ಮುಖ್ಯಮಂತ್ರಿ ನಂಬಿಕೆ ಉಳಿಸಿಕೊಳ್ಳುವ ಸಚಿವ ಎಸ್ಟಿಎಸ್

ಕೋವಿಡ್ ಬಗ್ಗೆ ಭಯ ಬಿಡಿ; ಸಚಿವ ಎಸ್ ಟಿ ಎಸ್ ಕಿವಿಮಾತು

  • ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಕಾರ್ಪೋರೇಟರ್ ಗಳ ಸಭೆ
  • ಜನರೊಂದಿಗೆ ಸರ್ಕಾರ ಸದಾ ಇದೆ, ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ

ಬೆಂಗಳೂರು: ಕೋವಿಡ್ ಸಂಬಂಧ ಮೊದಲು ಭಯಗೊಳ್ಳುವುದನ್ನು ಬಿಡಬೇಕು. ಪಾಸಿಟಿವ್ ಬಂದವರೂ ಗುಣಮುಖರಾಗುತ್ತಾರೆ. ಭಯವೇ ಅರ್ಧ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಈ ನಿಟ್ಟಿನಲ್ಲಿ ಭಯ ಬಿಡಿ. ಜೊತೆಗೆ ಮಾಸ್ಕ್ , ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಸಹಕಾರ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜರಾಜಶ್ವರಿ ನಗರ ವಲಯದ ಕೋವಿಡ್ 19 ನಿಯಂತ್ರಣ ಉಸ್ತುವಾರಿಗಳಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಆರ್ ಆರ್ ನಗರದ ಶೇಷಾದ್ರಿಪುರ ಕಾಲೇಜಿನಲ್ಲಿ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಕೆಂಗೇರಿ ವಿಭಾಗದ ಕಾರ್ಪೋರೇಟರ್ ಗಳ ಸಭೆಯಲ್ಲಿ ಮಾತನಾಡಿ, ಸುಮಾರು 3500 ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಮಾಸ್ಕ್, ವೈದ್ಯಕೀಯ ಕಿಟ್ ಸೇರಿ ಅಗತ್ಯ ಸೌಕರ್ಯವನ್ನು ನೀಡಲಾಗುತ್ತಿದೆ. ಇನ್ನು ಸಾರ್ವಜನಿಕರಲ್ಲೂ ಯಾರು ಧರಿಸುತ್ತಿಲ್ಲವೋ ಅಂಥವರನ್ನು ಗುರುತುಸಿ ಮಾಸ್ಕ್ ವಿತರಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.

ಏನೇ ಸಮಸ್ಯೆಗಳಿದ್ದರೂ ಗಮನಕ್ಕೆ ತನ್ನಿ, ಈಗಾಗಲೇ ಗಮನಕ್ಕೆ ತರಲಾದ ವಿಷಯಗಳನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು. ಜನರು ಏನೇ ಮಾತನಾಡಿದರೂ ಬೇಸರ ಮಾಡಿಕೊಳ್ಳಬಾರದು, ಅವರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ಅವರ ಜೊತೆ ಸಮಾಧಾನದಿಂದ ಮಾತನಾಡಿದರೆ ಕೊನೇ ಪಕ್ಷ ಶೇ. 50ರಷ್ಟು ಸಮಸ್ಯೆಗಳು ಬಗೆಹರಿದಂತೆಯೇ ಲೆಕ್ಕ ಎಂದು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.

ಕೋವಿಡ್ ಗೆ ಸಂಬಂಧಪಟ್ಟಂತೆ ಈಗಾಗಲೇ ಕಾರ್ಪೊರೇಟರ್ ಗಳು, ಮುಖಂಡರನ್ನೊಳಗೊಂಡ ಸಭೆಗಳನ್ನು ಮಾಡಿದ್ದೇನೆ. ಪ್ರತಿ ಮನೆಗೂ ಸೌಲಭ್ಯ ಸಿಗಬೇಕೆಂಬ ನಿಟ್ಟಿನಲ್ಲಿ ಕಾರ್ಯನಿರ್ವಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಮುಖ್ಯಮಂತ್ರಿಗಳ ನಂಬಿಕೆ ಉಳಿಸಿಕೊಳ್ಳುವೆ

ಇನ್ನು ರಾಜರಾಜೇಶ್ವರಿ ನಗರ ಸೇರಿದಂತೆ ಯಶವಂತಪುರ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಪ್ರತ್ಯೇಕ ಸಭೆ ಕರೆದು ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಪ್ರತಿ ವಾರ್ಡ್ ಗಳಿಗೂ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂಬಿತ್ಯಾದಿ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದೇನೆ. ಈ ಮೂಲಕ ಮುಖ್ಯಮಂತ್ರಿಗಳು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಕೊರೋನಾ ನಿಯಂತ್ರಣ ಮಾಡುವಲ್ಲಿ ಐಎಎಸ್ ಅಧಿಕಾರಿ ವಿಶಾಲ್ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ನಾನೂ ಸಹ ಇನ್ನು 2 ತಿಂಗಳು ಇಲ್ಲಿಯೇ ಕಾರ್ಯನಿರ್ವಹಿಸುತ್ತೇನೆ ಎಂದು ಸಚಿವರು ತಿಳಿಸಿದರು.

ಇನ್ನು ಯಶವಂತಪುರ ಕ್ಷೇತ್ರದಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಗುಣಮುಖರ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಮುಂಜಾಗ್ರತೆ ವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಸರ್ಕಾರ ಯಾವಾಗಲೂ ಜನರ ಬೆನ್ನಿಗಿದೆ ಎಂದು ಸಚಿವರು ತಿಳಿಸಿದರು.

ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ

ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದವರನ್ನು ಹೋಂ ಕ್ವಾರಂಟೇನ್ ನಲ್ಲಿಡಲಾಗಿದ್ದು, ಅವರ ಕೈಗಳಿಗೆ ಸೀಲ್ ಒತ್ತಲಾಗಿದೆ. ಅವರು 14 ದಿನಗಳ ಕಾಲ ಹೊರ ಬರುವಂತಿಲ್ಲ. ಒಂದು ವೇಳೆ ಪದೇ ಪದೆ ನಿಯಮ ಉಲ್ಲಂಘನೆ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಹೋಂ ಕ್ವಾರಂಟೈನ್ ನಲ್ಲಿ ಇರುವವರನ್ನು ನೋಡಿಕೊಳ್ಳಲು ಒಂದು ತಂಡವನ್ನು ರಚನೆ ಮಾಡಿದ್ದು, ಇವರು ಗೃಹಬಂಧನದಲ್ಲಿರುವವರಿಗೆ ಆಹಾರ, ವೈದ್ಯಕೀಯ ನೆರವಿಗೆ ಶ್ರಮಿಸಲಿದ್ದಾರೆ. ಜೊತೆಗೆ ಯಾವ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಹಾಗೂ ಯ‍ರನ್ನು ಸಂಪರ್ಕ ಮಾಡಬೇಕು ಎಂಬ ಬಗ್ಗೆ ಸದ್ಯದಲ್ಲೆ ಕಿರು ಪುಸ್ತಕವನ್ನು ಹೊರತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ವಾಟ್ಸಪ್ ಗ್ರೂಪ್ ರಚಿಸಿ

ರಾಜರಾಜೇಶ್ವರಿ ನಗರ ವಲಯಕ್ಕೆ ಪ್ರತ್ಯೇಕವಾಗಿ ಸಹಾಯವಾಣಿ ತೆರೆಯಬೇಕು. ಉಚಿತ ಮಾಸ್ಕ್ ಅನ್ನು ವಿತರಣೆ ಮಾಡುವ ಕೆಲಸ ಆಗಬೇಕು. ವಾಟ್ಸಪ್ ಗ್ರೂಪ್ ರಚನೆ ಮಾಡುವುದು, ಫೇಸ್ ಬುಕ್ ಪುಟ ತೆರೆದು ಆ ಮೂಲಕ ಜನರ ಜೊತೆ ಸಂಪರ್ಕದಲ್ಲಿರಬೇಕು ಎಂಬಿತ್ಯಾದಿ ಸಲಹೆಗಳು ಕೇಳಿಬಂದವು.

ಇದೇ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಹಾಗೂ ರಾಜರಾಜೇಶ್ವರಿ ನಗರ ವಲಯ ಕೋವಿಡ್ ನಿಯಂತ್ರಣ ವಿಭಾಗದ ಮುಖ್ಯಸ್ಥರಾದ ವಿಶಾಲ್, ಬಿಬಿಎಂಪಿ ಅಧಿಕಾರಿಗಳು, ವಿವಿಧ ಸ್ವಯಂ ಸೇವಕ ಸಂಘಟನೆಗಳ ಪದಾಧಿಕಾರಿಗಳು ಇದ್ದರು.