ಮೈಸೂರು ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಕ್ರಮ

ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಕ್ರಮ
ಮೈಸೂರು,ಜುಲೈ.13(ಕರ್ನಾಟಕ ವಾರ್ತೆ);- ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಿಸಲು ಅಗತ್ಯವಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರ ಜೊತೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಸಭೆ ನಡೆಸಿ ಚರ್ಚಿಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಮಾತನಾಡಿ, ಸೋಂಕು ಹೆಚ್ಚಾಗಿ ಹರಡುತ್ತಿರುವ ಪ್ರದೇಶಗಳನ್ನು ಗುರುತಿಸಿ ಲಾಕ್‍ಡೌನ್ ಮಾಡಬೇಕು. ನಂತರದಲ್ಲಿ ನಮ್ಮ ತಂಡ ಮನೆಮನೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ಸೋಂಕಿನ ಲಕ್ಷಣ ಕಂಡುಬಂದವರಿಗೆ ಪರೀಕ್ಷೆ ಮಾಡಿಸಲು ಸಲಹೆ ನೀಡುತ್ತಾರೆ ಎಂದು ತಿಳಿಸಿದರು.
ನಗರದಲ್ಲಿ ಎನ್.ಆರ್.ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ರಾಜೇಂದ್ರನಗರ, ಬನ್ನಿಪಂಟಪ ಹಾಗೂ ಶಾಂತಿನಗರ ಸೇರಿದಂತೆ ಅನೇಕ ಕಡೆ ಸೋಂಕು ಹೆಚ್ಚಾಗುತ್ತಿರುವ ಪ್ರದೇಶಗಳನ್ನು ಗುರುತಿಸಿ, ಹತ್ತಿರವಾಗುವಂತೆ ಕೊವೀಡ್ ಪರೀಕ್ಷಾ ಕೇಂದ್ರ ತೆರೆದು ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಇದೇ ಮೊದಲ ಬಾರಿಗೆ ವೈರೆಸ್ ಬೆನ್ನತ್ತಿ ಚಿಕಿತ್ಸೆ ನೀಡಲು ಮೈಸೂರು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಮುಂದಾಗಿದ್ದು, ಈ ಯೋಜನೆ ಯಶಸ್ವಿಯಾಗಿ ಸಾವು, ನೋವುಗಳನ್ನು ತಪ್ಪಿಸಲು ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಡಿಸಿಪಿ ಪ್ರಕಾಶ್‍ಗೌಡ ಅವರು ಮಾತನಾಡಿ, ಜಿಲ್ಲಾಡಳಿತ ಕೈಗೊಳ್ಳುವ ಕ್ರಮಕ್ಕೆ ಪೊಲೀಸ್ ಇಲಾಖೆ ಬದ್ದವಾಗಿದ್ದು, ಲಾಕ್‍ಡೌನ್ ಮಾಡುವ ಪ್ರದೇಶಗಳ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡದರೆ ನಮ್ಮ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ಕೊವೀಡ್-19 ಹರಡುವುದನ್ನು ತಡೆಗಟ್ಟಲು ನಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಜಿಲ್ಲಾ ಪಂಚಾಯತ್ ಸಿಇಒ ಪ್ರಶಾಂತ್ ಕುಮಾತ್ ಮಿಶ್ರಾ, ಪಾಲಿಕೆ ವೈದ್ಯರಾದ ಡಾ.ನಾಗರಾಜು, ಡಾ.ಜಯಂತ್, ಡಿಡಿಪಿಐ ಡಾ.ಪಾಂಡುರಂಗ, ನಗರ ಪಾಲಿಕೆ ಸದಸ್ಯ ಆಯೂಬ್ ಖಾನ್ ಸೇರಿದಂತೆ ಸಮುದಾಯದ ಮುಖಂಡರು ಉಸ್ಥಿತರಿದ್ದರು.