ಮೈಸೂರು ಜನತೆಯಲ್ಲಿ ಉಸ್ತುವಾರಿ ಸಚಿವರ ಮನವಿ

Share

ಮೈಸೂರು ಜಿಲ್ಲೆ ಮಹಾ ಜನತೆಯಲ್ಲಿ ಮನವಿ
ನಮ್ಮ ಜೀವ ನಮ್ಮ ಹಕ್ಕು; ಇದೇ ನಮ್ಮ-ನಿಮ್ಮೆಲ್ಲರ ಮಂತ್ರವಾಗಲಿ

ಈಗ “ನಮ್ಮ ಜೀವ ನಮ್ಮ ಹಕ್ಕು” ಎಂಬ ಮಂತ್ರ ನಮ್ಮ-ನಿಮ್ಮೆಲ್ಲರದ್ದಾಗಬೇಕು. ದಿನೇ ದಿನೆ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ಪಾತ್ರ ಬಹಳ ಮುಖ್ಯವಾಗುತ್ತದೆ ಎಂಬುದನ್ನು ನಾವು ಒಪ್ಪಿಕೊಳ್ಳೋಣ. ಆದರೆ, ಸಾರ್ವಜನಿಕರ ಸಹಭಾಗಿತ್ವ? ಅದೂ ಸಹ ಅಷ್ಟೇ ಮುಖ್ಯವಲ್ಲವೇ? ಹೌದು, ನೀವಿದ್ದರೆ ನಾವು, ನಾವಿದ್ದರೆ ನೀವು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳೋಣ.

ರಾಜ್ಯದಲ್ಲಿ ಕೊರೋನಾ ಪ್ರಕರಣಗಳನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನಮ್ಮ ಹೆಮ್ಮೆಯ ಮುಖ್ಯಮಂತ್ರಿಗಳಾದ ಮಾನ್ಯ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರದಿಂದಲೇ ಮೆಚ್ಚುಗೆ ವ್ಯಕ್ತವಾಗಿದೆ. ಹಾಗಂತ ಸರ್ಕಾರ ತನ್ನ ಕೆಲಸದ ಬಗ್ಗೆ ಎಲ್ಲೂ ಬೀಗಿಕೊಂಡು ಹೇಳಿಕೊಂಡಿಲ್ಲ. ಈ ಮಹಾಮಾರಿ ನಿಯಂತ್ರಣಕ್ಕೆ ನಿರಂತರವಾಗಿ ಶ್ರಮ ಹಾಕುತ್ತಲೇ ಇದೆ. ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನೂ ಕೈಗೊಂಡಿದೆ. ಇಷ್ಟೆಲ್ಲ ಮಾಡಿದರೂ ಏಕೆ ಹೀಗಾಗುತ್ತಿದೆ..? ಜವಾಬ್ದಾರಿ ಎಂಬುದು ಸರ್ಕಾರಗಳದ್ದು ಮಾತ್ರವೇ..? ಖಂಡಿತಾ ಇಲ್ಲ. ಇಲ್ಲಿ ಸರ್ಕಾರ ಕಾನೂನನ್ನು ಹೇಳಬಹುದು, ಹೇರಬಹುದು… ಆದರೆ, ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ, ಪಾಲನೆ ಮಾಡುವಲ್ಲಿ ನಾಗರಿಕರ ಜವಾಬ್ದಾರಿ ತುಂಬಾ ಮುಖ್ಯ. ಅದಕ್ಕೇ ನಾನು ಹೇಳುತ್ತಿರುವುದು “ನಮ್ಮ ಜೀವ ನಮ್ಮ ಹಕ್ಕು” ಎಂಬ ಮಂತ್ರ ನಮ್ಮ-ನಿಮ್ಮೆಲ್ಲರದ್ದಾಗಬೇಕು. ಯಾವಾಗ ಹಕ್ಕು ಎಂಬ ಅಂಶ ಬರುತ್ತದೋ ಆಗ ಮಾತ್ರ ಜವಾಬ್ದಾರಿಯ ಅರಿವಾಗುತ್ತದೆ.

ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜಾಪ್ರಭುತ್ವ ಇದೆ. ಅಂದರೆ, ನಮ್ಮ ಸಂವಿಧಾನದಲ್ಲೇ ಹೇಳಿದ ಹಾಗೆ ಪ್ರಜೆಗಳ ಪಾತ್ರ ಬಹಳ ದೊಡ್ಡದು. ಇಲ್ಲಿ ಸರ್ಕಾರವನ್ನು ರಚಿಸಲು ಮಾತ್ರ ನಾಗರಿಕರ ಜವಾಬ್ದಾರಿಯನ್ನು ಹೇಳಲಾಗಿಲ್ಲ. ಪ್ರತಿ ನಡೆಯಲ್ಲೂ ನಾಗರಿಕರ ಪಾತ್ರ ಬಹಳ ಮುಖ್ಯ. ಒಂದು ಸರ್ಕಾರವನ್ನು ರಚನೆ ಮಾಡುವುದರಿಂದ ಹಿಡಿದು ಅದನ್ನು ಉರುಳಿಸುವ ಶಕ್ತಿಯುಳ್ಳ ಪ್ರಜಾಪತಿಗಳಾಗಿರುವ ನಾಗರಿಕರಲ್ಲಿ ಈಗಲೂ ಶಕ್ತಿ ಇದೆ. ಒಮ್ಮತ ಪ್ರದರ್ಶಿಸಿದರೆ ಕೊರೋನಾ ಮುಕ್ತ ಮಾಡುವರು ಎಂಬ ನಂಬಿಕೆ ನನಗಿದೆ. ಆದರೆ, ಇಚ್ಛಾಶಕ್ತಿಯನ್ನು ತೋರಬೇಕಷ್ಟೇ. ಎಲ್ಲದಕ್ಕೂ ಸರ್ಕಾರವನ್ನು ಬೊಟ್ಟು ಮಾಡಿದರೆ ಆದೀತೆ? ಹೀಗಾಗಿ ಜವಾಬ್ದಾರಿಯುತ ಪ್ರಜೆಗಳು ಮಾಡಬೇಕಾದ ಕರ್ತವ್ಯವನ್ನು ಅನುಸರಿಸಬೇಕಾಗುತ್ತದೆ.

ಇನ್ನು ಮೈಸೂರಿನಲ್ಲಿ ಪರಿಸ್ಥಿತಿ ಈಗ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮತ್ತವರ ತಂಡ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಇದರಲ್ಲಿ ಜನಪ್ರತಿನಿಧಿಗಳು, ಪೊಲೀಸ್ ಇಲಾಖೆ, ವೈದ್ಯಾಧಿಕಾರಿಗಳು, ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ, ಪೌರ ಕಾರ್ಮಿಕರು, ಆಶಾಕಾರ್ಯಕರ್ತೆಯರು, ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಬಹುಮುಖ್ಯವಾಗಿ ನಾಗರಿಕರು ಬಹಳ ತಾಳ್ಮೆಯಿಂದ ಸಹಕಾರ ನೀಡಿರುವುದು ಶ್ಲಾಘನೀಯ. ಮುಂದೂ ಸಹ ಇದೇ ರೀತಿ ಸಹಕಾರ ನೀಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ. ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಡ ಮಾಸದ ಆಚರಣೆ ಪ್ರಾರಂಭವಾಗಿದೆ. ಆದರೆ, ಈ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಕೈಗೊಳ್ಳಲಾಗಿರುವ ನಿರ್ಧಾರಕ್ಕೆ ಎಲ್ಲರೂ ಬೆಂಬಲ ಸೂಚಿಸಿದ್ದೀರಿ. ಇದಕ್ಕಾಗಿ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವನಾಗಿ ನಾನು ಆಬಾರಿಯಾಗಿದ್ದೇನೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ನಾನು ಈ ಸಂದರ್ಭದಲ್ಲಿ ಪ್ರಾರ್ಥನೆ ಮಾಡಿಕೊಳ್ಳುವೆ.

ಮುಖ್ಯಮಂತ್ರಿಗಳಿಗೆ ಅಭಿನಂದನೆ
ಈಗಾಗಲೇ ಒಂದು ಸುತ್ತಿನ ಲಾಕ್ಡೌನ್ನಿಂದ ದೇಶ ಸೇರಿದಂತೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹೀಗಿದ್ದರೂ ಶನಿವಾರ ಸಹ ಸರ್ಕಾರಿ ಕಚೇರಿಗಳಿಗೆ ರಜೆ ಕೊಡುವುದು, ರಾತ್ರಿ 8ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿಗೊಳಿಸಿರುವುದು, ಎಸ್ಸೆಸ್ಸೆಲ್ಸಿ ಪರೀಕ್ಷೆ ಬಳಿಕ ಮತ್ತಷ್ಟು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಮುಖ್ಯಮಂತ್ರಿಗಳ ಈ ಕ್ರಮವನ್ನು ನಾನು ಅಭಿನಂದಿಸುತ್ತೇನೆ.

ನಾಗರಿಕರ ಪಾತ್ರ ದೊಡ್ಡದು
ಈಗ ಕೊರೋನಾ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲವೊಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು, ಇದನ್ನು ಅಕ್ಷರಶಃ ಪಾಲನೆ ಮಾಡಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಹೀಗಾಗಿ ಈ ಕ್ರಮಗಳನ್ನು ಅನುಸರಿಸೋಣ.
• ಪ್ರತಿದಿನ ರಾತ್ರಿ 8 ಗಂಟೆ ನಂತರ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ವೇಳೆ ಮಾತ್ರವೆಂದಲ್ಲ, ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಹೊರ ಹೋಗಿ.
• ಪ್ರತಿ ಶನಿವಾರ ಹಾಗೂ ಭಾನುವಾರ ಸರ್ಕಾರಿ ಕಚೇರಿಗಳಿಗೂ ರಜೆ ಕೊಡಲಾಗಿದೆ. ಇದರರ್ಥ ನಿಮ್ಮೆಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವುದು. ಜೊತೆಗೆ ಈ ದಿನಗಳಲ್ಲಿ ಯಾರೂ ಹೊರಬಾರದು ಎಂಬ ಮನವಿಯೂ ಅಡಗಿದೆ. ಈ ನಿಟ್ಟಿನಲ್ಲಿ ಬದ್ಧತೆಯನ್ನು ಪ್ರದರ್ಶಿಸಬೇಕು.
• ಇನ್ನು ನನ್ನನ್ನು ಸೇರಿದಂತೆ ಜನಪ್ರತಿನಿಧಿಗಳನ್ನು ಭೇಟಿ ಮಾಡಲು ಗುಂಪು ಕಟ್ಟಿಕೊಂಡು ಬರುವುದು ಬೇಡ. ತೀರಾ ಅನಿವಾರ್ಯತೆ ಇದ್ದರೆ ಮಾತ್ರ ಕಚೇರಿಗಳಿಗೆ ಬರುವುದು.
• ಮನೆ ಬಾಗಿಲಿನಿಂದ ಹೊರಗೆ ಕಾಲಿಡಬೇಕೆಂದಿದ್ದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿಕೊಳ್ಳಿ, ಜೊತೆಗೆ ಯಾವಾಗಲೂ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಜೇಬಿನಲ್ಲಿಟ್ಟುಕೊಳ್ಳಿ
• ಬಹುಮುಖ್ಯವಾಗಿ ಎಲ್ಲೇ ಹೋಗುವ, ಏನೇ ಮಾಡುವ ಸಂದರ್ಭ ಎದುರಾದರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಮರೆಯಬೇಡಿ.

ಎಸ್.ಟಿ.ಸೋಮಶೇಖರ್
ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು


Share