ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳನ್ನು ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪುನರ್ ಅವಲೋಕನ ರಾಜ್ಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಛೇರಿ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಬಾಬಾಸಾಹೇಬರು ಪ್ರತಿಪಾದಿಸಿದ ಸಿದ್ಧಾಂತಗಳ ಮೇಲೆ ದಾಳಿಯು ನಿರಂತರವಾಗಿ ನಡೆಯುತ್ತಲೇ ಇದೆ. ಅವರ ಬರಹ ಹಾಗೂ ಹೇಳಿಕೆಗಳನ್ನು ತಿರುಚಿ ಸಮಾಜದಲ್ಲಿ ವಿಷ ಬೀಜ ಬಿತ್ತುವ ಕಾರ್ಯವನ್ನು ಮನುವಾದಿಗಳು ನಿರಂತರವಾಗಿ ಮಾಡುತ್ತಲೇ ಬರುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಮುಂಬೈ ನಿವಾಸ ರಾಜಗೃಹದ ಮೇಲೆ ನಡೆದಿರುವ ದಾಳಿ ಅಮಾನವೀಯ ಎಂದು ಖಂಡಿಸಿದರು. ಅವರು ಕೇವಲ ಒಂದು ಜನಾಂಗ, ವರ್ಗದವರಿಗೆ ಸೀಮಿತರಾಗದೆ ದೇಶದ ಎಲ್ಲ ಜನಾಂಗದ ಏಳಿಗೆಗಾಗಿ ದುಡಿದಿದ್ದಾರೆ. ಇದನ್ನರಿಯದೇ ಪದೇ ಪದೇ ಅವಮಾನ ಮಾಡಿ ವಿಕೃತಿ ಮೆರೆಯುತ್ತಿರುವುದು ಸರಿಯಲ್ಲ.ಭಾರತ ಭಾಗ್ಯವಿಧಾತನ ಕುಟುಂಬ ಪ್ರಾಣಭೀತಿಯಲ್ಲಿದೆ. ಈ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯ. ಆನಂದ್ ತೇಲ್ತುಂಬ್ಡೆ ಸೇರಿದಂತೆ ಅಂಬೇಡ್ಕರ್ ಕುಟುಂಬದ ಸದಸ್ಯರಿಗೆ ಯಾವುದೇ ಧಕ್ಕೆಯಾದರೆ ಅದಕ್ಕೆ ಸರ್ಕಾರವೇ ಹೊಣೆ. ದೇಶವನ್ನು ನಡೆಸುತ್ತಿರುವ ಸರ್ಕಾರವೇ ಈ ಕೃತ್ಯದ ನೇರ ಹೊಣೆಯನ್ನು ಹೊರಬೇಕಾಗುತ್ತದೆ. ಕೂಡಲೇ ಸರ್ಕಾರ ದಾಳಿ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆ ವಿಧಿಸುವುದರ ಮೂಲಕ ಅವರನ್ನು ದೇಶದ್ರೋಹದ ಮೇಲೆ ದೇಶದಿಂದಲೇ ಗಡಿಪಾರು ಮಾಡುವುದರ ಮೂಲಕ ಮುಂದೆ ಇಂತಹ ಘಟನೆಗಳು ನಡೆಯದಂತೆ ಅಂಬೇಡ್ಕರ್ ನಿವಾಸದ ಸುತ್ತಮುತ್ತ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಡಾ.ಆಲಗೂಡು ಚಂದ್ರಶೇಖರ್, ರಾಜ್ಯ ಸಂಚಾಲಕ ಹರಿಹರ ಆನಂದಸ್ವಾಮಿ, ನಗರ ಸಂಚಾಲಕ ಅಶೋಕಪುರಂ ಫೈಲ್ವಾನ್ ಕೃಷ್ಣ, ಆರ್ಟಿಸ್ಟ್ ಎಸ್.ನಾಗರಾಜು, ಡಿ.ಎನ್.ಬಾಬು, ಚಕ್ರಪಾಣಿ, ಮೈಸೂರು ಮಹದೇವು, ಕೆಂಪಯ್ಯನಹುಂಡಿ ಆರ್ ರಾಜು, ಎನ್.ಪಿ ಗುರುಮೂರ್ತಿ, ಮನೋಜ್, ರಾಜಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.