ಮೀನುಗಾರ ಸಮಯದಾಯ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಬದ್ದ ಸಿಎಂ

*ಮೀನುಗಾರ ಮಹಿಳೆಯರಿಗೆ ನೀಡುವ ಸಹಾಯಧನವನ್ನು ಪುರುಷರಿಗೂ ನೀಡಬೇಕು ಎನ್ನುವ ಬೇಡಿಕೆ ಬಗ್ಗೆ ಪರಿಶೀಲನೆ*

*ಮೀನುಗಾರಿಕೆ ವಿಶ್ವ ವಿದ್ಯಾಲಯ ಮಾಡುವ ಬಗ್ಗೆ ಮುಂದಿನ ವರ್ಷ ವಿಚಾರ ಮಾಡಲಾಗುವುದು: ಸಿಎಂ ಭರವಸೆ*

*ಮೀನುಗಾರ ಸಮಯದಾಯ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ದವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ*

*ನಾವೆಲ್ಲಾ ಮೀನುಗಾರ ಸಮುದಾಯದ ಪರವಾಗಿ ಇದ್ದೇವೆ. ನಿಮ್ಮ ಆಶೀರ್ವಾದ ನಮಗಿರಲಿ*

ಬೆಂಗಳೂರು : ಮೀನುಗಾರ ಸಮಯದಾಯ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ಮೀನುಗಾರರಿಗೆ ಮತ್ಸ್ಯವಾಹಿನಿ ಪರಿಸರ ಸ್ನೇಹಿ ತ್ರಿಚಕ್ರ ವಾಹನಗಳನ್ನು ವಿತರಿಸಿದ ಬಳಿಕ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮೀನುಗಾರಿಕೆ ವಿಶ್ವ ವಿದ್ಯಾಲಯ ಮಾಡುವ ಬಗ್ಗೆ ಮುಂದಿನ ವರ್ಷ ವಿಚಾರ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಮೀನು ನಮ್ಮ ಆಹಾರ ಸಂಸ್ಕೃತಿಯ ಪ್ರಮುಖ ಭಾಗ. ಅತ್ಯಂತ ಆರೋಗ್ಯಕಾರಿ ಆಹಾರ. ಮೀನಿನ‌ ಸಂತತಿ ಮತ್ತು ಪ್ರಮಾಣವನ್ನು ಹೆಚ್ಚಿಸಲು ನಮ್ಮ ಸರ್ಕಾರ ಅಗತ್ಯ ಎಲ್ಲಾ ನೆರವನ್ನೂ ನೀಡುತ್ತದೆ ಎಂದು ಭರವಸೆ ನೀಡಿದರು.

ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗಿನಿಂದಲೂ ಅಧಿವೇಶನದಲ್ಲಿ ಹೋರಾಟ ನಡೆಸಿದ್ದೆ. ಆದರೂ ಹಿಂದಿನ ಸರ್ಕಾರ ಮತ್ತು ಸರ್ಕಾರದಲ್ಲಿದ್ದ ಸಚಿವರು ಪರಿಹಾರ ಒದಗಿಸಲೇ ಇಲ್ಲ. ರಿಯಾಯ್ತಿ ಡೀಸೆಲ್ ಕೊಡುವಂತೆ ನಾವು ಅಧಿವೇಶನದಲ್ಲಿ ಹೋರಾಟ ಮಾಡಿದರೂ ಸರ್ಕಾರ ಕೊಡಲಿಲ್ಲ. ಹೀಗಾಗಿ ನಾವು ಅಧಿಕಾರಕ್ಕೆ ಬಂದ ಬಳಿಕ ಬೇಡಿಕೆ ಈಡೇರಿಸಿದ್ದೇವೆ. ಮೀನುಗಾರ ಸಮುದಾಯದ ಮಹಿಳೆಯರಿಗೆ ನೀಡಲಾಗುತ್ತಿದ್ದ 50 ಸಾವಿರ ರೂಪಾಯಿ ಸಹಾಯ ಧನವನ್ನು 3 ಲಕ್ಷಕ್ಕೆ ಏರಿಸಿದ್ದು ನಮ್ಮ ಸರ್ಕಾರ. ಮುಂದಿನ ವರ್ಷದಿಂದ ಮೀನುಗಾರ ಸಮುದಾಯಕ್ಕೆ ಮನೆ ಕಟ್ಟಿಸಿಕೊಡುವ ಕೆಲಸ ಆರಂಭವಾಗುತ್ತದೆ ಎಂದು ವಿವರಿಸಿದರು.

1977 ರಲ್ಲಿ ದೆಹಲಿಯಲ್ಲಿ ಹತ್ತಾರು ದೇಶಗಳ ಮೀನುಗಾರ ಸಮುದಾಯದ ಪ್ರತಿನಿಧಿಗಳು ಸಮುದಾಯದ ಹಿತಕ್ಕಾಗಿ ಮೊದಲ ಸಭೆ ನಡೆಯಿತು. ಅಲ್ಲಿಂದ ಪ್ರತಿವರ್ಷ ವಿಶ್ವ ಮೀನುಗಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.

ಮೀನುಗಾರ ಸಮುದಾಯದ ಜತೆ ನೇರ ಸಂಪರ್ಕದಲ್ಲಿದ್ದು ಅವರ ಸಮಸ್ಯೆಗಳನ್ನು ಆಲಿಸಿ ಎಲ್ಲಾ ಸಮಸ್ಯೆಗಳಿಗೂ ಕಾಲಮಿತಿಯಲ್ಲಿ ಪರಿಹಾರ ಒದಗಿಸಲು ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.

 

ಮೀನುಗಾರಿಕೆ ಮತ್ತು ಬಂದರು ಸಚಿವರಾದ ಮಂಕಾಳ ಎಸ್ ವೈದ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರ ಮೀನುಗಾರ ಸಮುದಾಯಕ್ಕೆ ಮತ್ತು ಸಮುದಾಯದ ಮಕ್ಕಳಿಗೆ ನೀಡಿರುವ ಸರ್ಕಾರದ ಸವಲತ್ತುಗಳನ್ನು ವಿವರವಾಗಿ ಹೆಸರಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ , ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.