ಮೈಸೂರು ಜಿಲ್ಲೆಯಲ್ಲಿ ಧಾರ್ಮಿಕ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಅನುಮತಿ

625
Share

ಜೂನ್ 8 ರಿಂದ ಧಾರ್ಮಿಕ ಕೇಂದ್ರ ತೆರೆಯಲು ಅನುಮತಿ

ಮೈಸೂರು, ಜೂನ್.6(ಕರ್ನಾಟಕ ವಾರ್ತೆ):- ಮೈಸೂರು ಜಿಲ್ಲಾ ವ್ಯಾಪ್ತಿಯ ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳು, ಆಧ್ಯಾತ್ಮಿಕ ಕೇಂದ್ರಗಳನ್ನು ಜೂನ್ 08 ರಿಂದ  ಷರತ್ತಿಗೆ ಒಳಪಟ್ಟು ತೆರೆಯಲು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಅನುಮತಿ ನೀಡಿದ್ದಾರೆ.
ಮೈಸೂರು ಜಿಲ್ಲಾಧಿಕಾರಿಗಳು ಕರ್ನಾಟಕ ಸಾಂಕ್ರಾಮಿಕ ರೋಗಗಳು ಕೋವಿಡ್-19 ರೆಗ್ಯೂಲೇಷನ್-2020ರ ನಿಯಮ 12 ರಲ್ಲಿ ಹಾಗೂ disaster management act 2005  ಕಲಂ 30(2) ಮತ್ತು 34 ರಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಈ ಆದೇಶ ಹೊರಡಿಸಿದ್ದಾರೆ.
ಈ ಧಾರ್ಮಿಕ ಕೇಂದ್ರಗಳನ್ನು ತೆರೆಯುವುದರಿಂದ ಆಗಬಹುದಾದ ಸೋಂಕು ಹರಡುವುದನ್ನು ತಡೆಗಟ್ಟಲು ಹಲವಾರು ಷರತ್ತುಗಳನ್ನು ಅವರು ವಿಧಿಸಿದ್ದಾರೆ. ಕಂಟೈನ್‍ಮೆಂಟ್ ವಲಯಗಳಲ್ಲಿ ಕಂಡುಬರುವ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳು, ಆಧ್ಯಾತ್ಮಿಕ ಕೇಂದ್ರಗಳನ್ನು ತೆರೆಯುವಂತಿಲ್ಲ. ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳು, ಆಧ್ಯಾತ್ಮಿಕ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರುವುದರಿಂದ ಅಂತಹ ಪ್ರದೇಶಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಂಡು ಮುಖಗವಸನ್ನು ತಪ್ಪದೇ ಧರಿಸಬೇಕು ಹಾಗೂ ದೇವಾಲಯಗಳಲ್ಲಿ ಸೋಪ್‍ನಿಂದ ಕೈತೊಳೆಯಲು ಹಾಗೂ ಆಲ್ಕೊಹಾಲ್ ಇರುವ ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸಲು ವ್ಯವಸ್ಥೆ ಮಾಡಬೇಕು. ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮತ್ತು ಮೂಗನ್ನು ಕಡ್ಡಾಯವಾಗಿ ಹ್ಯಾಂಡ್ ಕರ್ಚಿಪ್ ಅಥವಾ ಮೊಣಕೈಯಿಂದ ಮುಚ್ಚಿಕೊಳ್ಳಬೇಕು.
 ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳು, ಆಧ್ಯಾತ್ಮಿಕ ಕೇಂದ್ರಗಳ ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್ ನೀಡಲು ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಬೇಕು ಹಾಗೂ ಸ್ಮಾರ್ಟ್‍ಫೋನ್ ಹೊಂದಿರುವವರು ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಅನ್ನು ಹೊಂದಿರಬೇಕು. ದೇವಾಲಯಗಳಲ್ಲಿ ಕೋವಿಡ್-19 ವೈರಾಣು ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಶಾಶ್ವತ ಫಲಕ ಅಳವಡಿಸುವುದು ಹಾಗೂ ವಿಡಿಯೋ-ಆಡಿಯೋ ಕ್ಲಿಪ್‍ಗಳ ಮೂಲಕ ಪ್ರಚಾರ ಮಾಡಬೇಕು.
ಭಕ್ತಾಧಿಗಳು ತಮ್ಮ ಶೂ, ಚಪ್ಪಲಿಗಳನ್ನು ಅವರು ಬಂದಿರುವ ವಾಹನದಲ್ಲೇ ಬಿಡಬೇಕು. ಕುಟುಂಬದವರು ಚಪ್ಪಲಿಗಳನ್ನು ಅವರೇ ಪ್ರತ್ಯೇಕವಾಗಿ ಇಡುವ ವ್ಯವಸ್ಥೆ ಮಾಡಬೇಕು.  ಪಾರ್ಕಿಂಗ್ ಸ್ಥಳ ಹಾಗೂ ಹೊರಗೆ ಗುಂಪು ಗೂಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಗತÀ್ಯ ವ್ಯವಸ್ಥೆ ಮಾಡಬೇಕು. ಕ್ಯೂ ಲೈನ್‍ನಲ್ಲಿ ಆರು ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕ್ರಮ ವಹಿಸಬೇಕು. ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು.
ದೇವಾಲಯ ಪ್ರವೇಶಕ್ಕೂ ಮುಂಚೆ ಸಾರ್ವಜನಿಕರಿಗೆ ಸೋಪಿನಿಂದ ಕೈ ಹಾಗೂ ಕಾಲು ತೊಳೆಯಲು ವ್ಯವಸ್ಥೆ ಮಾಡಬೇಕು. ವಿಗ್ರಹಗಳು ಹಾಗೂ ಪವಿತ್ರ ಗ್ರಂಥಗಳನ್ನು ಮುಟ್ಟುವುದನ್ನು  ನಿಷೇಧಿಸಲಾಗಿದೆ. ಧಾರ್ಮಿಕ ಸಭೆ, ಸಮಾರಂಭಗಳು, ಜಾತ್ರೆಗಳು, ಉತ್ಸವಗಳನ್ನು ಆಯೋಜಿಸುವುದನ್ನು ಹಾಗೂ ಪರಸ್ಪರ ಸಂಪರ್ಕಿಸುವುದನ್ನು ನಿಷೇಧಿಸಿದೆ. ದೇವಾಲಯದಲ್ಲಿ ಸಾಮೂಹಿಕವಾಗಿ ಹಾಡಲು ಅವಕಾಶವಿರುವುದಿಲ್ಲ. ಸಾಮೂಹಿಕವಾಗಿ ಕೂರಲು ನೆಲಹಾಸು ಬಳಸಬಾರದು. ಭಕ್ತಾದಿಗಳು ಅವರ ಸ್ವಂತ ನೆಲಹಾಸು ಬಟ್ಟೆಯನ್ನು ತಂದು ಹೋಗುವಾಗು ವಾಪಸ್ ಕೊಂಡೊಯ್ಯಬೇಕು.
ಧಾರ್ಮಿಕ ಸ್ಥಳಗಳನ್ನು ಕ್ರಿಮಿನಾಶಕ ಬಳಸಿ ಆಗಾಗ್ಗೆ ಶುಚಿಗೊಳಿಸಬೇಕು. ಭಕ್ತಾದಿಗಳು ಹಾಗೂ ನೌಕರರು ಬಳಸಿ ಬಿಟ್ಟು ಹೋಗುವ ಮಾಸ್ಕ್ ಹಾಗೂ ಗ್ಲೌಸ್‍ಗಳನ್ನು ಕ್ರಮಬದ್ಧವಾಗಿ ನಾಶಗೊಳಿಸುವುದು. ಉಸಿರಾಟದ ತೊಂದರೆ, ಜ್ವರ, ಕೆಮ್ಮು, ನೆಗಡಿಗಳಂತಹ ರೋಗ ಲಕ್ಷಣಗಳು ಕಂಡುಬಂದರೇ ಅಂತಹ ವ್ಯಕ್ತಿಗಳಿಗೆ ದೇವಾಲಯದ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸೇವೆಗಳಿಗೆ ಅವಕಾಶವಿರುವುದಿಲ್ಲ. ದರ್ಶನಕ್ಕೆ ಬರುವವರು ಹೂ, ಹಣ್ಣು, ಕಾಯಿ ಮುಂತಾದ ಪೂಜಾ ಸಾಮಗ್ರಿಗಳನ್ನು ತರಲು ಅವಕಾಶವಿರುವುದಿಲ್ಲ. ಹಾಗೂ ಪ್ರಸಾದ, ತೀರ್ಥ ನೀಡಲು ಹಾಗೂ ಪ್ರೋಕ್ಷಿಸಲು ಅವಕಾಶವಿರುವುದಿಲ್ಲ.
. 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಹಾಗೂ 10 ವರ್ಷ ಕೆಳಗಿನ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಪ್ರವೇಶ ನಿಷೇಧಿಸಲಾಗಿದೆ. ದೇವಾಲಯದ ವಸತಿಗೃಹದಲ್ಲಿ ತಂಗಲು ಅವಕಾಶವಿರುವುದಿಲ್ಲ. ಅಲ್ಲದೆ ಸದ್ಯದ ಮಟ್ಟಿಗೆ ದಾಸೋಹ ನಡೆಸಲು ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ತಿಳಿಸಿದ್ದಾರೆ.


Share