ಮೈಸೂರಿನಿಂದ ಪಶ್ಚಿಮ ಬಂಗಾಳಕ್ಕೆ 1520 ಹತ್ತನೇ ರೈಲಿನಲ್ಲಿ ಹೊರಟ ವಲಸಿಗರು

ಅಶೋಕಪುರಂ (ಮೈಸೂರು)ನಿಂದ ಪಶ್ಚಿಮ ಬಂಗಾಳಕ್ಕೆ ಶ್ರಮಿಕ್ ವಿಶೇಷ ರೈಲು
ಮೈಸೂರು ವಿಭಾಗದಿಂದ ಹೊರಟ ಹತ್ತನೇ ‘ಪಾಯಿಂಟ್-ಟು-ಪಾಯಿಂಟ್’ ಶ್ರಮಿಕ್ ವಿಶೇಷ ರೈಲಿನಲ್ಲಿ 1520 ವಲಸಿಗ ಶ್ರಮಿಕರು ಇಂದು 13:00 ಗಂಟೆಗೆ ಅಶೋಕಪುರಂ (ಮೈಸೂರು) ನಿಲ್ದಾಣದಿಂದ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿಗೆ ತೆರಳಿದರು. ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ ಈ ರೈಲನ್ನು ಓಡಿಸಲಾಗುತ್ತಿದೆ. 20 ಎಲ್‌.ಎಚ್‌.ಬಿ. ಬೋಗಿಗಳನ್ನು ಒಳಗೊಂಡ ರೈಲು ಭಾನುವಾರ (31.5.2020) 09:30 ಗಂಟೆಗೆ ನ್ಯೂ ಜಲ್ಪೈಗುರಿ (2617 ಕಿ.ಮೀ) ತಲುಪಲಿದೆ.

ಮೈಸೂರು, ಮಂಡ್ಯ ಮತ್ತು ಹುಣಸೂರಿಗೆ ಸೇರಿದ ನೋಂದಾಯಿತ ವಲಸಿಗರ ದಾಖಲೆಗಳ ತಪಾಸಣೆ ಮತ್ತು ಪರಿಶೀಲನೆಯ ನಂತರ, ರಾಜ್ಯ ಸರ್ಕಾರದ ಅಧಿಕಾರಿಗಳು ರೈಲು ಹತ್ತಲು ಅನುಮತಿಸುವ ಮೊದಲು ಕಡ್ಡಾಯ ‘ಸ್ಕ್ರೀನಿಂಗ್’ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಏತನ್ಮಧ್ಯೆ, ರಾಜ್ಯ ಸರ್ಕಾರವು ನಗರದ ‘ರೋಟರಿ ಕ್ಲಬ್ ಆಫ್ ಮೈಸೂರು’ ಮತ್ತು ‘ಜೈನ ಸಮಾಜ’ದ ಸಹಯೋಗದೊಂದಿಗೆ ಪ್ರಯಾಣಿಕರಿಗೆ ಆಹಾರ ಮತ್ತು ನೀರನ್ನು ಒದಗಿಸಿತು. ಈಗಿರುವ ವ್ಯವಸ್ಥೆಗಳ ಪ್ರಕಾರ, ಐ.ಆರ್.ಸಿ.ಟಿ.ಸಿ.ಯು ರೈಲಿನ ಮಾರ್ಗದಲ್ಲಿರುವ ಮುಂದಿನ ನಿಲ್ದಾಣಗಳಲ್ಲಿ ಇತರೆ ರೈಲ್ವೆ ವಿಭಾಗಗಳ ಸಹಯೋಗದೊಂದಿಗೆ ಪ್ರಯಾಣದ ಉಳಿದ ಭಾಗದಲ್ಲಿ ಆಹಾರದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದೆ.

ಆರು ರೈಲ್ವೆ ಆರಕ್ಷಕ ದಳ (ಆರ್‌ಪಿಎಫ್) ಸಿಬ್ಬಂದಿಗಳು, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಆಯಾ ರಾಜ್ಯ ಸರ್ಕಾರಗಳ ಸರ್ಕಾರಿ ಪೊಲೀಸರೊಂದಿಗೆ ಸಮನ್ವಯ ಸಾಧಿಸಲು ರೈಲಿನ ಕೊನೆಯಿಂದ ಕೊನೆಯವರೆಗೆ ಪ್ರಯಾಣಿಸುತ್ತಾರೆ. ಕಡ್ಡಾಯವಾಗಿ ಮುಖವಾಡಗಳನ್ನು ಧರಿಸಲು ಮತ್ತು ಉನ್ನತ ಗುಣಮಟ್ಟದ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಪ್ರಯಾಣಿಕರಿಗೆ ಹೊರಡುವ ಮೊದಲು ಸೂಚನೆ ನೀಡಲಾಯಿತು.

ನಿನ್ನೆಯೂ ಸಹ (28.5.2020) ಹಾಸನ ಮತ್ತು ಕೊಡಗು ಜಿಲ್ಲೆಗಳಿಂದ ಒಟ್ಟು 1298 ವಲಸಿಗರು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿಗೆ ಮತ್ತೊಂದು ಶ್ರಮಿಕ್ ವಿಶೇಷ ರೈಲಿನಲ್ಲಿ ತೆರಳಿದರು. ಇದು ಮೈಸೂರು ವಿಭಾಗದಿಂದ ಒಂಬತ್ತನೇ ಮತ್ತು ಹಾಸನದಿಂದ ಮೂರನೆಯ ಶ್ರಮಿಕ್ ವಿಶೇಷ ರೈಲು ಆಗಿತ್ತು. ರೈಲ್ವೆ ಮತ್ತು ಕರ್ನಾಟಕ ಸರ್ಕಾರದ ನಿರ್ದೇಶಿತ ಅಧಿಕಾರಿಗಳು ನೋಂದಣಿ ಮತ್ತು ತಪಾಸಣೆಗಾಗಿ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ವಿಶೇಷ ರೈಲಿನ ಸುಗಮ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಿದರು. ಪ್ರಾರಂಭಿಕ ನಿಲ್ದಾಣದಲ್ಲಿ ರಾಜ್ಯ ಸರ್ಕಾರ ಮತ್ತು ರೈಲ್ವೆಯು ವಲಸಿಗರಿಗೆ ಆಹಾರವನ್ನು ಒದಗಿಸಿದರೆ, ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ)ವು ರೈಲು ಗಮ್ಯಸ್ಥಾನ ನಿಲ್ದಾಣವನ್ನು ತಲುಪುವವರೆಗೆ ಆಹಾರ ಪೂರೈಕೆಗಾಗಿ ರೈಲಿನ ಮುಂದಿನ ಮಾರ್ಗದ ವಿವಿಧ ರೈಲ್ವೆ ವಿಭಾಗಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.

ವಲಸಿಗರು ತಮ್ಮ ಮನೆಗಳಿಗೆ ಹಿಂದಿರುಗಲು, ಭಾರತೀಯ ರೈಲ್ವೆಯು ದೇಶಾದ್ಯಂತ ಪ್ರತಿದಿನ ಶ್ರಮಿಕ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಈ ಸೇವೆಯನ್ನು ಪಡೆಯುತ್ತಿರುವ ಕೆಲವು ಜನರು ಈ ಮೊದಲೇ ಕೆಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದು, ಕೋವಿಡ್ – 19 ಜಾಗತಿಕ ಪಿಡುಗಿನ ಸಂದರ್ಭವು ಅವರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಪ್ರಯಾಣ ಮಾಡುವಾಗ ಮೊದಲೇ ಅಸ್ತಿತ್ವದಲ್ಲಿದ್ದ ಆರೋಗ್ಯ ಸಮಸ್ಯೆಗಳಿಂದ ಸಾವು ಸಂಭವಿಸಿದ ಕೆಲವು ದುರದೃಷ್ಟಕರ ಪ್ರಕರಣಗಳು ಘಟಿಸಿವೆ.
17.05.2020 ರ ದಿನಾಂಕದ ಗೃಹ ಸಚಿವಾಲಯದ ಆದೇಶ ಸಂಖ್ಯೆ 40-3 / 2020-ಡಿಎಂ- I (ಎ) ಗೆ ಅನುಗುಣವಾಗಿ, ಕೋವಿಡ್ -19 ರಿಂದ ದುರ್ಬಲ ವ್ಯಕ್ತಿಗಳನ್ನು ರಕ್ಷಿಸುವ ಸಲುವಾಗಿ, ರೈಲ್ವೆ ಸಚಿವಾಲಯವು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ(ಉದಾಹರಣೆಗೆ – ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ-ನಾಳೀಯ ಕಾಯಿಲೆಗಳು, ಕ್ಯಾನ್ಸರ್, ರೋಗನಿರೋಧಕ ಕೊರತೆಯ ಪರಿಸ್ಥಿತಿಗಳು) ವ್ಯಕ್ತಿಗಳು, ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಅನಿವಾರ್ಯವಿಲ್ಲದಿದ್ದಲ್ಲಿ ರೈಲು ಪ್ರಯಾಣವನ್ನು ಮಾಡಬಾರದೆಂದು ಕೋರುತ್ತದೆ.
ಪ್ರಯಾಣದ ಅಗತ್ಯತೆಯಿರುವ ದೇಶದ ಎಲ್ಲಾ ನಾಗರಿಕರಿಗೆ ರೈಲು ಸೇವೆಗಳನ್ನು ಒದಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ಪರಿವಾರ 24 X7 ಕಾರ್ಯನಿರ್ವಹಿಸುತ್ತಿದೆ. ಆದರೆ ನಮ್ಮ ಪ್ರಯಾಣಿಕರ ಸುರಕ್ಷತೆಯು ನಮ್ಮ ದೊಡ್ಡ ಕಾಳಜಿಯಾಗಿದೆ. ಆದ್ದರಿಂದ, ನಾವು ಈ ವಿಷಯದಲ್ಲಿ ಎಲ್ಲಾ ನಾಗರಿಕರ ಸಹಕಾರವನ್ನು ಬಯಸುತ್ತೇವೆ. ಯಾವುದೇ ತೊಂದರೆ ಅಥವಾ ತುರ್ತು ಸಂದರ್ಭದಲ್ಲಿ ದಯವಿಟ್ಟು ನಿಮ್ಮ ರೈಲ್ವೆ ಪರಿವಾರವನ್ನು ಸಂಪರ್ಕಿಸಲು ಹಿಂಜರಿಯಬೇಡಿ ಮತ್ತು ನಾವು ಯಾವಾಗಲೂ ನಿಮಗೆ ಸಹಾಯ ಮಾಡುತ್ತೇವೆ (ಸಹಾಯವಾಣಿ ಸಂಖ್ಯೆ – 139 ಮತ್ತು 138)

ಮೈಸೂರು ವಿಭಾಗವು ಇದುವರೆಗೆ 10 ಶ್ರಮಿಕ್ ವಿಶೇಷ ರೈಲುಗಳ ಸೇವೆಯನ್ನು ಒದಗಿಸಿದ್ದೂ, ಒಟ್ಟು 14,066 ಪ್ರಯಾಣಿಕರಿಗೆ ತಮ್ಮ ಮನೆಗೆ ತಲುಪಲು ಅನುಕೂಲ ಮಾಡಿಕೊಟ್ಟಿರುವುದನ್ನು ಗಮನಿಸಬಹುದು.

ಪ್ರಿಯಾ ಶೆಟ್ಟಿ