ಮೈಸೂರು-ಅರ್ಚಕರ ಸಮಸ್ಯೆ: ಹೋರಾಟದ ಸಿದ್ಧತೆ

 

ಅರ್ಚಕರ ಸಮಸ್ಯೆ: ಹೋರಾಟದ ಸಿದ್ಧತೆ
ಮೈಸೂರಿನಲ್ಲಿ ನಡೆದ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಶ್ರೀವತ್ಸ ಹೇಳಿಕೆ
ದೇವಸ್ಥಾನಕ್ಕೆ ಬರುವ ಭಕ್ತರಿಗೆ ‌ನಗುಮೊಗದಿಂದ ಪೂಜೆ ಮಾಡಿಕೊಡಬೇಕು ಎಂದು  ಅರ್ಚಕರ ಸಂಘದ ಶ್ರೀವತ್ಸ, ಅವರು ತಿಳಿಸಿದರು

ಮೈಸೂರಿನಲ್ಲಿ ಬುಧವಾರ ನಡೆದ ಅರ್ಚಕರ ಸಭೆಯಲ್ಲಿ ಸಂಘದ ಅಧ್ಯಕ್ಷ ಶ್ರೀವತ್ಸ ಮಾತನಾಡಿದರು

ಮೈಸೂರು: ‘ಮುಜರಾಯಿ ದೇವಾಲಯಗಳ ಅರ್ಚಕರು, ಆಗಮಿಕರು ಹಾಗೂ ನೌಕರರ ಸಮಸ್ಯೆ ಗಳನ್ನು ಸರ್ಕಾರದ ಗಮನಕ್ಕೆ ತಂದು, ಪರಿಹಾರ ಕಲ್ಪಿಸುವಂತೆ ಆಗ್ರಹಿಸುವ ಉದ್ದೇಶದಿಂದ ದೊಡ್ಡ ಮಟ್ಟದ ಹೋರಾಟವನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು’ ಎಂದು ರಾಜ್ಯ ಮುಜರಾಯಿ ದೇವಾಲಯಗಳ ಅರ್ಚ ಕರು, ಆಗಮಿಕರು ಹಾಗೂ ನೌಕರರ ಸಂಘದ ಅಧ್ಯಕ್ಷ ಶ್ರೀವತ್ಸ ತಿಳಿಸಿದರು.

ಜಿಲ್ಲಾ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಹಾಗೂ ನೌಕರರ ಸಂಘದಿಂದ ನಗರದ ದಿಗಂಬರ ಜೈನ ಬಸದಿಯಲ್ಲಿ ಬುಧವಾರ ಆಯೋಜಿಸಿದ್ದ ಪದಾಧಿಕಾರಿಗಳ ಮಹಾಸಭೆ ಮತ್ತು ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

‘ದೇವರನ್ನು ‌ಪೂಜಿಸುವ ಅವಕಾಶ ಸಿಗುವ ಅರ್ಚಕರಾಗುವುದು ಪೂರ್ವ ಜನ್ಮದ ಪುಣ್ಯ. ಆದರೆ, ಗ್ರಾಮೀಣ ಪ್ರದೇಶದ ಅರ್ಚಕರು ಬಹಳ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು, ಮದುವೆ ಮಾಡಲು ಬಹಳ ತೊಂದರೆ ಎದುರಿಸುತ್ತಿದ್ದಾರೆ. ರಾಜ್ಯದ 35 ಸಾವಿರ‌ ದೇವಸ್ಥಾನಗಳು ಉಳಿಯಬೇಕಾದರೆ ಅರ್ಚಕರೇ ಕಾರಣ. ಅವರು ನಿತ್ಯವೂ ಬಂದು ಪೂಜೆ ಸಲ್ಲಿಸುತ್ತಿರುವುದರಿಂದ ದೇವಸ್ಥಾನಗಳು ಉಳಿದಿವೆ. ಇಲ್ಲದಿದ್ದರೆ ಒತ್ತುವರಿ ಆಗುತ್ತಿದ್ದವು’ ಎಂದು ತಿಳಿಸಿದರು.

ಗಮನ ಕೊಡುತ್ತಿಲ್ಲ: ‘ಭೂಸುಧಾರಣಾ ಕಾಯ್ದೆಯ ಪರಿಣಾಮ ಅರ್ಚಕರು ಜಮೀನುಗಳನ್ನು ಕಳೆದುಕೊಂಡರು. ಆದರೆ, ಸರ್ಕಾರವು ನಮ್ಮ ಕಡೆಗೆ ಗಮನ ಕೊಡುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಹಿಂದೂ ಧರ್ಮ –ಸಂಸ್ಕೃತಿ ಉಳಿದಿರುವುದಕ್ಕೆ ಅರ್ಚಕರೇ ಕಾರಣ. ಆದರೆ, ಅವರಿಗೆ ಯಾವುದೇ ವೇತನ ಅಥವಾ ಗೌರವ ಸಂಭಾವನೆ ಕೊಡುತ್ತಿಲ್ಲ. ಪೂಜಾ ಸಾಮಗ್ರಿಗೆ ಮಾತ್ರವೇ ಹಣ ನೀಡಲಾಗುತ್ತಿದೆ. ಹೀಗಾಗಿ ವೇತನ ಸೇರಿದಂತೆ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ‌ಹೋರಾಟ ಮಾಡಬೇಕು. ಅರ್ಚಕರೆಲ್ಲರೂ ಒಂದೇ ಜಾತಿ ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ನಮ್ಮನ್ನು ಹೀಯಾಳಿಸುವವರ ವಿರುದ್ಧ ಒಗ್ಗಟ್ಟಾಗಬೇಕು’ ಎಂದು ತಿಳಿಸಿದರು.

‘ಸಂಘದ ಹೋರಾಟದ ಫಲವಾಗಿ ಅರ್ಚಕರಿಗೆ ವಿಮಾ ಸೌಲಭ್ಯ ದೊರೆತಿದೆ. ನಿಧನರಾದರೆ ₹ 2 ಲಕ್ಷ ಪರಿಹಾರ ನೀಡುವಂತೆ, ತಿಂಗಳಿಗೆ ₹ 10ಸಾವಿರ ಗೌರವ ಸಂಭಾವನೆ ನೀಡುವಂತೆ ಕೋರಲಾಗಿದೆ’ ಎಂದು ಹೇಳಿದರು.

‘ತಸ್ತಿಕ್ ಅಥವಾ ನೇಮಕಾತಿ ಸಂದರ್ಭದಲ್ಲಿ ಯಾರಿಗೂ ಹಣ ಕೊಡಬಾರದು’ ಎಂದು ಕೋರಿದ ಅವರು, ‘ಅರ್ಚಕರನ್ನು 65 ವರ್ಷಕ್ಕೆ ನಿವೃತ್ತಿಗೊಳಿಸಬಾರದೆಂದು ಸುಪ್ರೀಂ ಕೋರ್ಟ್‌ ಆದೇಶವಿದೆ’ ಎಂದು ತಿಳಿಸಿದರು.

ಜೈನ ಸಮಾಜದ ಮುಖಂಡ ಸುರೇಶ್ ಕುಮಾರ್ ಜೈನ್ ಮಾತನಾಡಿ, ‘ಜೈನ ಸಮಾಜದ ಬಸದಿಗಳು ಹಾಗೂ ಅರ್ಚಕರ ಸ್ಥಿತಿ ಶೋಚನೀಯವಾಗಿದೆ. ಅರ್ಚಕರಿಗೆ ಪ್ರತಿ ‌ತಿಂಗಳೂ ಹಣ ಬರುವಂತೆ ಮಾಡಬೇಕು. ಭಕ್ತರು ಹಣ ಠೇವಣಿ ಇಟ್ಟು ಅದು ನೇರವಾಗಿ ಅರ್ಚಕರಿಗೆ ಹೋಗುವಂತೆ ವ್ಯವಸ್ಥೆಯಾಗಬೇಕು’ ಎಂದು ಸಲಹೆ ನೀಡಿದರು.

ಮಹಾರಾಜ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲ ಸತ್ಯನಾರಾಯಣ ಮಾತನಾಡಿ, ‘ನಾವು ಪರಕೀಯ ಸಂಪ್ರದಾಯ ಪಾಲಿಸುವುದನ್ನು ನಿಲ್ಲಿಸಬೇಕು. ನಮ್ಮ ಧರ್ಮ-ಸಂಸ್ಕೃತಿಯನ್ನು ಪಾಲಿಸಬೇಕು.‌ ತಂದೆಯ ನಂತರ ಅವರ ಮಕ್ಕಳೂ ಅರ್ಚಕರಾಗಬೇಕು. ಇದಕ್ಕಾಗಿ ಆಗಮಶಾಸ್ತ್ರ ಕಲಿಯಬೇಕು. ಭಗವಂತ ನಮ್ಮನ್ನು ‌ಸೃಷ್ಟಿಸಿರುವುದೇ ಇದೇ ಕೆಲಸಕ್ಕೆ ಎಂಬ ಭಾವನೆ ಬರಬೇಕು. ಅಧಿಕಾರಿಗಳ ಮುಂದೆ ಕೈಕಟ್ಟಿ ನಿಲ್ಲುವಂತಹ ಕೆಲಸಕ್ಕೆ ಕಳುಹಿಸುವುದು ತಪ್ಪಬೇಕು’ ಎಂದರು.

ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಮಾತನಾಡಿ, ‘ದೊಡ್ಡ ದೇವಸ್ಥಾನಗಳಿಗೆ ಕೋಟಿಗಟ್ಟಲೆ ಆದಾಯ ಬರುತ್ತಿದೆ. ಅದರಲ್ಲಿ ಸ್ವಲ್ಪ ಪ್ರಮಾಣವನ್ನು ಸಣ್ಣ ದೇವಸ್ಥಾನಗಳಿಗೆ ಕೊಡುವಂತೆ ಮಾಡಬೇಕು. ಹಾಲು, ತೆಂಗಿನಕಾಯಿ, ಹೂವು ಸೇರಿದಂತೆ ಎಲ್ಲ ಪೂಜಾ ಸಾಮಗ್ರಿಗಳ ಬೆಲೆ ಜಾಸ್ತಿಯಾಗಿರುವುದನ್ನು ಸರ್ಕಾರದ ಗಮನಕ್ಕೆ ತರಬೇಕು. ಚಾಮುಂಡೇಶ್ವರಿ ಬೆಟ್ಟದ ಪ್ರಾಧಿಕಾರ ರಚಿಸಿದರೆ ನಮಗೆ ಕಷ್ಟವಾಗುತ್ತದೆ’ ದೊಡ್ಡ ದೇವಸ್ಥಾನಗಳಿಗೆ ಕೋಟಿಗಟ್ಟಲೆ ಆದಾಯ ಬರುತ್ತಿದೆ. ಅದರಲ್ಲಿ ಸ್ವಲ್ಪ ಪ್ರಮಾಣವನ್ನು ಸಣ್ಣ ದೇವಸ್ಥಾನಗಳಿಗೆ ಕೊಡುವಂತೆ ಮಾಡಬೇಕು. ಹಾಲು, ತೆಂಗಿನಕಾಯಿ, ಹೂವು ಸೇರಿದಂತೆ ಎಲ್ಲ ಪೂಜಾ ಸಾಮಗ್ರಿಗಳ ಬೆಲೆ ಜಾಸ್ತಿಯಾಗಿರುವುದನ್ನು ಸರ್ಕಾರದ ಗಮನಕ್ಕೆ ತರಬೇಕು. ಚಾಮುಂಡೇಶ್ವರಿ ಬೆಟ್ಟದ ಪ್ರಾಧಿಕಾರ ರಚಿಸಿದರೆ ನಮಗೆ ಕಷ್ಟವಾಗುತ್ತದೆ’ ಎಂದು ಹೇಳಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಇಳೈ ಆಳ್ವಾರ್ ಸ್ವಾಮೀಜಿ, ಮೈಸೂರು ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ಶ್ರೇಣಿಕ, ಸನ್ಮತಿ, ಸರ್ವೇಶ,ಕಿರಾಳು ಮಹೇಶ್, ಬಸದಿಯ ಟ್ರಸ್ಟಿ ಮಹೇಶ್ ಪ್ರಸಾದ್ ಇದ್ದರು. ಹಾಗೂ ಇನ್ನಿತರರು ಹಾಜರಿದ್ದರು