ಮೂಲಕ ಸಂಚರಿಸಿ ಕೃಷಿ, ಅರಣ್ಯ ಹಾಗೂ ತೋಟಗಾರಿಕಾ ಬೆಳೆಗಳನ್ನು ತಿನ್ನುತ್ತವೆ. ಇವುಗಳ ನಿಯಂತ್ರಣಕ್ಕಾಗಿ ರೈತರಿಗೆ ಕೃಷಿ ಇಲಾಖೆ ಅಧಿಕಾರಿಗಳು ಜಾಗೃತಿ ಕಾರ್ಯಕ್ರಮಗಳನ್ನ ರೂಪಿಸಬೇಕು. ಗ್ರಾಮ ಪಂಚಾಯತ ಮಟ್ಟದಲ್ಲಿ ಸಭೆಗಳನ್ನು ಏರ್ಪಡಿಸಿ ಮಿಡತೆಗಳ ಸಂಚಾರ ಹಾಗೂ ಅವುಗಳ ಜೀವನ ಚಕ್ರದ ಕುರಿತು ಪೂರ್ಣ ಮಾಹಿತಿಯನ್ನು ರೈತ ಸಮುದಾಯಕ್ಕೆ ನಿಡಬೇಕೆಂದು ಅವರು ಸೂಚಿಸಿದರು.
ಮಿಡತೆಯ ಹಿಂಡು ಜಮೀನುಗಳಿಗೆ ಆಗಮಿಸಿದರೆ ರೈತರು ತಮ್ಮ ಹೊಲಗಳಲ್ಲಿಯ ಬೆಳೆಗಳನ್ನು ರಕ್ಷಿಸಿಕೊಳ್ಳಲು ಖಾಲಿ ಡಬ್ಬಿ, ತಟ್ಟೆ, ಡ್ರಮ್ ಡೋಲು ಅಥವಾ ಇನ್ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಶಬ್ಧ ಮಾಡಿ ಮಿಡತೆಗಳನ್ನು ಹೊಲಗಳಲ್ಲಿ ಇಳಿಯದಂತೆ ಎಚ್ಚರಿಕೆ ವಹಿಸಿ ಓಡಿಸಬಹುದು ಅಥವಾ ಪಟಾಕಿ ಅಥವಾ ಸಿಡಿಮದ್ದುಗಳನ್ನು ಸಿಡಿಸಿ ಓಡಿಸಬಹುದು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ್ ಮಾತನಾಡಿ, ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್ ಕಮೀಟಿಯಿಂದ ಗ್ರಾಮ ಮಟ್ಟದಲ್ಲಿ ಸಭೆ ಕರೆದು ಗ್ರಾಮಸ್ಥರಿಗೆ ಮಿಡತೆಯ ಗುಂಪುಗಳ ಬಗ್ಗೆ ತಿಳುವಳಿಕೆ ನಿಡಬೇಕು. ಮಿಡತೆಯ ಹಾವಳಿ ನಿಯಂತ್ರಣಕ್ಕಾಗಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕ್ರೀಯಾಯೋಜನೆಯನ್ನು ರೂಪಿಸಬೇಕು. ಅಗತ್ಯವೆನಿಸಿದರೆ ವಿಶೇಷ ಗ್ರಾಮ ಸಭೆಗಳನ್ನು ಜರುಗಿಸಿ ಅಗತ್ಯೆ ಸಿದ್ದತೆಯನ್ನು ಮಾಡಿಕೊಳ್ಳಬೇಕೆಂದು ಅವರು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ ಐ.ಬಿ. ಅವರು ಮಾತನಾಡಿ, ಮಿಡತೆಗಳ ಹಾವಳಿ ಕಂಡು ಬಂದಲ್ಲಿ ರೈತರು ಬೇವಿನ ಮೂಲ ಕೀಟನಾಶಕ 0.15% ಇ.ಸಿವನ್ನು ಪ್ರತಿ 15 ಲೀಟರ್‍ಗೆ 45 ಮಿ.ಲೀಯಂತೆ ಸೇರಿಸಿ ನಿಂತ ಬೆಳೆಯ ಮೇಲೆ ಸಿಂಪಡಿಸಿ ಮಿಡತೆಗಳನ್ನು ವಿಕರ್ಷಿಸಬಹುದು.
ಮತ್ತು ಬೆಳೆಗಳ ಮೇಲೆ ಶೇ. 1.5 ರ ಕ್ವಿನಾಲ್ ಫಾಸ್ ಅಥವಾ ಶೇ. 1.5 ರ ಕ್ಲೋರೋಪ್ಲೈರಿಫಾಸ್ ಅಥವಾ ಶೇ. 2 ರ ಮಿಥೈಲ್ ಫೆರಾಥಿಯಾನ್ ಹುಡಿಯನ್ನು ನಿಂತ ಬೆಳೆಗಳ ಮೇಲೆ ಧೂಳಿಕರಿಸಬಹುದು. ಹಾಗೂ 500 ಮೀ.ಲೀ ಡಿಡಿವಿಪಿ, 76 ಇಸಿ ಕೀಟೌಷಧವನ್ನು 500 ಮಿ.ಲೀ. ನೀರಿನೊಂದಿಗೆ ಬೆರೆಸಿ 100 ಕಿ.ಲೋ ಒಣ ಉಸುಕಿನೊಂದಿಗೆ ಮಿಶ್ರಣಮಾಡಿ ಬೆಳೆಗಳ ಮೇಲೆ ಎರಚಬಹುದು. ಈ ರೀತಿ ಎರಚುವುದರಿಂದ ಮಿಡತೆಗಳ ಹಾವಳಿಯನ್ನು ತಕ್ಷಣದಲ್ಲಿಯೇ ಕಡಿಮೆ ಮಾಡಬಹುದೆಂದು ಅವರು ಹೇಳಿದರು.
ಕೀಟನಾಶಕಗಳ ಸಿಂಪರಣೆ ಬಳಕೆಯನ್ನು ತಂಪಾದ ಸಮಯದಲ್ಲಿ ಅಂದರೆ ಬೆಳಗ್ಗಿನ 7 ರಿಂದ 10 ಘಂಟೆಯವರೆಗೂ ಹಾಗೂ ಸಾಯಂಕಾಲ 5 ರಿಂದ 7 ಘಂಟೆಯವರೆಗೂ ಕೈಗೊಳ್ಳುವುದು ಸೂಕ್ತವಾಗಿದೆ. ಕೀಟನಾಶಕ ಸಿಂಪರಣೆ ಕೈಗೊಳ್ಳುವಾಗ ಅವಶ್ಯಕ ಬಟ್ಟೆಗಳಿಂದ ಮೈಯನ್ನು ಮುಚ್ಚಿಕೊಂಡಿರುವುದು ಹಾಗೂ ಮುಖಗವಸುಗಳು, ಕೈಗವಸುಗಳು ಹಾಗೂ ಟೊಪ್ಪಿಗೆಗಳನ್ನು ಬಳಸಬೇಕು.
ಕಿಟನಾಶಕಗಳ ಸಿಂಪರಣೆ ಮುಗಿದ ನಂತರ ಕೂಡಲೇ (ಕ್ಷೇತ್ರವನ್ನು ತೊರೆಯುವುದು ಒಳ್ಳೆಯದು) ಜಮೀನಿನಿಂದ ಹೊರನಡೆಯಬೇಕು. ಕೀಟನಾಶಕ ಸಿಂಪರಣೆಯ ನಂತರ ಯಾವುದೇ ಬೆಳೆಯ ಕೊಯ್ಲನ್ನು ಕನಿಷ್ಠ ಒಂದು ವಾರದವರೆಗೆ ಕೈಗೊಳ್ಳಬಾರದು. ಸಾಗುವಳಿ ಮಾಡದ ಹೊಲಗಳಲ್ಲಿ, ಪ್ರದೇಶಗಳಲ್ಲಿ ಮೊಟ್ಟೆ ಇಕ್ಕುವ ರಂಧ್ರಗಳು ಕಂಡು ಬಂದಲ್ಲಿ ಶೇ. 1.5 ರ ಕ್ವಿನಾಲ್ ಫಾಸ್ ಅಥವಾ ಶೇ. 1.5 ರ ಕ್ಲೋರೋಪ್ಲೈರಿಫಾಸ್ ಅಥವಾ ಶೇ. 2 ರ ಮಿಥೈಲ್ ಫೆರಾಥಿಯಾನ್ ಹುಡಿಯನ್ನು ಧೂಳಿಕರಿಸಬಹುದು ಹಾಗೂ ನಂತರ ಇಂತಹ ಕ್ಷೇತ್ರದಲ್ಲಿ ರೆಂಟೆ ಹೊಡೆಯುವ ಮೂಲಕ ಮೊಟ್ಟೆ ಗುಂಪುಗಳನ್ನು ಹಾಗೂ ಮಿಡತೆಗಳ ನವಜಾತ ಮರಿಗಳನ್ನು ಸಾಯಿಸಬಹುದಾಗಿದೆ ಎಂದು ಅವರು ಹೇಳಿದರು.
ಮೊಟ್ಟೆಯಿಂದ ನವಜಾತ ಮರಿಗಳು ಹಾಗೂ ಅಪ್ಸರೆ ಕೀಟಗಳು ಹೊರಬರುತ್ತಿರುವುದನ್ನು ಗಮನಿಸಿದಾಗ ಶೇ. 1.5 ರ ಕ್ವಿನಾಲ್ ಫಾಸ್ ಅಥವಾ ಶೇ. 1.5 ರ ಕ್ಲೋರೋಪ್ಲೈರಿಫಾಸ್ ಅಥವಾ ಶೇ. 2 ರ ಮಿಥೈಲ್ ಫೆರಾಥಿಯಾನ್ ಹುಡಿಯನ್ನು ಪ್ರತಿ ಹೆಕ್ಟೇರಿಗೆ 25 ಕೆ.ಜಿ. ಯಂತೆ ಧೂಳಿಕರಿಸಬಹುದು. ಮಿಡತೆಗಳ ದಂಡು ರೂಪುಗೊಂಡು ಒಂದು ಹೊಲದಿಂದ ಇನ್ನೊಂದು ಹೊಲಕ್ಕೆ ದಾಳಿ ಇಡುವುದು ಕಂಡು ಬಂದರೆ ಅಪ್ಸರೆ ಕೀಟಗಳನ್ನು ನಾಶಪಡಿಸಲು ಒಣ ಹುಲ್ಲನ್ನು ಅಥವಾ ಸಸ್ಯವಶೇಷಗಳನ್ನು ಉರಿಸಿ ನಾಶಪಡಿಸಬಹುದು.
ಮಿಡತೆಗಳ ಹಾವಳಿ ಹೆಚ್ಚಾದ ಸಮಯದಲ್ಲಿ ಬಿತ್ತುವ ಮುಂಚೆ ಹೊಲದ ಸುತ್ತಲು ಎರಡು ಅಗಲದ ಹಾಗೂ ಎರಡು ಅಡಿ ಆಳದ ಕಾಲುವೆಯನ್ನು ತೋಡಿ, ಅದಕ್ಕೆ ಶೆ. 1.5 ರ ಕ್ವಿನಾಲ್ ಫಾಸ್ ಅಥವಾ ಶೇ. 1.5 ರ ಕ್ಲೋರ್‍ಪೈರಿಫಾಸ್ ಅಥವಾ ಶೇ. 2 ರ ಮಿಥೈಲ್ ಫೆರಾಥಿಯಾನ್ ಹುಡಿಯನ್ನು ಧೂಳಿಕರಿಸಬಹುದು ಹಾಗೂ ಅಥವಾ ನೀರನ್ನು ನಿಲ್ಲುವ ಹಾಗಿ ಸುರಿಯುವುದು. ಮಿಡತೆ ದಂಡು ಬೇಸಾಯ ಕ್ರಮಕ್ಕೆ ಒಳಪಡದ ಕ್ಷೇತ್ರದಲ್ಲಿ ಇಳಿದಾಗ ಹಾಗೂ ಹಾನಿ ಕಂಡುಬಂದಾಗ [ಹುಡಿ 1.5 ರ ಕ್ವಿನಾಲ್ ಫಾಸ್ ಅಥವಾ ಶೇ. 1.5 ರ ಕ್ಲೋರೋಪ್ಲೈರಿಫಾಸ್ ಅಥವಾ ಶೆ. 2 ರ ಮಿಥೈಲ್ ಫೆರಾಥಿಯಾನ್] ಹುಡಿಯನ್ನು ಪ್ರತಿ ಹೆಕ್ಟೇರಿಗೆ 25 ಕೆ.ಜಿ. ಯಂತೆ ಧೂಳಿಕರಿಸುವಂತಹ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಜಂಟಿ ಇಲಾಖೆಯ ಕೃಷಿ ನಿರ್ದೇಶಕ ರಾಜಶೇಖರ ಐ.ಬಿ ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರಜ್ಞ ಡಾ.ಎಸ್.ಎಮ್.ಜಾಧವ ಹಾಗೂ ಸಹ ವಿಸ್ತರ್ಣಾ ನಿರ್ದೇಶಕ ಡಾ.ಪಿ.ಎಸ್.ಹೂಗಾರ ಅವರು ಮಿಡತೆಗಳ ಜೀವನ ಚಕ್ರದ ಬಗ್ಗೆ ತಿಳಿಸಿ, ನಿರ್ವಹಣೆ ಕುರಿತು ಸಭೆಯಲ್ಲಿ ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಮಹ್ಮದ ಜುಬೇರ, ಜಿಲ್ಲಾ ನಗರಾಭಿವೃಧಿ ಕೋಶದ ಯೋಜನಾನಿರ್ದೇಶಕ ವಿನಾಯಕ ಪಾಲನಕರ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ.ರಾಮಚಂದ್ರ ಕೆ.ಎಂ., ತಹಶೀಲ್ದಾರರಾದ ಡಾ.ಸಂತೋಷ ಬಿರಾದಾರ, ಅಮರೇಶ ಪಮ್ಮಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ನವೀನ್ ಹುಲ್ಲೂರ, ಕೋಟ್ರೇಶ ಮತ್ತು ಸಹಾಯಕ ಕೃಷಿ ನಿರ್ದೇಶಕರಾದ ಸಿ.ಜಿ. ಮೇತ್ರಿ ಸೇರಿದಂತೆ ಕೃಷಿ ಇಲಾಖೆಯ ವಿವಿಧ ತಾಲೂಕಾ ಸಹಾಯಕ ಕೃಷಿ ನಿರ್ದೇಶಕರು, ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ತಜ್ಞರು ಸಭೆಯಲ್ಲಿ ಭಾಗವಹಿಸಿದರು.