ಮೈಸೂರು ಗಣಪತಿ ಆಶ್ರಮದಲ್ಲಿ ಆಧ್ಯಾತ್ಮಿಕ ರಜೆ ಇರುವ ಭಾವನೆ -ಭಕ್ತರು

Share

ಜೈಗುರುದತ್ತ
ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಯವರ ಜನ್ಮದಿನವಾದ ಇಂದು ಪೂಜ್ಯರ ಪಾದಾರವಿಂದಕ್ಕೆ ನಮನಗಳು.
ನನಗೆ ನೆನಪಿನ ಶಕ್ತಿ ಬಂದಾಗಿನಿಂದ ಇಂದಿನ ತನಕ ಮೇ ತಿಂಗಳ ಕಡೆಯ ವಾರ ಎಂದರೆ ಹಬ್ಬದ ವಾತಾವರಣ, ಸಂಭ್ರಮ, ಸಡಗರ. ಈ ವರ್ಷದಂತಹ ನೀರಸ ದಿನಗಳು ಎಂದು ಕಂಡಿಲ್ಲ. ಸ್ವಾಮೀಜಿ ಯವರ ಜನ್ಮ ದಿನೋತ್ಸವ ಆಚರಿಸಿರುವ ಅನುಭವ ಹೇಳಲಸಾಧ್ಯವೇನೋ.
ಪ್ರತಿ ವರ್ಷ ಮೇ ತಿಂಗಳ ಕಡೆಯ ವಾರ ದತ್ತ ಪೀಠದ ವಿಶೇಷ ಎಂದರೆ ಎಲ್ಲರಿಗೂ ಒಂದು ರೀತಿಯ ಆಧ್ಯಾತ್ಮಿಕ ರಜೆ ಇದ್ದಂತೆ ಎನ್ನಬಹುದು. ಆಶ್ರಮದಲ್ಲಿ ಎಲ್ಲಿ ನೋಡಿದರು ಜನಸ್ತೋಮ, ಬಾಲಕರಿಂದ ಹಿಡಿದು ವೄಧ್ದರ ತನಕ ಎಲ್ಲರ ಮುಖದಲ್ಲೂ ಸಂತಸ, ಸಂಭ್ರಮ. ಇಡೀ ಆಶ್ರಮವೇ ಸಿಂಗರಿಸಿಕೊಂಡಿರುವುದನ್ನು ನೋಡಲು ಎರಡು ಕಣ್ಣು ಸಾಲದು. ಎಲ್ಲ ವಯಸ್ಸಿನವರ ಅಭಿರುಚಿಗೆ ತಕ್ಕಂತಹ ಕಾರ್ಯಕ್ರಮಗಳು, ಮಕ್ಕಳಿಗೆ ಆಟೋಟಸ್ಪರ್ಧೆ, ದಿನನಿತ್ಯ ಕಿವಿಗೆ ಇಂಪುನೀಡುವ ಸಂಗೀತ ಕಾರ್ಯಕ್ರಮಗಳು, ಕಣ್ ಸೆಳೆಯುವ ನೃತ್ಯ ಎಷ್ಟು ನೋಡಿದ್ದೇವೋ. ಸಮಾಜ ಸೇವೆಗಳು ಮಾಡಿರುವುದಕ್ಕೆ ಲೆಕ್ಕವೇ ಇಲ್ಲವೇನೊ. ವಿಧವಿಧ ಭಕ್ಷ್ಯ ಭೋಜನಗಳು ಮನ ಮನಸ್ಸು ಎರಡು ತೃಪ್ತಿ ಹೊಂದುತ್ತಿತ್ತು.
ಇದೆಲ್ಲಕ್ಕಿಂತ ಅವಿಸ್ಮರಣೀಯ ಕ್ಷಣಗಳೆಂದರೆ ಪೂಜ್ಯರ ಸುವರ್ಣ ಸಿಂಹಾಸನಾರೋಹಣ ಮತ್ತು ಪಾದಪೂಜೆ, ಆಶೀರ್ವಚನ. ನಂತರ ಚೈತನ್ಯಾರ್ಚನೆ ಎಲ್ಲಾ ರಂಗದ ವಿದ್ವಾಂಸರ ವಿದ್ಯೆಗೆ ನಡೆಯುತ್ತಿದ್ದ ಅರ್ಚನೆ ನೋಡಲು ಎರಡು ಕಣ್ಣು ಸಾಲದು.
ಇಂತಹ ಮಹೋನ್ನತ ಉತ್ಸವ ಕಂಡ ಕಣ್ಣುಗಳಿಗೆ ಈ ವರ್ಷದ ಜನ್ಮೋತ್ಸವ ನಿಜವಾಗಿಯೂ ನೀರಸ ತಂದಿದೆ ನಿಜವೆ ಆದರೆ ಈ ಭಾರಿಯ ಹುಟ್ಟು ಹಬ್ಬ ಮರೆಯಲಾಗದಂತಹುದು. ಪ್ರತಿ ಭಾರಿ ಒಂದು ವಾರ ಆಚರಿಸುತ್ತಿದ್ದೆವು ಆದರೆ ಈ ಭಾರಿ ಸತತ ಎರಡು ತಿಂಗಳಿನಿಂದ ಆಚರಿಸುತ್ತಿದ್ದೇವೆ. ಸ್ವಾಮೀಜಿ ಯವರು ಸಾವಿರಾರು ಹಸಿದ ಹೊಟ್ಟೆಯನ್ನು ತುಂಬಿಸುತ್ತಿದ್ದಾರೆ, ನೊಂದ ಜೀವಗಳಿಗೆ ಸಾಂತ್ವನ ಹೇಳಿ ಸಮಾಧಾನ ಪಡಿಸುತ್ತಿದ್ದಾರೆ, ನಿತ್ಯವು ಬುದ್ದಿ ಹೇಳಿ ಧೈರ್ಯ ತುಂಬುತ್ತಿದ್ದಾರೆ. ಎಲ್ಲರೂ ಒಬ್ಬರಿಗೊಬ್ಬರು ತನು ಮನ ಧನದಿಂದ ಸಹಾಯ ಮಾಡುವಂತೆ ಮನಸ್ಸು ಶಕ್ತಿ ಯನ್ನು ದತ್ತ ಭಕ್ತರಿಗೆ ನೀಡುತ್ತಿದ್ದಾರೆ. ಸರ್ಕಾರದ ನಿಯಮಗಳನ್ನು ಚಾಚು ತಪ್ಪದಂತೆ ಪಾಲಿಸುಕ್ತ ಭಕ್ತರೂ ಪಾಲಿಸುವಂತೆ ಪ್ರೇರೇಪಿಸುತ್ತಿದ್ದಾರೆ. ಪ್ರಪಂಚದೆಲ್ಲೆಡೆ ಭಕ್ತರು ಸದ್ಗುರು ಆಜ್ಞೆಯಂತೆ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಈ ಕೊರೋನದೊಂದಿಗೆ ಹೋರಾಡಿ ಗೆಲ್ಲುವ ವಿಶ್ವಾಸವನ್ನು ತುಂಬಿದ್ದಾರೆ. ಸದ್ಗುರುಗಳ ಆಶೀರ್ವಾದದಿಂದ ಖಂಡಿತವಾಗಿಯೂ ಇದರಿಂದ ಹೊರಗೆ ಬಂದೇ ಬರುತ್ತೇವೆ.
ಪ್ರತೀಭಾರಿಯ ಜನ್ಮೋತ್ಸವದಂತೆ ಈ ಭಾರಿಯು ಬಹು ದೊಡ್ಡ ಗಾತ್ರದಲ್ಲಿಯೇ, ಅತ್ಯುತ್ತಮ ವಾಗಿಯೆ ಸಾಂದರ್ಭೋಚಿತವಾಗಿ ನೆರವೇರುತ್ತಿದೆ ಎಂದು ಹೆಮ್ಮೆಯಿಂದ ಹೇಳಬೇಕೆನಿಸುತ್ತಿದೆ.
ಸರ್ವಂಸದ್ಗುರುಚರಣಾರವಿಂದಾರ್ಪಣ ಮಸ್ತು.


Share